ಕೃಷಿ ಕಾಯ್ದೆಗಳ ವಿರುದ್ಧ 10 ವರ್ಷ ಪ್ರತಿಭಟನೆಗೂ ಸಿದ್ಧ: ಟಿಕಾಯತ್

Update: 2021-09-26 18:22 GMT

ಚಂಡೀಗಢ, ಸೆ. 26: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮುಂದಿನ 10 ವರ್ಷಗಳವರೆಗೂ ಚಳವಳಿ ನಡೆಸಲು ಸಿದ್ಧರಿದ್ದಾರೆ. ಆದರೆ ಈ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಲು ಯಾವತ್ತೂ ಬಿಡುವುದಿಲ್ಲವೆಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ರವಿವಾರ ತಿಳಿಸಿದ್ದಾರೆ.

ರೈತ ಸಂಘಟನೆಗಳು ಕೃಷಿ ಕಾಯ್ದೆಗಳ ವಿರುದ್ಧ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಮುನ್ನಾ ದಿನವಾದ ರವಿವಾರ ಹರ್ಯಾಣದ ಪಾಣಿಪತ್ ನಡೆದ ಕಿಸಾನ್ ಮಹಾ ಪಂಚಾಯತ್ ನಲ್ಲಿ ಮಾತನಾಡಿ ಅವರು, ‘‘ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಗೊಂಡು 10 ತಿಂಗಳುಗಳು ಕಳೆದಿವೆ. ಒಂದು ವೇಳೆ ನಾವು ಈ ಕಾಯ್ದೆಗಳ ವಿರುದ್ಧ ಇನ್ನೂ 10 ವರ್ಷಗಳ ಕಾಲ ಪ್ರತಿಭಟನೆ ನಡೆಸಲೂ ಸಿದ್ಧರಿದ್ದೇವೆಂಬುದನ್ನು ಸರಕಾರವು ಕಿವಿಗೊಟ್ಟು ಕೇಳಬೇಕು ಎಂದರು. ಈ ಕಾಯ್ದೆಗಳನ್ನು ರದ್ದುಪಡಿಸುವ ತನಕವೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಟಿಕಾಯತ್ ಹೇಳಿದರು.

ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ತಮ್ಮ ಚಳವಳಿಯನ್ನು ರೈತರು ಇನ್ನಷ್ಟು ತೀವ್ರಗೊಳಿಸಲಿದ್ದಾರೆಂದುಅವರು ಹೇಳಿದರು.

ದಿಲ್ಲಿಯತ್ತ ಸಾಗಬೇಕಾದ ಅಗತ್ಯ ಬಂದರೂ ಬರಬಹುದಾದೆಂದು ಹೇಳಿದ ಟಿಕಾಯತ್ ಅದಕ್ಕಾಗಿ ಟ್ರಾಕ್ಟರ್ ಗಳನ್ನು ಸಜ್ಜಾಗಿರಿಸುವಂತೆ ಕರೆ ನೀಡಿದರು.‌ಒಂದು ವೇಳೆ ಈಗಿನ ಸರಕಾರವು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸದೆ ಇದ್ದಲ್ಲಿ ಭವಿಷ್ಯದಲ್ಲಿ ಅಧಿಕಾರಕ್ಕೇರುವ ಸರಕಾರಗಳಾದರೂ ಅದನ್ನು ಹಿಂಪಡೆಯಲೇಬೇಕಾಗುತ್ತದೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನು ಬಲಪಡಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಟಿಕಾಯತ್ ಅವರು ಯುವರೈತರನ್ನು ಆಗ್ರಹಿಸಿದರು.

ರೈತರ ಪ್ರತಿಭಟನೆಗೆ ಕಳಂಕ ಹಚ್ಚಲು ನಡೆಯುತ್ತಿರುವ ಅಭಿಯಾನವನ್ನು ಮಟ್ಟಹಾಕುವ ಅತಿ ದೊಡ್ಡ ಜವಾಬ್ದಾರಿ ಯುವ ರೈತರ ಹೆಗಲ ಮೇಲಿದೆಯೆಂದು ಅವರು ಹೇಳಿದರು. ಆರಂಭದಲ್ಲಿ ಕೇಂದ್ರ ಸರಕಾರವು ಈ ಪ್ರತಿಭಟನೆಯು ಕೇವಲ ಪಂಜಾಬ್ ಗಷ್ಟೇ ಸೀಮಿತವಾಗಿದೆಯೆಂದು ಬಿಂಬಿಸಲು ಯತ್ನಿಸಿತ್ತು. ಆನಂತರ ರೈತರನ್ನು ಬೇರೆ ಬೇರೆ ಹೆಸರುಗಳಿಂದ ಬ್ರಾಂಡ್ ಮಾಡಲಾಯಿತು. ಅಲ್ಲದೆ ಇದು ಶ್ರೀಮಂತರ ರೈತರ ಪ್ರತಿಭಟನೆ ಎಂದು ಬಿಂಬಿಸುವ ಯತ್ನವೂ ನಡೆದಿತ್ತು ಎಂದು ಟಿಕಾಯತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News