ಅರುಣಾಚಲ ಪ್ರದೇಶದಲ್ಲಿ ಡಿಒ-228 ನಾಗರಿಕ ವಿಮಾನಗಳ ನಿಯೋಜನೆಗೆ ಅಲಯನ್ಸ್ ಏರ್ ಜೊತೆ ಎಚ್ಎಎಲ್ ಒಪ್ಪಂದ

Update: 2021-09-26 14:30 GMT

ಬೆಂಗಳೂರು,ಸೆ.26: ಭಾರತದ ಪ್ರಾದೇಶಿಕ ಸಂಪರ್ಕ ಯೋಜನೆಯನ್ನು ಉತ್ತೇಜಿಸಲು ಅರುಣಾಚಲ ಪ್ರದೇಶದಲ್ಲಿ ಪ್ರಾದೇಶಿಕ ಕಾರ್ಯಾಚರಣೆಗಳಿಗಾಗಿ ಎರಡು ಡಿಒ-228 ನಾಗರಿಕ ವಿಮಾನಗಳ ಪೂರೈಕೆಗಾಗಿ ಅಲಯನ್ಸ್ ಏರ್ ಜೊತೆ ಲೀಸ್ ಒಪ್ಪಂದವೊಂದನ್ನು ಮಾಡಿಕೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಎಚ್ಎಎಲ್ ರವಿವಾರ ತಿಳಿಸಿದೆ.


ಸರ್ವತೋಮುಖ ಸಾಮರ್ಥ್ಯ ಹೊಂದಿರುವ ಎಚ್ಎಎಲ್ ಡಿಒ-228 ವಿಮಾನವು ಈಶಾನ್ಯ ಭಾರತದಲ್ಲಿ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ಕಡಿಮೆ ದೂರದಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿರುವ ಅದು ಅರೆಸಿದ್ಧಗೊಂಡ ರನ್ವೇಗಳಲ್ಲೂ ಕಾರ್ಯ ನಿರ್ವಹಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಬೆಳವಣಿಗೆಯು ಎಚ್ಎಎಲ್ಗೆ ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಹೊಸ ಅವಕಾಶವನ್ನು ತೆರೆದಿದ್ದು, ದೇಶದಲ್ಲಿಯ ವಿಮಾನಯಾನ ಸಂಸ್ಥೆಗಳು ಎಚ್ಎಎಲ್ ಡಿಒ-228 ವಿಮಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವಂತೆ ಮಾಡುವ ಮೂಲಕ ಪ್ರಾದೇಶಿಕ ನಾಗರಿಕ ವಾಯುಯಾನದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಹೆಚ್ಚಿಸಿಕೊಳ್ಳಲು ಕಂಪನಿಯು ಉತ್ಸುಕಗೊಂಡಿದೆ ಎಂದು ಹೇಳಿಕೆಯು ತಿಳಿಸಿದೆ.

ಕಾನ್ಪುರ ಎಚ್ಎಎಲ್ನ ಸಾರಿಗೆ ವಿಮಾನ ವಿಭಾಗದ ಜನರಲ್ ಮ್ಯಾನೇಜರ್ ಅಪೂರ್ವ ರಾಯ್ ಮತ್ತು ಅಲಯನ್ಸ್ ಏರ್ ಇಂಜಿನಿಯರಿಂಗ್ ಮುಖ್ಯಸ್ಥ ಅರುಣಕುಮಾರ ಬನ್ಸಾಲ್ ಅವರು ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿಗಳನ್ನು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು, ಪ್ರದೇಶದಲ್ಲಿಯ ಭೌಗೋಳಿಕ ಸವಾಲುಗಳನ್ನು ಪರಿಗಣಿಸಿದರೆ ಇಂದು ರಾಜ್ಯದ ಪಾಲಿಗೆ ಮಹತ್ವದ ದಿನವಾಗಿದ್ದು, ಸಂಪರ್ಕ ಈಗ ಸುಲಭವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News