×
Ad

ಜಪಾನ್: ಆರೋಗ್ಯ ತುರ್ತು ಪರಿಸ್ಥಿತಿ ತೆರವು

Update: 2021-09-28 21:27 IST

ಟೋಕಿಯೊ, ಸೆ.28: ಕೊರೋನ ಸೋಂಕಿನ ಪ್ರಕರಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಕೊರೋನ ಸೋಂಕು ತುರ್ತು ಪರಿಸ್ಥಿತಿಯನ್ನು ಈ ವಾರದಿಂದ ಅಂತ್ಯಗೊಳಿಸಲಾಗುವುದು ಎಂದು ಜಪಾನ್ ಸರಕಾರ ಮಂಗಳವಾರ ಘೋಷಿಸಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ತುರ್ತು ಕ್ರಮಗಳು ಗುರುವಾರದಿಂದ ಅಂತ್ಯಗೊಳ್ಳಲಿದೆ ಮತ್ತು ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುವುದು ಎಂದು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ಮಂಗಳವಾರ ಘೋಷಿಸಿದ್ದಾರೆ.

ಸೋಂಕಿನ ಅಪಾಯ ಇದ್ದರೂ ಆರ್ಥಿಕ ಚಟುವಟಿಕೆಗೆ ಪ್ರೋನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ಕೋವಿಡ್ ಸೋಂಕಿನ ಚಿಕಿತ್ಸೆಗೆ ಇನ್ನಷ್ಟು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಭವಿಷ್ಯದ ಯಾವುದೇ ಅಪಾಯ ಎದುರಿಸಲು ಲಸಿಕೀಕರಣ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದವರು ಹೇಳಿದ್ದಾರೆ.
 
ಇದರೊಂದಿಗೆ ಲಸಿಕೆ ಪಾಸ್ಪೋರ್ಟ್, ಸೋಂಕು ಪರೀಕ್ಷೆ ಮುಂತಾದ ಕ್ರಮಗಳ ಬಗ್ಗೆ ಇತರ ಯೋಜನೆಗಳನ್ನು ಅಧಿಕಾರಿಗಳು ರೂಪಿಸಲಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಜಪಾನ್ ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಮತ್ತು ಹಲವು ಬಾರಿ ಇದನ್ನು ವಿಸ್ತರಿಸಲಾಗಿತ್ತು. ರೆಸ್ಟಾರೆಂಟ್ ಮತ್ತು ಬಾರ್ ಗಳ ಕಾರ್ಯನಿರ್ವಹಣೆಯ ಅವಧಿಯಲ್ಲಿ ಕಡಿತಗೊಳಿಸಲಾಗಿತ್ತು. ಕೊರೋನ ಸೋಂಕು ಇನ್ನೂ ಕಡಿಮೆಯಾಗಿಲ್ಲದ ಕಾರಣ ನಿರ್ಬಂಧ ಮುಂದುವರಿಸಲಾಗುವುದು ಎಂದು ಟೋಕಿಯೊ, ಒಸಾಕ, ಹ್ಯೋಗೊ ಮತ್ತು ಕ್ಯೊಟೊ ನಗರಗಳ ಗವರ್ನರ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News