ಇಸ್ರೇಲ್ ಪಡೆಗಳಿಂದ ದಾಳಿ: ಕನಿಷ್ಠ ನಾಲ್ವರು ಪೆಲೆಸ್ತೀನ್‌ ಪ್ರಜೆಗಳು ಮೃತ್ಯು

Update: 2021-09-26 14:49 GMT

ರಮಲ್ಲ, ಸೆ.26: ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ಮತ್ತು ಜೆರುಸಲೇಂ ಪ್ರದೇಶದಲ್ಲಿ ಇಸ್ರೇಲ್ ತಡರಾತ್ರಿ ನಡೆಸಿದ ಸೇನಾ ಕಾರ್ಯಾಚರಣೆ ಮತ್ತು ಆ ಬಳಿಕ ನಡೆದ ಘರ್ಷಣೆಯಲ್ಲಿ ಕನಿಷ್ಟ 4 ಪೆಲೆಸ್ತೀನ್ ನಾಗರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಸಿರುವ ಇಸ್ರೇಲ್ ಸೇನೆ, ಹಮಾಸ್ ಕಾರ್ಯಕರ್ತರನ್ನು ಬಂಧಿಸಲು ಸೇನಾ ಕಾರ್ಯಾಚರಣೆ ಸಂದರ್ಭ ನಡೆದ ಸಶಸ್ತ್ರ ಘರ್ಷಣೆಯಿಂದ ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ. ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ ಜೆರುಸಲೇಂನ ವಾಯವ್ಯದಲ್ಲಿರುವ ಬಿಡ್ಡು ಎಂಬ ಗ್ರಾಮದ ನಿವಾಸಿಗಳಾದ ಅಹ್ಮದ್ ಝಹ್ರಾನ್, ಮಹ್ಮೂದ್ ಹಮೈದನ್ ಮತ್ತು ಝಕರಿಯಾ ಬದ್ವಾನ್, ಬುರ್ಖ್ವಿನ್ ಗ್ರಾಮದ ನಿವಾಸಿ ಒಸಾಮ ಸೊಬೊಹ್ ಮೃತರಾಗಿದ್ದಾರೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆಯ ವಕ್ತಾರರು ದೃಢಪಡಿಸಿದ್ದಾರೆ. 

ಇನ್ನೋರ್ವ ಪೆಲೆಸ್ತೀನ್ ಪ್ರಜೆ ಮೃತರಾಗಿರುವ ವರದಿ ಇದುವರೆಗೆ ದೃಢಪಟ್ಟಿಲ್ಲ ಎಂದವರು ಹೇಳಿದ್ದಾರೆ. ಬಿಡ್ಡು ಗ್ರಾಮದಲ್ಲಿ ಮೃತಪಟ್ಟವರ ಮೃತದೇಹಗಳು ಇಸ್ರೇಲ್ ಸೇನೆಯ ವಶದಲ್ಲಿವೆ. ಬುರ್ಖ್ವಿನ್ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿದೆ ಎಂದು ಸ್ಥಳೀಯರು ಹೇಳಿರುವುದಾಗಿ ಅಲ್ಜಝೀರಾ ವರದಿ ಮಾಡಿದೆ.

ಬುರ್ಖ್ವಿನ್ ಗ್ರಾಮದಲ್ಲಿ ಇಸ್ರೇಲ್ ಸೇನೆ ಮನೆಯೊಂದನ್ನು ಸುತ್ತುವರಿದಾಗ ನಡೆದ ಸಂಘರ್ಷದಲ್ಲಿ ಒಸಾಮ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಅಹ್ಮದ್ ಝಹ್ರಾನ್ ಮನೆಯ ಮೇಲೆ ಈ ಹಿಂದೆಯೂ ಹಲವು ಬಾರಿ ಇಸ್ರೇಲ್ ಸೇನೆ ದಾಳಿ ನಡೆಸಿ ಝಹ್ರಾನ್ ಗಾಗಿ ಶೋಧ ನಡೆಸಿದ್ದು ಮನೆಯವರನ್ನು ವಿಚಾರಣೆಯ ನೆಪದಲ್ಲಿ ಹಿಂಸಿಸಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಸೇನೆಯ ಕಾರ್ಯಾಚರಣೆಗೆ ಪೆಲೆಸ್ತೀನಿಯನ್ ಅಥಾರಿಟಿ(ಪಿಎ) ನೆರವಾಗುತ್ತಿದೆ ಎಂದು ಝಹ್ರಾನ್ ರ ತಾಯಿ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News