ತಾಲಿಬಾನಿಗಳನ್ನು ನಾಚಿಸಿದ ಅಸ್ಸಾಂ ಪೊಲೀಸರ ಕ್ರೌರ್ಯ

Update: 2021-09-27 06:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದ ಭಯೋತ್ಪಾದನೆಯ ಕುರಿತಂತೆ ಪ್ರಧಾನಿ ಮೋದಿಯವರು ಕಳವಳ ವ್ಯಕ್ತಪಡಿಸುತ್ತಿರುವಾಗಲೇ, ಇತ್ತ ನಮ್ಮದೇ ದೇಶದ ಅಸ್ಸಾಮಿನಲ್ಲಿ ನಡೆದ ಭೀಕರ ಕ್ರೌರ್ಯಕ್ಕೆ ವಿಶ್ವ ಬೆಚ್ಚಿ ಬಿದ್ದಿದೆ. ಸ್ವತಃ ತಾಲಿಬಾನ್‌ಗಳೇ ನಾಚುವಂತಹ ಹಿಂಸಾಚಾರ ಪೊಲೀಸರ ನೇತೃತ್ವದಲ್ಲೇ ನಡೆದಿದ್ದರೂ, ಆ ಬಗ್ಗೆ ಈ ದೇಶದ ಗೃಹ ಸಚಿವರಾಗಲಿ, ಬಿಜೆಪಿಯ ನಾಯಕರಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಫ್ಘಾನಿಸ್ತಾನದಲ್ಲಿರುವುದು ಸರ್ವಾಧಿಕಾರಿ ಸರಕಾರ. ಆದರೆ, ಪ್ರಜಾಸತ್ತಾತ್ಮಕವಾದ ಸರಕಾರ ಹೊಂದಿದ್ದೂ, ಭಾರತದಲ್ಲಿ ಅಮಾಯಕ ಕೂಲಿ ಕಾರ್ಮಿಕರ ವಿರುದ್ಧ ಪೊಲೀಸರಿಂದ ಭೀಕರ ‘ಭಯೋತ್ಪಾದನೆ’ ನಡೆಯುತ್ತದೆಯಾದರೆ, ಈ ದೇಶದ ಪ್ರಧಾನಿಗೆ ಇನ್ನೊಂದು ದೇಶದ ಭಯೋತ್ಪಾದನೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೆ ಎಂಬ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
  
ಕಳೆದ ಶುಕ್ರವಾರ ಅಕ್ರಮ ನಿವಾಸಿಗಳನ್ನು ತೆರವುಗೊಳಿಸುವ ಹೆಸರಿನಲ್ಲಿ ಅಸ್ಸಾಮಿನ ಪೊಲೀಸರು ಅಲ್ಲಿನ ರೈತಾಪಿ ಜನರ ಮೇಲೆ ಕ್ರೌರ್ಯದ ಪರಮಾವಧಿಯನ್ನು ಮೆರೆದಿದ್ದ್ದರು. ಶಸ್ತ್ರಾಸ್ತ್ರಗಳ ಜೊತೆಗೆ ನುಗ್ಗಿದ ಪೊಲೀಸರು ಅಲ್ಲಿನ ನಿವಾಸಿಗಳ ಮೇಲೆ ಬರ್ಬರ ದೌರ್ಜನ್ಯಗಳನ್ನು ಎಸಗಿದರು. ತೆರವು ಕಾರ್ಯಾಚರಣೆಯನ್ನು ಪ್ರತಿಭಟಿಸಿದ ಓರ್ವ ಕೂಲಿ ಕಾರ್ಮಿಕನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಷ್ಟೇ ಅಲ್ಲ, ಕೆಳಗುರುಳಿದ ಆತನಿಗೆ ಓರ್ವ ಸರಕಾರಿ ಛಾಯಾಚಿತ್ರಗ್ರಾಹಕ ತುಳಿಯುತ್ತಿರುವ ಭೀಕರ ದೃಶ್ಯವನ್ನು ಕಂಡು ಇಡೀ ವಿಶ್ವವೇ ದಂಗು ಬಡಿದು ಹೋಯಿತು. ಈ ಭೀಕರ ಕ್ರೌರ್ಯವನ್ನು ಕಂಡಾಗ, ಪೊಲೀಸರು ತೆರವು ಕಾರ್ಯಾಚರಣೆಯ ಉದ್ದೇಶವನ್ನಷ್ಟೇ ಹೊಂದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲಿರುವ ಬಡ ರೈತ, ಕೂಲಿಕಾರ್ಮಿಕರಲ್ಲಿ ಬಹುತೇಕ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿರುವುದರಿಂದಲೇ ಪೊಲೀಸರು ಬರ್ಬರ ದೌರ್ಜನ್ಯವನ್ನು ಎಸಗಿದ್ದಾರೆ. ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ, ಬಂಧನ ಕೇಂದ್ರ, ಸಿಎಎ ಮೊದಲಾದವುಗಳ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ನಡೆಸಿದ ಹಿಂಸಾ ರಾಜಕೀಯದ ಮುಂದುವರಿದ ಭಾಗವಿದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ.

