​ಭಾರತ್ ಬಂದ್ : ದೆಹಲಿ- ಉತ್ತರ ಪ್ರದೇಶ ಸಂಚಾರ ಅಸ್ತವ್ಯಸ್ತ

Update: 2021-09-27 03:26 GMT

ಹೊಸದಿಲ್ಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ 40 ರೈತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಇಂದು ನೀಡಿರುವ ಭಾರತ್ ಬಂದ್‌ಗೆ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಉಭಯ ರಾಜ್ಯಗಳಲ್ಲಿ ಸಂಚಾರ ವ್ಯವಸ್ಥೆ ಈಗಾಗಲೇ ಅಸ್ತವ್ಯಸ್ತಗೊಂಡಿದೆ.

ರೈತರು ಈಗಾಗಲೇ ದೆಹಲಿ- ಮೀರಠ್ ಎಕ್ಸ್‌ಪ್ರೆಸ್ ಹೈವೇಯನ್ನು ಗಾಜಿಪುರ ಗಡಿ ಬಳಿ ತಡೆದಿದ್ದಾರೆ. ಪ್ರತಿಭಟನೆ ಕಾರಣದಿಂದ ಉತ್ತರಪ್ರದೇಶ ದಿಂದ ಗಾಜಿಪುರ ಕಡೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ದೆಹಲಿ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಕಾಯ್ದೆ ಜಾರಿಗೆ ಬಂದು 10 ತಿಂಗಳು ಆದ ಸಂದರ್ಭದಲ್ಲಿ ಭಾರತ್ ಬಂದ್‌ಗೆ ಸಂಘಟನೆ ಕರೆ ನೀಡಿದೆ. ಕನಿಷ್ಠ ಬೆಂಬಲ ಬೆಲೆಗೆ ಸಂವಿಧಾನಾತ್ಮಕ ಖಾತರಿ ಒದಗಿಸಬೇಕು ಎನ್ನುವುದು ರೈತ ಸಂಘಟನೆಗಳ ಪ್ರಮುಖ ಹಕ್ಕೊತ್ತಾಯವಾಗಿದೆ. ಜತೆಗೆ ಹೊಸ ಕಾನೂನು ಕೃಷಿ ವಲಯವನ್ನು ಖಾಸಗಿ ಸಂಸ್ಥೆಗಳ ಕೈವಶ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ ಎನ್ನುವುದು ರೈತರ ಅಹವಾಲು. ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಬಂದ್ ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

ಮುಂಜಾನೆ 6ರಿಂದ ಬಂದ್ ಆರಂಭವಾಗಿದ್ದು, ಸಂಜೆ 4ರವರೆಗೆ ನಡೆಯಲಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಘ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ದೇಶಾದ್ಯಂತ ಮುಚ್ಚಿರುತ್ತವೆ ಎಂದು ಎಸ್‌ಕೆಎಂ ಹೇಳಿದೆ. ವೈದ್ಯಕೀಯ ಸೇವೆ, ಔಷಧ ಅಂಗಡಿಗಳು, ಪರಿಹಾರ ಕಾರ್ಯಾಚರಣೆ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಏತನ್ಮಧ್ಯೆ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, "ಪ್ರತಿಭಟನೆಗಳು ರಾಜಕೀಯ ಸಾಧನಗಳಾಗಬಾರದು" ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News