ಕಲಾವಿದರೇ ಕಲೆಯನ್ನು ಕೊಲೆಗೈದರೆ?

Update: 2021-09-28 06:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಾನಪದ ಕಲೆಗಳು ಅವಸಾನದ ಅಂಚಿನಲ್ಲಿವೆ ಎಂದು ವಿದ್ವಾಂಸರು ಕಳವಳ ವ್ಯಕ್ತಪಡಿಸುವುದಿದೆ. ಈ ಸ್ಥಿತಿಗೆ ಆಧುನಿಕತೆ, ಸಿನೆಮಾ, ಟಿವಿ ಮೊದಲಾದ ಮಾಧ್ಯಮಗಳನ್ನು ಹೊಣೆ ಮಾಡಲಾಗುತ್ತದೆ. ಇದು ನಿಜವೂ ಕೂಡ. ಮನರಂಜನೆಯ ಹೆಬ್ಬಾಗಿಲು ಮನೆ ಮನೆಯಲ್ಲೇ ತೆರೆದುಕೊಂಡಿರುವ ಈ ದಿನಗಳಲ್ಲಿ, ಜಾನಪದ ಕಲೆಗಳನ್ನು ಮನರಂಜನೆಗಾಗಿ ಅವಲಂಬಿಸುವ ಸ್ಥಿತಿ ಈಗ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರಣಗಳಿಗಾಗಿ ಜಾನಪದ ಕಲೆಗಳು ಒಂದಿಷ್ಟು ಉಸಿರಾಡುತ್ತಿವೆ. ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲೂ ಜಾನಪದ ಕಲೆಗಳು ಆದ್ಯತೆಯ ಮೇಲೆ ಪ್ರದರ್ಶಿಸಲ್ಪಡುತ್ತವೆ. ಹೊಸ ತಲೆಮಾರು ಈ ಕಲೆಯನ್ನು ಬದುಕಾಗಿ ಸ್ವೀಕರಿಸದೆ ಇರುವುದರಿಂದ ಒಂದು ತಲೆಮಾರಿಗೇ ಬಹುತೇಕ ಕಲೆಗಳು ಮುಗಿದು ಹೋಗುವ ಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಇನ್ನೂ ಮನರಂಜನೆಯ ಮತ್ತು ಪರಂಪರೆಯ ಭಾಗವಾಗಿ ಅಸ್ತಿತ್ವದಲ್ಲಿರುವ ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಿಂದಿನ ಪ್ರೇಕ್ಷಕರು ಈಗ ಯಕ್ಷಗಾನಕ್ಕೆ ಇಲ್ಲದೇ ಇದ್ದರೂ, ಇನ್ನೂ ಅಸ್ತಿತ್ವದಲ್ಲಿರುವ ಹತ್ತು ಹಲವು ಮೇಳಗಳೇ ಈ ಕಲೆಯನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿಲ್ಲ ಎನ್ನುವುದನ್ನು ಹೇಳುತ್ತವೆ. ಬಹುತೇಕ ಕಲೆಗಳು ಧಾರ್ಮಿಕ ಉತ್ಸವಗಳಿಗೆ ಸೀಮಿತವಾಗಿರುವಾಗ, ಯಕ್ಷಗಾನವು ಮನರಂಜನೆಯ ಭಾಗವಾಗಿಯೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಹಲವು ವೃತ್ತಿಪರ ಮೇಳಗಳು ಹೊಸ ಹೊಸ ಪ್ರಸಂಗಗಳನ್ನು ಪ್ರದರ್ಶಿಸಿ ಆರ್ಥಿಕವಾಗಿ ನಷ್ಟವನ್ನಂತೂ ಮಾಡಿಕೊಂಡಿಲ್ಲ ಎನ್ನುವುದೇ ವಿಶೇಷವಾಗಿದೆ. ಯಕ್ಷಗಾನ ವೇಷ, ನೃತ್ಯ, ಸಂಗೀತ ಮತ್ತು ಮಾತುಗಾರಿಕೆ ಈ ನಾಲ್ಕು ಅಂಶಗಳ ಮೂಲಕ ಜನರನ್ನು