‘ತೆರವು ಕಾರ್ಯವನ್ನು ಪ್ರತಿಭಟಿಸಿರುವುದೇ’ ಅಸ್ಸಾಮಿನ ನಿವಾಸಿಗಳು ಮಾಡಿರುವ ಮಹಾಪರಾಧ. ಇದನ್ನೇ ಮುಂದಿಟ್ಟು ಸಶಸ್ತ್ರ ಪಡೆ ನಕ್ಸಲ್ ಉಗ್ರರ ಮೇಲೆ ಎರಗಿದಂತೆ ಅವರ ಮೇಲೆ ದಾಳಿ ನಡೆಸಿತು. ಇಷ್ಟಕ್ಕೂ ಪೊಲೀಸರು ತೆರವುಗೊಳಿಸಲು ಹೊರಟಿರುವ ಸುಮಾರು 800ಕ್ಕೂ ಅಧಿಕ ಕುಟುಂಬಗಳು ಬಾಂಗ್ಲಾದ ಅಕ್ರಮ ವಲಸಿಗರಲ್ಲ. ತಲೆತಲಾಂತರದಿಂದ ಅಲ್ಲಿ ಬದುಕಿಕೊಂಡು ಬಂದವರು. ಬ್ರಹ್ಮಪುತ್ರಾ ನದಿಯ ಪ್ರವಾಹ, ಭೂಸವೆತ ಇತ್ಯಾದಿ ಕಾರಣಗಳಿಂದಾಗಿ ತಮ್ಮ ಸ್ವಂತ ಜಮೀನನ್ನು ಕಳೆದುಕೊಂಡು ಅನಿವಾರ್ಯವಾಗಿ ಸ್ಥಳಾಂತರಗೊಂಡವರು. ಅವರು ಅಲ್ಲೇ ಹುಟ್ಟಿದವರು ಎನ್ನುವ ದಾಖಲೆಗಳು ಅವರಲ್ಲಿವೆ. ಇದೀಗ ಅವರು ವಾಸಿಸುತ್ತಿರುವ ಭೂಮಿ ಅಕ್ರಮವಾದುದು ಎನ್ನುವ ನೆಪವನ್ನು ಮುಂದೊಡ್ಡಿ ಅಷ್ಟೂ ಕುಟುಂಬಗಳನ್ನು ಅಲ್ಲಿಂದ ಬಲವಂತವಾಗಿ ಎಬ್ಬಿಸಲು ಪೊಲೀಸರನ್ನು ಬಳಸುತ್ತಿದೆ. ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು? ಎನ್ನುವುದು ನಿವಾಸಿಗಳ ಪ್ರಶ್ನೆ. ಆ ಬಡ ರೈತಾಪಿ ಕುಟುಂಬಗಳನ್ನು ಅಸಹಾಯಕತೆಗೆ ತಳ್ಳಿ, ಅವರನ್ನು ಪ್ರತಿಭಟನೆಗೆ ಪ್ರಚೋದಿಸಿ ಬಳಿಕ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಅಲ್ಲಿ ನಡೆದಿರುವುದು ಸರಕಾರಿ ಪ್ರಾಯೋಜಕತ್ವದ ಜನಾಂಗೀಯ ಹಿಂಸೆ. ಇತ್ತೀಚೆಗೆ ಅಫ್ಘಾನಿಸ್ತಾನವನ್ನು ಕೈವಶಮಾಡಿಕೊಳ್ಳುವಾಗ ತಾಲಿಬಾನ್ ಕೂಡ ಇಂತಹ ಕ್ರೌರ್ಯವನ್ನು ಮೆರೆದಿರಲಿಲ್ಲ. ಪೊಲೀಸರ ಹಿಂಸೆಗೆ ನಾಲ್ವರು ಮೃತಪಟ್ಟಿದ್ದಾರೆ ಮಾತ್ರವಲ್ಲ, ಹಲವರು ಗಾಯಗೊಂಡಿದ್ದಾರೆ. ತೆರವು ಕಾರ್ಯಾಚರಣೆ ಭಾಗಶಃ ಪೂರ್ತಿಯಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಅಮಾಯಕ ಕಾರ್ಮಿಕನ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಮತ್ತು ಆ ಬಳಿಕ ಛಾಯಾಗ್ರಾಹಕನೊಬ್ಬ ಮೃತದೇಹದ ಮೇಲೆ ಪ್ರದರ್ಶಿಸಿದ ಕ್ರೌರ್ಯಕ್ಕೆ ಪೊಲೀಸರು ತಮ್ಮದೇ ಆದ ಸಮರ್ಥನೆಗಳನ್ನು ನೀಡಿದ್ದಾರೆ. ಕಾರ್ಮಿಕ ದೊಣ್ಣೆಯ ಜೊತೆಗೆ ನಮ್ಮ ಮೇಲೆ ದಾಳಿ ನಡೆಸಲು ಬಂದಾಗ, ಆತನಿಗೆ ಗುಂಡಿಕ್ಕಿದೆವು ಎಂದು ಪೊಲೀಸರು ಹೇಳುತ್ತಿದ್ದಾರೆ. ನೂರಾರು ಸಶಸ್ತ್ರಧಾರಿ ಪೊಲೀಸರೆಡೆಗೆ ಓರ್ವ ದೊಣ್ಣೆ ಹಿಡಿದುಕೊಂಡು ಬಂದ ಎನ್ನುವ ಕಾರಣಕ್ಕಾಗಿ ಆತನಿಗೆ ಗುಂಡಿಕ್ಕಲು ಸಾಧ್ಯವೇ? ಆತನನ್ನು ತಡೆಯುವುದಕ್ಕೆ ಯಾವುದೇ ಮಾರ್ಗಗಳಿರಲಿಲ್ಲವೇ? ಪೊಲೀಸರ ಕೈಯಲ್ಲಿ ಕೋವಿಯಿದೆ ಎಂದು ಗೊತ್ತಿದ್ದರೂ ದೊಣ್ಣೆ ಹಿಡಿದು ಆ ಪ್ರತಿಭಟನಾಕಾರ ನುಗ್ಗುತ್ತಾನೆ ಎಂದಾದರೆ, ಆತನ ಅಸಹಾಯಕತೆ, ಹತಾಶೆ, ನೋವು ಯಾವ ಪ್ರಮಾಣದಲ್ಲಿರಬಹುದು? ಆತನನ್ನು ಆ ಸ್ಥಿತಿಗೆ ನೂಕಿದವರು ಯಾರು? ಇದೇ ಸಂದರ್ಭದಲ್ಲಿ ಗುಂಡೇಟು ತಿಂದು ನೆಲದ ಮೇಲೆ ಬಿದ್ದ ಆ ಬಡ ಕಾರ್ಮಿಕನ ಎದೆಗೆ ತುಳಿಯಲು ಛಾಯಾಗ್ರಾಹಕನಿಗೆ ಅನುಮತಿ ನೀಡಿದವರು ಯಾರು? ಒಬ್ಬ ಛಾಯಾಗ್ರಾಹಕನೇ ಆ ಮಟ್ಟಿಗೆ ಕ್ರೌರ್ಯವನ್ನು ಮೆರೆಯಬಲ್ಲನಾದರೆ, ಕೈಯಲ್ಲಿ ಕೋವಿ ಹಿಡಿದ ಪೊಲೀಸರು ಯಾವ ಮಟ್ಟಿಗೆ ಕ್ರೌರ್ಯವನ್ನು ಮೆರೆದಿರಬಹುದು? ಸತ್ತು ಬಿದ್ದ ವ್ಯಕ್ತಿಗೆ ತುಳಿಯಬೇಕಾದರೆ, ಆ ಛಾಯಾಗ್ರಾಹಕನ ಎದೆಯೊಳಗೆ ಅದೆಷ್ಟು ದ್ವೇಷವಿರಬೇಕು? ಈ ದ್ವೇಷದ ಹಿಂದಿರುವುದು ಕೋಮುವಾದಿ ಮನಸ್ಥಿತಿ. ಅವಕಾಶ ಸಿಕ್ಕಿದರೆ ಅವನು ಮಾತ್ರವಲ್ಲ, ಪತ್ರಿಕಾ ಮನೆಯೊಳಗೆ ಕೂತು ಅಕ್ಷರಗಳಲ್ಲಿ ದ್ವೇಷ ಕಾರುವ ಇತರ ಸಭ್ಯ ಪತ್ರಕರ್ತರೂ ಇಂತಹದೇ ಕೃತ್ಯವನ್ನು ಎಸಗಬಲ್ಲರು ಎನ್ನುವುದನ್ನು ಇದು ಹೇಳುತ್ತದೆ.

ಭಾರತದ ಪಾಲಿಗೆ ಇಂತಹ ಕ್ರೌರ್ಯಗಳು ಹೊಸತಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ. ತನ್ನ ಭಾರತವನ್ನು ದ್ವೇಷ ಪೀಡಿತ ಉಗ್ರರ ಕೈಗೆ ಹಂತ ಹಂತವಾಗಿ ಒಪ್ಪಿಸುತ್ತಾ, ವಿದೇಶದ ನೆಲದಲ್ಲಿ ನಿಂತು ಉಳಿದ ರಾಷ್ಟ್ರಗಳಿಗೆ ‘ಭಯೋತ್ಪಾದನೆಯ ಕುರಿತಂತೆ ಬೋಧನೆ’ ಮಾಡಿದರೆ ಅದನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುವುದು ಕಷ್ಟ. ‘ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಗುರುತು’ ಎಂದು ಮೋದಿಯವರು ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಅದು ನಿಜ ಎನ್ನುವುದು ವಿಶ್ವಕ್ಕೇ ಗೊತ್ತಿದೆ. ಆ ಕಾರಣಕ್ಕಾಗಿಯೇ ಭಾರತ ಇನ್ನೂ ತನ್ನ ಘನತೆಯನ್ನು ವಿಶ್ವದಲ್ಲಿ ಉಳಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಭಾರತದ ವೈವಿಧ್ಯತೆಯನ್ನು ನಾಶ ಪಡಿಸುತ್ತಿರುವವರು ಯಾರು ಎನ್ನುವುದೂ ವಿಶ್ವದ ಅರಿವಿಗೆ ಬರುತ್ತಿದೆ. ಅಸ್ಸಾಮಿನಲ್ಲಿ ತನ್ನದೇ ಜನರ ಮೇಲೆ ಕ್ರೌರ್ಯವನ್ನು ಎಸಗಿದವರು ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ಗಳಲ್ಲ. ಮಾನವ ಹಕ್ಕು ಹೋರಾಟಗಾರರನ್ನು ಜೈಲಿನೊಳಗೆ ತಳ್ಳಿ ಹಂತ ಹಂತವಾಗಿ ಅವರನ್ನು ಸಾಯಿಸುತ್ತಿರುವವರು ನೆರೆ ದೇಶದ ಉಗ್ರಗಾಮಿಗಳಲ್ಲ.

