ಗ್ರೀಸ್ ನಲ್ಲಿ ಪ್ರಬಲ ಭೂಕಂಪ ಒಬ್ಬ ಮೃತ್ಯು, 9 ಮಂದಿಗೆ ಗಾಯ

Update: 2021-09-27 16:28 GMT

ಅಥೆನ್ಸ್, ಸೆ.27: ದಕ್ಷಿಣ ಗ್ರೀಸ್ನ ಕ್ರೀಟ್ ದ್ವೀಪದಲ್ಲಿ ಸೋಮವಾರ ಬೆಳಿಗ್ಗೆ 9:17ರ ವೇಳೆಗೆ ಸಂಭವಿಸಿದ ತೀವ್ರ ಭೂಕಂಪದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 9 ಮಂದಿ ಗಾಯಗೊಂಡಿದ್ದಾರೆ. ಹಲವು ಮನೆ, ಕಟ್ಟಡಗಳಿಗೆ ಹಾನಿಯಾಗಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ. ಅಮೆರಿಕದ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ 6.0 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಆದರೆ ಅಥೆನ್ಸ್ನ ಭೂಕಂಪಶಾಸ್ತ್ರ ಇಲಾಖೆಯ ಪ್ರಕಾರ ಭೂಕಂಪವು 5.8 ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ದಾಖಲಿಸಿದೆ. ಆರ್ವಿ ನಗರದ ವಾಯವ್ಯದಲ್ಲಿ ಸುಮಾರು 23 ಕಿ.ಮೀ ದೂರದಲ್ಲಿ ಮತ್ತು ನೆಲದಡಿ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಥೆನ್ಸ್ ಭೂಕಂಪ ಶಾಸ್ತ್ರ ಇಲಾಖೆ ಹೇಳಿದೆ.

ಭೂಮಿ ನಡುಗಿದ ಅನುಭವವಾಗುತ್ತಿದ್ದಂತೆಯೇ ಜನರು ಗಾಭರಿಯಿಂದ ಮನೆಯಿಂದ ಹೊರಗೆ ಓಡಿಬಂದರು. ಭೂಕಂಪದ ಕೇಂದ್ರಬಿಂದುವಿದ್ದ ಪ್ರದೇಶದ ಸಮೀಪವಿರುವ ನಗರಗಳ ಶಾಲೆಯಿಂದ ತಕ್ಷಣ ವಿದ್ಯಾರ್ಥಿಗಳನ್ನು ತೆರವುಗೊಳಿಸಲಾಗಿದೆ.

ಭೂಕಂಪದ ಸಾಧ್ಯತೆಯ ಬಗ್ಗೆ ನಮಗೆ ತಿಂಗಳ ಮೊದಲೇ ಮುನ್ಸೂಚನೆ ದೊರಕಿತ್ತು. ಕೆಲ ದಿನಗಳಿಂದ ಇಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ಸೋಮವಾರ ಜನವಸತಿ ಪ್ರದೇಶದಲ್ಲಿ ಪ್ರಬಲ ಕಂಪನ ಸಂಭವಿಸಿದ್ದರಿಂದ ನಾಶ, ನಷ್ಟದ ಪ್ರಮಾಣ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
  
ಅರ್ಕಲೊಹೊರಿ ಗ್ರಾಮದಲ್ಲಿ 2 ಚರ್ಚ್ಗಳು ಹಾಗೂ ಇತರ ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಇದೇ ಪ್ರದೇಶದಲ್ಲಿ ಮತ್ತೊಂದು ಚರ್ಚ್ನ ಗೋಪುರ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟರೆ, ಮತ್ತೊಬ್ಬ ಮಣ್ಣಿನಡಿ ಸಿಲುಕಿದ್ದಾನೆ. ಇದೇ ಪ್ರದೇಶದಲ್ಲಿ ಮನೆಯೊಂದರ ಗೋಡೆ ಕುಸಿಬಿದ್ದು ಅದರಡಿಯೂ ಒಬ್ಬ ವ್ಯಕ್ತಿ ಸಿಲುಕಿದ್ದಾನೆ. ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರದ ಮೇಯರ್ ಹೇಳಿರುವುದಾಗಿ ಸ್ಕಾಯ್ ಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News