ರಂಜಿಸುತ್ತದೆ. ಬದುಕಿಗಾಗಿ ಯಕ್ಷಗಾನವನ್ನೇ ನೆಚ್ಚಿಕೊಂಡ ದೊಡ್ಡ ಸಂಖ್ಯೆಯ ಕಲಾವಿದರು ನಮ್ಮ ನಡುವೆ ಇದ್ದಾರೆ. ಜನರನ್ನು ಹೆಚ್ಚು ಆಕರ್ಷಿಸುವುದಕ್ಕಾಗಿ ಯಕ್ಷಗಾನದಲ್ಲಿ ಹಲವು ಪ್ರಯೋಗಗಳನ್ನು ಮಾಡಲಾಗುತ್ತಿದೆ. ಹೊಸ ಹೊಸ ತಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಯಕ್ಷಗಾನದ ವಾಣಿಜ್ಯೀಕರಣ ಎಷ್ಟು ಸರಿ ಎನ್ನುವ ಪ್ರಶ್ನೆ ವಿದ್ವತ್ ವಲಯದಲ್ಲಿ ಚರ್ಚೆಯಲ್ಲಿದ್ದರೂ ಕಲಾವಿದರ ಬದುಕು ಕಲೆಗಿಂತ ದೊಡ್ಡದು ಎಂಬ ಕಾರಣದಿಂದ ಈ ಬದಲಾವಣೆಗಳನ್ನು ನಾವು ಗೌರವಿಸಬೇಕಾಗಿದೆ, ಸ್ವೀಕರಿಸಬೇಕಾಗಿದೆ. ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ, ಶೇಣಿ, ಜಲವಳ್ಳಿ, ಶ್ರೀಧರ ಭಂಡಾರಿ, ಬಣ್ಣದ ಮಹಾಲಿಂಗ ಮೊದಲಾದ ಹಿರಿಯ ಕಲಾವಿದರಿಂದ ಜನಮನವನ್ನು ವ್ಯಾಪಿಸಿರುವ ಯಕ್ಷಗಾನ, ಹತ್ತು ಹಲವು ಹಂತಗಳನ್ನು ದಾಟಿ ಇಂದಿಗೂ ತನ್ನ ಮೂಲ ಸ್ವರೂಪವನ್ನು ಸಂಪೂರ್ಣ ಕಳೆದುಕೊಳ್ಳದೆ ಜನಮನದಲ್ಲಿ ಉಳಿದುಕೊಂಡಿದೆ ಎನ್ನುವುದು ಕರಾವಳಿಯ ಬಹುದೊಡ್ಡ ಹೆಗ್ಗಳಿಕೆ.

ಆದರೆ ಇನ್ನೊಂದು ವಿಷಾದನೀಯ ಬೆಳವಣಿಗೆಗೂ ಯಕ್ಷಗಾನ ಕಾರಣವಾಗುತ್ತಿದೆ. ಕಲೆಯಿರುವುದು ಮನಸ್ಸುಗಳನ್ನು ಜೋಡಿಸುವುದಕ್ಕೆ. ಮನದೊಳಗೆ ಮಾನವೀಯತೆಯನ್ನು ಬೆಳಗುವುದಕ್ಕೆ. ಯಾವಾಗ ಕಲೆಗೆ ಇದು ಸಾಧ್ಯವಾಗುವುದಿಲ್ಲವೋ, ಆಗ ಕಲೆ ಅದೆಷ್ಟು ಪುರಾತನವಾಗಿದ್ದರೂ ತಿರಸ್ಕೃತವಾಗುತ್ತಾ ಹೋಗುತ್ತದೆ. ಇಂದು ಯಕ್ಷಗಾನವನ್ನು ಒಳಗಿನಿಂದಲೇ ಹಂತ ಹಂತವಾಗಿ ಸಾಯಿಸುವ ಕೆಲಸವನ್ನು ಕೆಲವು ಕಲಾವಿದರೇ ನಡೆಸುತ್ತಾ ಬರುತ್ತಿದ್ದಾರೆ. ಕಲಾವಿದರ ಹೆಸರಿನಲ್ಲಿ, ಇವರು ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಯಕ್ಷಗಾನ ವೇದಿಕೆಯನ್ನು ದುರುಪಯೋಗ ಪಡಿಸುತ್ತಾ ಬರುತ್ತಿದ್ದಾರೆ. ದ್ವೇಷ ರಾಜಕಾರಣವನ್ನು ಹರಡುವ ನೀಚ ಕೆಲಸಕ್ಕೂ ಈ ಕಲಾವಿದರು ಯಕ್ಷಗಾನವನ್ನು ಬಳಸುತ್ತಿದ್ದಾರೆ. ಈ ಹಿಂದೆಯೂ ಇದರ ಕುರಿತಂತೆ ವಿವಿಧ ಕಲಾರಸಿಕರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಒಂದೆಡೆ, ಯಕ್ಷಗಾನವನ್ನು ಬ್ರಾಹ್ಮಣ್ಯ ಚಿಂತನೆಗಳನ್ನು ಹರಡಲು ಬಳಸುತ್ತಿದ್ದಾರೆ ಎಂಬ ಆರೋಪಗಳಿವೆ. ಜಾತೀಯತೆಯನ್ನು, ವರ್ಣವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕೆಲಸಕ್ಕೆ ಕೆಲವರು ಈ ಕಲೆಯನ್ನು ದುರುಪಯೋಗಗೊಳಿಸುತ್ತಿದ್ದಾರೆ . ಇದೇ ಸಂದರ್ಭದಲ್ಲಿ ಇನ್ನೊಂದೆಡೆ, ಒಂದು ಸಮುದಾಯದ ವಿರುದ್ಧ ಜನರಲ್ಲಿ ದ್ವೇಷವನ್ನು ಹರಡಲೂ ಕೆಲವು ಕಲಾವಿದರು ಈ ಕಲೆಯನ್ನು ಬಳಸುತ್ತಾ ಬಂದಿದ್ದಾರೆ. ಅಮೃತವನ್ನು ಹಂಚಬೇಕಾದ ಯಕ್ಷಗಾನದ ಈ ಮೂಲಕ, ಗ್ರಾಮೀಣ ಪ್ರದೇಶಗಳಲ್ಲಿ ಕೋಮುವಿಷವನ್ನು ಹಂಚಿದ ಕುರಿತಂತೆ ಸಹೃದಯಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೂ ಈ ಬಗ್ಗೆ ಮೇಳಗಳು ಮುಖ್ಯಸ್ಥರು ಕಲಾವಿದರ ಮೇಲೆ ಯಾವುದೇ ಗಂಭೀರ ಕ್ರಮವನ್ನು ತೆಗೆದುಕೊಂಡಿಲ್ಲ. ಯಕ್ಷಗಾನ ಮೇಳಗಳ ಸೂತ್ರಗಳೇ ವೈದಿಕ ಹಿತಾಸಕ್ತಿಗಳ ಕೈಯಲ್ಲಿರುವ ಕಾರಣ ಈ ಕಲಾವಿದರು ಇನ್ನೂ ಗೆದ್ದಲುಗಳಂತೆ ಯಕ್ಷಗಾನವನ್ನು ಆಶ್ರಯಿಸಿ ಕಲೆಯ ವೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ ಎನ್ನುವುದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಇಂತಹ ದುರುದ್ದೇಶಪೂರಿತ ಕಲಾವಿದರಿಂದಾಗಿ ಅಳಿದುಳಿದ ಪ್ರೇಕ್ಷಕರೂ ಈ ಕಲೆಯಿಂದ ದೂರವಾಗುತ್ತಿದ್ದಾರೆ.

  ಇತ್ತೀಚೆಗೆ ಒಂದು ಯಕ್ಷಗಾನ ಮೇಳದಲ್ಲಿ ಇಂತಹದೇ ಪ್ರಕರಣವೊಂದು ನಡೆಯಿತು. ಕೋಡಂಗಿ ವೇಷದಲ್ಲಿರುವ ಕಲಾವಿದನೊಬ್ಬ ದೃಶ್ಯವೊಂದರಲ್ಲಿ ಅನಗತ್ಯವಾಗಿ ರಾಜಕೀಯವನ್ನು ಎಳೆದು ತಂದ. ಇಡೀ ದೇಶದ ಭವಿಷ್ಯವನ್ನು ನಿರ್ಧರಿಸುವ ಕೃಷಿ ನೀತಿಯ ವಿರುದ್ಧ ದೇಶಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ಸುಮಾರು 10 ತಿಂಗಳಿಂದ ಈ ಹೋರಾಟ ಜಾರಿಯಲ್ಲಿದೆ. ಅಂಬಾನಿ, ಅದಾನಿಗಳಿಗೆ ಅನುಕೂಲ ಮಾಡಿಕೊಡುವ, ತಾವು ಬೆಳೆದ ಕೃಷಿಗೆ ಬೆಲೆಕಟ್ಟುವ ಸ್ವಾತಂತ್ರವನ್ನೇ ಕಸಿದುಕೊಳ್ಳುವ ಕೃಷಿ ನೀತಿ ಬೇಡ ಎಂದು ಸಾವಿರಾರು ರೈತರು ದಿಲ್ಲಿ ಬೀದಿಯಲ್ಲಿ ಧರಣಿ ಕೂತಿದ್ದಾರೆ. ಆದರೆ ಕೋಡಂಗಿ ವೇಷದಲ್ಲಿರುವಾತ, ಈ ರೈತರ ಬಗ್ಗೆ ಅತ್ಯಂತ ಹೀನಾಯವಾಗಿ ಮಾತನಾಡುತ್ತಾನೆ. ‘ಇವರೆಲ್ಲರೂ ರೈತರಲ್ಲ, ರೈತರ ವೇಷದಲ್ಲಿರುವವರು’ ಎಂದು ಅವಮಾನಿಸುತ್ತಾನೆ. ಅಷ್ಟೇ ಅಲ್ಲ, ಈ ನಕಲಿ ರೈತರಿಗೆ ಹೆದರುವುದಕ್ಕೆ ದಿಲ್ಲಿಯಲ್ಲಿರುವುದು ಮಂಗ ಅಲ್ಲ, ಸಿಂಗ ಎಂದು ಹೇಳುತ್ತಾನೆ. ‘ಕಳೆದ ಮೂರು ತಿಂಗಳು ಲಾಕ್‌ಡೌನ್ ಆದಾಗ ಇಡೀ ದೇಶದ ಜನರನ್ನು ಮನೆಯಲ್ಲಿ ಕೂರಿಸಿ ಊಟ ಹಾಕಿದ ಮಹಾತ್ಮರು’ ಎಂದೂ ಬಣ್ಣಿಸುತ್ತಾನೆ. ಮನರಂಜನೆಗಾಗಿ, ಯಕ್ಷಗಾನದ ಮೇಲಿನ ಪ್ರೀತಿಯಿಂದ ದುಡ್ಡುಕೊಟ್ಟು ಬಂದ ಪ್ರೇಕ್ಷಕರು ಈತನ ರಾಜಕೀಯ ಭಾಷಣವನ್ನು ಕೇಳಿ ಸಹಿಸಿಕೊಳ್ಳಬೇಕಾದ ಸ್ಥಿತಿಯೊಂದು ಅಲ್ಲಿ ನಿರ್ಮಾಣವಾಯಿತು. ಯಕ್ಷಗಾನದ ಕತೆಗೆ ಅನಗತ್ಯವಾಗಿ ತುರುಕಿರುವ ಈ ಕತೆ ಮತ್ತು ಸಂಭಾಷಣೆಯ ಉದ್ದೇಶ ಏನು ಎನ್ನುವುದು ಯಾರೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು. ಈತನ ಕಳಪೆ ಮಾತುಗಳನ್ನು ಕೇಳಿದ ಯಕ್ಷಗಾನ ಪ್ರೇಮಿ, ಇನ್ನೊಮ್ಮೆ ಯಕ್ಷಗಾನ ಪ್ರಸಂಗದ ಕಡೆಗೆ ಮುಖ ಹೊರಳಿಸುವುದೂ ಕಷ್ಟ.

ಲಾಕ್‌ಡೌನ್ ಅವಧಿಯ ಮೂರು ತಿಂಗಳು ‘ಮನೆಯಲ್ಲಿ ಕೂರಿಸಿ ಅನ್ನ ಹಾಕಿದ ಮಹಾತ್ಮ’ ದಿಲ್ಲಿಯ ಗದ್ದುಗೆಯಲ್ಲಿ ಕುಳಿತುಕೊಂಡಿರುವುದು ಎಂದು ಯಕ್ಷಗಾನ ವೇದಿಕೆಯಲ್ಲಿ ಭಾಷಣ ಮಾಡುವ ಈ ಕೋಡಂಗಿ, ತನ್ನ ಮಾತಿನ ಮೂಲಕ ಲಾಕ್‌ಡೌನ್ ಅವಧಿಯಲ್ಲಿ ಬೀದಿಪಾಲಾಗಿರುವ ನೂರಾರು ಯಕ್ಷಗಾನ ಕಲಾವಿದರ ಸಂಕಷ್ಟದ ಬಗ್ಗೆ ಏನು ಹೇಳುತ್ತಾನೆ? ಲಾಕ್‌ಡೌನ್ ಅವಧಿಯಲ್ಲಿ ಯಕ್ಷಗಾನ ಕಲಾವಿದರು ಅದೆಷ್ಟು ಸಂಕಷ್ಟವನ್ನು ಅನುಭವಿಸಿದ್ದಾರೆ ಎನ್ನುವುದು ಈತನಿಗೆ ತಿಳಿಯದ ವಿಷಯವೇನೂ ಅಲ್ಲ. ದುಡಿಮೆಯಿಲ್ಲದೆ ಮನೆಯಲ್ಲಿ ಕುಳಿತು ಯಕ್ಷಗಾನ ಕಲಾವಿದರಿಗೆ, ಈತನ ದಿಲ್ಲಿಯಲ್ಲಿರುವ ಸಿಂಹ ಅದೇನು ಸಹಾಯ ಮಾಡಿದೆ ಎನ್ನುವುದನ್ನಾದರೂ ಆ ಯಕ್ಷಗಾನ ವೇದಿಕೆಯಲ್ಲಿ ವಿವರಿಸಬಹುದಿತ್ತು. ಬಹುಷಃ ಯಕ್ಷಗಾನದಲ್ಲಿ ‘ಅಧಿಕ ಪ್ರಸಂಗ’ ಮಾತನಾಡಿದ್ದಕ್ಕಾಗಿ ಈತನಿಗೆ ಹೊರಗಿನಿಂದ ಸಹಾಯವೇನಾದರೂ ದೊರಕಿದ್ದಿರಲೂ ಬಹುದು.