ಕಳೆದ ಹತ್ತು ತಿಂಗಳಿಂದ ರೈತರನ್ನು ಬೀದಿಯಲ್ಲಿ ಧರಣಿ ಕೂರುವಂತೆ ಮಾಡಿರುವುದು ಹೊರಗಿನ ಭಯೋತ್ಪಾದಕ ಶಕ್ತಿಗಳಲ್ಲ. ಹಾಗೆಯೇ ಭಾರತದ ವೈವಿಧ್ಯವಾಗಿರುವ ಬಹುಸಂಸ್ಕೃತಿಯನ್ನು ಹಂತ ಹಂತವಾಗಿ ನಾಶ ಮಾಡಿ, ಏಕ ಸಂಸ್ಕೃತಿಯನ್ನು ಸ್ಥಾಪಿಸಲು ಹೊರಟಿರುವುದು ವಿದೇಶಿ ಶಕ್ತಿಗಳಲ್ಲ. ಇದು ಪ್ರಧಾನಿ ಮೋದಿಗೂ ಗೊತ್ತಿದೆ, ತನ್ನ ಪಾದ ಬುಡದಲ್ಲಿ ಸ್ವದೇಶಿ ಉಗ್ರರಿಗೆ ಆಶ್ರಯವನ್ನು ನೀಡುತ್ತಾ, ದೇಶದ ಪ್ರಜೆಗಳ ಮೇಲೆ ಭಯವನ್ನು, ಆತಂಕವನ್ನು ಬಿತ್ತಲು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬಳಸುತ್ತಾ, ನೆರೆ ರಾಷ್ಟ್ರಗಳಿಗೆ ಭಯೋತ್ಪಾದನೆ, ಉಗ್ರವಾದವನ್ನು ಎದುರಿಸಲು ಕರೆ ನೀಡಿದರೆ ಆ ಕರೆಯನ್ನು ವಿಶ್ವ ಗಂಭೀರವಾಗಿ ಸ್ವೀಕರಿಸಲಾರದು. ಆದುದರಿಂದ ಮೊದಲು, ವೈವಿಧ್ಯ ಭಾರತದ ಬಗ್ಗೆ ಭಾರತದಲ್ಲಿ ತನ್ನದೇ ಸಹೋದ್ಯೋಗಿಗಳಿಗೆ, ಸಂಘಪರಿವಾರ ಸಂಘಟನೆಗಳಿಗೆ, ಪೊಲೀಸ್ ಇಲಾಖೆಯೊಳಗಿರುವ ಜನಾಂಗೀಯ ದ್ವೇಷಿಗಳಿಗೆ ಪ್ರಧಾನಿ ಮೋದಿಯವರು ಬೋಧನೆ ಮಾಡುವ ತುರ್ತು ಅಗತ್ಯವಿದೆ. ತನ್ನದೇ ದೇಶದಲ್ಲಿ ಕೂಲಿಕಾರ್ಮಿಕರು, ಬಡ ರೈತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಕಠಿಣ ಶಬ್ದಗಳಿಂದ ಖಂಡಿಸಬೇಕಾಗಿದೆ. ಅಸ್ಸಾಮಿನ ಘಟನೆಯಿಂದಾಗಿ ಭಾರತದ ವರ್ಚಸ್ಸಿಗಾದ ಗಾಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆ ಬಳಿಕ, ತಾಲಿಬಾನ್‌ಗಳನ್ನು ಸುಧಾರಣೆ ಮಾಡುವ ಕಡೆಗೆ ಮೋದಿಯವರು ಗಮನಕೊಡುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News