ಬಲೂಚಿಸ್ತಾನದಲ್ಲಿ ಬಾಂಬ್ ದಾಳಿ: ಪಾಕ್ ಸಂಸ್ಥಾಪಕ ಜಿನ್ನಾ ಪ್ರತಿಮೆ ಧ್ವಂಸ

Update: 2021-09-27 16:15 GMT
photo: twitter.com/BaluchistanTime

ಕರಾಚಿ, ಸೆ.27: ಬಲೂಚಿಸ್ತಾನ ಪ್ರಾಂತ್ಯದ ಕರಾವಳಿ ನಗರ ಗ್ವದರ್ನಲ್ಲಿ ರವಿವಾರ ಬಲೂಚ್ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಆಲಿ ಜಿನ್ನಾರ ಪ್ರತಿಮೆ ಧ್ವಂಸವಾಗಿದೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ. ಸುರಕ್ಷಿತ ತಾಣ ಎಂದು ಪರಿಗಣಿಸಲಾಗಿದ್ದ ಮರೈನ್ ಡ್ರೈವ್ನಲ್ಲಿ ಕಳೆದ ಜೂನ್ನಲ್ಲಿ ಜಿನ್ನಾ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪ್ರತಿಮೆಯಡಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಪ್ರತಿಮೆ ಧ್ವಂಸವಾಗಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.


ನಿಷೇಧಿತ ಉಗ್ರ ಸಂಘಟನೆ ‘ಬಲೂಚ್ ರಿಪಬ್ಲಿಕನ್ ಆರ್ಮಿ’ ಈ ಸ್ಫೋಟಕ್ಕೆ ಹೊಣೆ ಎಂದು ಸಂಘಟನೆಯ ವಕ್ತಾರ ಬಾಬ್ಗರ್ ಬಲೋಚ್ ಟ್ವಿಟರ್ನಲ್ಲಿ ಹೇಳಿರುವುದಾಗಿ ಬಿಬಿಸಿ ಉರ್ದು ನ್ಯೂಸ್ ವರದಿ ಮಾಡಿದೆ.

ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುವುದು. ಪ್ರವಾಸಿಗರ ಸೋಗಿನಲ್ಲಿ ಈ ಪ್ರದೇಶಕ್ಕೆ ಬಂದ ಉಗ್ರರು ಪ್ರತಿಮೆಯ ಅಡಿ ಬಾಂಬ್ ಇರಿಸಿ ಸ್ಫೋಟಿಸಿದ್ದಾರೆ. 

ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಗ್ವದರ್ನ ಉಪ ಆಯುಕ್ತ ಮೇಜರ್(ನಿವೃತ್ತ) ಅಬ್ದುಲ್ ಕಬೀರ್ ಖಾನ್ ಹೇಳಿದ್ದಾರೆ.
ಜಿನ್ನಾರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಪಾಕಿಸ್ತಾನದ ಸಿದ್ಧಾಂತದ ಮೇಲಿನ ದಾಳಿಯಾಗಿದೆ. ಜಿನ್ನಾ ವಾಸಿಸುತ್ತಿದ್ದ ಝಿಯಾರತ್ ನಿವಾಸವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಶಿಕ್ಷಿಸಿದ ರೀತಿಯಲ್ಲೇ ಈ ಪ್ರಕರಣದಲ್ಲೂ ಶಿಕ್ಷೆ ವಿಧಿಸಬೇಕು ಎಂದು ಬಲೂಚಿಸ್ತಾನದ ಮಾಜಿ ಗೃಹ ಸಚಿವ, ಹಾಲಿ ಸಂಸದ ಸರ್ಫ್ರಾಝ್ ಬಗ್ತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News