ಕೊಯಂಬತ್ತೂರು: ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ದೌರ್ಜನ್ಯ,ವಾಯುಪಡೆ ಅಧಿಕಾರಿ ಬಂಧನ

Update: 2021-09-26 16:45 GMT

ಕೊಯಂಬತ್ತೂರು(ತ.ನಾಡು),ಸೆ.26: ಮಹಿಳಾ ಅಧಿಕಾರಿಯೋರ್ವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ದೂರಿಕೊಂಡಿದ್ದು, ಭಾರತೀಯ ವಾಯುಪಡೆಯ 26ರ ಹರೆಯದ ಫ್ಲೈಟ್ ಲೆಫ್ಟಿನಂಟ್ ಓರ್ವನನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ತಾನು ಸಲ್ಲಿಸಿದ್ದ ದೂರಿನ ಕುರಿತು ವಾಯುಪಡೆಯು ಕೈಗೊಂಡಿರುವ ಕ್ರಮವು ತನಗೆ ತೃಪ್ತಿಯನ್ನುಂಟು ಮಾಡಿಲ್ಲ,ಹೀಗಾಗಿ ಪೊಲೀಸ್ ದೂರು ಸಲ್ಲಿಸುವುದು ತನಗೆ ಅನಿವಾರ್ಯವಾಗಿದೆ ಎಂದು 27ರ ಹರೆಯದ ಮಹಿಳಾ ಅಧಿಕಾರಿ ತಿಳಿಸಿದ್ದಾರೆ.

ಕೊಯಿಮತ್ತೂರಿನ ರೆಡ್‌ಫೀಲ್ಡ್ಸ್‌ನಲ್ಲಿರುವ ಏರ್‌ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿಗೆ ತರಬೇತಿಗೆಂದು ತೆರಳಿದ್ದ ಮಹಿಳೆ,ಆಟವಾಡುವಾಗ ತಾನು ಗಾಯಗೊಂಡಿದ್ದೆ,ಹೀಗಾಗಿ ತನ್ನ ಕೋಣೆಯಲ್ಲಿ ಮಲಗಲು ತೆರಳುವ ಮುನ್ನ ಔಷಧಿಯನ್ನು ತೆಗೆದುಕೊಂಡಿದ್ದೆ. ತನಗೆ ಎಚ್ಚರವಾದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.

ವಾಯುಪಡೆಯು ತನ್ನ ದೂರನ್ನು ನಿರ್ವಹಿಸಿದ ಬಗ್ಗೆ ಮಹಿಳೆ ಅಸಮಾಧಾನವನ್ನು ವ್ಯಕ್ತಪಡಿಸಿದ ಮೇಲಷ್ಟೇ ತಾವು ದೂರನ್ನು ಸ್ವೀಕರಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ನಗರದ ಗಾಂಧಿಪುರಂ ಪೊಲೀಸ್ ಠಾಣೆಯ ಮಹಿಳಾ ತಂಡವು ಆರಂಭಿಕ ತನಿಖೆಯನ್ನು ನಡೆಸಿದೆ. ಜಿಲ್ಲಾ ನ್ಯಾಯಾಧೀಶರ ಎದುರು ಶರಣಾಗಿದ್ದ ಬಂಧಿತ ಅಧಿಕಾರಿ ಛತ್ತೀಸ್‌ಗಡ ಮೂಲದವನಾಗಿದ್ದು, ಆತನ್ನು ಉದುಮಲಪೇಟ್ ಜೈಲಿಗೆ ರವಾನಿಸಲಾಗಿದೆ.

ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪೊಲೀಸರು ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News