ಕಳೆದ ಎರಡು ವರ್ಷಗಳಿಂದ ಯಕ್ಷಗಾನ ಕಲಾವಿದರ ದುಃಖಕ್ಕೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ. ಕಲಾವಿದರೇ ಇಂತಹ ಸಂಕಷ್ಟ ಸಮಯದಲ್ಲಿರುವಾಗ ಬೀದಿಯಲ್ಲಿ ತಮ್ಮ ಹಕ್ಕಿಗಾಗಿ ಧರಣಿ ಮಾಡುತ್ತಿರುವ ರೈತರನ್ನು ಅಣಕಿಸುವ ಈತ ಹೊಟ್ಟೆಗೆ ಅನ್ನ ತಿನ್ನುತ್ತಾನೆಯೇ? ಎಂಬ ಪ್ರಶ್ನೆಯನ್ನು ಯಕ್ಷಾಭಿಮಾನಿಗಳಲ್ಲಿ ಕೇಳುತ್ತಿದ್ದಾರೆ. ಈತ ಏಕಕಾಲದಲ್ಲಿ ತಿನ್ನುವ ಅನ್ನಕ್ಕೂ, ತನಗೆ ಅನ್ನ ಕೊಡುವ ಕಲೆಗೂ ದ್ರೋಹ ಎಸಗಿದ್ದಾನೆ. ಇಂತಹ ಹತ್ತು ಕಲಾವಿದರಿದ್ದರೆ ಸಾಕು, ಯಕ್ಷಗಾನದ ಹೆಸರಿನಲ್ಲಿ ಇವರು ನಡೆಸುವ ರಾಜಕೀಯ ಗಬ್ಬು ವಾಸನೆಗೆ ಬೆದರಿ, ಅದರ ಟೆಂಟಿನ ಪಕ್ಕದಲ್ಲೂ ಜನರು ನಡೆದಾಡುವುದನ್ನು ನಿಲ್ಲಿಸುವ ದಿನ ಬರಬಹುದು. ಆಧುನಿಕತೆ, ಟಿವಿ, ಸಿನೆಮಾಗಳಿಗಿಂತ ಇಂತಹ ಕಲಾವಿದರೇ ಯಕ್ಷಗಾನವನ್ನು ಕೊಲ್ಲುವುದಕ್ಕೆ ಸಾಕು. ಆದುದರಿಂದ, ಯಕ್ಷಗಾನದ ಹಿರಿಮೆಯನ್ನು ದುರುಪಯೋಗಗೊಳಿಸಿ, ವೇದಿಕೆಯನ್ನು ರಾಜಕೀಯ, ಕೋಮುದ್ವೇಷ ಮಾತುಗಳಿಂದ ಅಪವಿತ್ರಗೊಳಿಸುವ ಇಂತಹ ಕಲಾವಿದರನ್ನು ಹೊರಗಟ್ಟುವ ಕೆಲಸವನ್ನು ಮೇಳದ ಮುಖ್ಯಸ್ಥರು ಮಾಡಬೇಕು. ಆಗ ಮಾತ್ರ, ಅಳಿದುಳಿದ ಪ್ರೇಕ್ಷಕರಾದರೂ ಉಳಿದಾರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News