ಐಸ್‌ಲ್ಯಾಂಡ್ ಸಂಸತ್ ಚುನಾವಣೆ: ಮಹಿಳೆಯರ ಮೇಲುಗೈ

Update: 2021-09-26 16:47 GMT

ರಿಕ್‌ಜಾವಿಕ್, ಸೆ.26: ಉತ್ತರ ಅಟ್ಲಾಂಟಿಕ್ ದ್ವೀಪ ರಾಷ್ಟ್ರ ಐಸ್‌ಲ್ಯಾಂಡ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿರುವ ಸಂಸತ್ತು ಅಸ್ತಿತ್ವಕ್ಕೆ ಬರಲಿದೆ.


63 ಸ್ಥಾನಗಳಿರುವ ಸಂಸತ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ರವಿವಾರ ಮುಕ್ತಾಯಗೊಂಡಿದ್ದು 33 ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಲಿಂಗಸಮಾನತೆಯ ನಿಟ್ಟಿನಲ್ಲಿ ಪ್ರಮುಖ ಮೈಲುಗಲ್ಲನ್ನು ಸ್ಥಾಪಿಸಿದಂತಾಗಿದೆ. ಪ್ರಧಾನಿ ಕ್ಯಾತ್ರಿನ್ ಜಾಕೊಬ್ಸ್ ಡೊಟಿರ್ ನೇತೃತ್ವದ ನಿರ್ಗಮಿತ ಸಮ್ಮಿಶ್ರ ಸರಕಾರದ ಭಾಗವಾಗಿದ್ದ 3 ಪಕ್ಷಗಳು ಒಟ್ಟಾಗಿ 37 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಳೆದ ಬಾರಿಗಿಂತ 2 ಸ್ಥಾನ ಹೆಚ್ಚು ಪಡೆದಿದ್ದು ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

ಚುನಾವಣೆಯಲ್ಲಿ 10 ಪಕ್ಷಗಳು ಸ್ಪರ್ಧಿಸಿದ್ದು ಎಡಪಂಥೀಯ ಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿತ್ತು. ಸೆಂಟರ್-ರೈಟ್ ಇಂಡಿಪೆಂಡೆನ್ಸ್ ಪಕ್ಷ 16 ಸ್ಥಾನಗಳಲ್ಲಿ ಗೆದ್ದಿದ್ದು ಇದರಲ್ಲಿ 7 ಮಹಿಳೆಯರು. ಸೆಂಟ್ರಿಸ್ಟ್ ಪ್ರೋಪಕ್ಷ 13 ಸ್ಥಾನ ಗಳಿಸಿದೆ. ಚುನಾವಣೆಗೂ ಮುನ್ನ ಈ 2 ಪಕ್ಷಗಳು ಹಾಗೂ ಕ್ಯಾತ್ರಿನ್ ಅವರ ಗ್ರೀನ್ ಪಕ್ಷ ಸೇರಿ ಮೈತ್ರಿಕೂಟ ರಚಿಸಿಕೊಂಡಿದ್ದು ಕ್ಯಾತ್ರಿನ್ ಪಕ್ಷದ ಹಲವು ಪ್ರಮುಖರು ಪರಾಭವಗೊಂಡಿದ್ದರೂ ಪಕ್ಷ 8 ಸ್ಥಾನಗಳಲ್ಲಿ ಜಯ ಸಾಧಿಸಲು ಶಕ್ತವಾಗಿದೆ.

ನೂತನ ಸಂಸತ್ ಸದಸ್ಯರಲ್ಲಿ 72 ವರ್ಷದ ತೋಮಸ್ ಟೊಮಾಸನ್ ಹಿರಿಯರಾಗಿದ್ದರೆ 21 ವರ್ಷದ ಕಾನೂನು ವಿದ್ಯಾರ್ಥಿನಿ, ಕುರ್ಡಿಷ್ ವಲಸಿಗರ ಪುತ್ರಿ ಲೆನ್ಯಾ ರುನ್ ಕರೀಮ್ ಅತ್ಯಂತ ಕಿರಿಯ ಸಂಸದೆಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News