ಚೀನದಲ್ಲಿ ವಿದ್ಯುತ್ ಕಡಿತದ ಸಮಸ್ಯೆಯಿಂದ ಜಿಡಿಪಿ ದರ ಕುಂಠಿತಗೊಳ್ಳುವ ಸಾಧ್ಯತೆ: ವರದಿ

Update: 2021-09-28 16:28 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಸೆ.28: ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಪೂರೈಕೆ ತೀವ್ರ ಅಸ್ತವ್ಯಸ್ತಗೊಂಡಿದ್ದು ಕಾರ್ಖಾನೆಗಳಲ್ಲಿ ಉತ್ಪಾದನೆ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಚೀನಾದ ವಾರ್ಷಿಕ ಆರ್ಥಿಕ ಬೆಳವಣಿಗೆ ದರ ಕುಂಠಿತಗೊಳ್ಳಲಿದೆ ಎಂದು ಗೋಲ್ಡ್ಮನ್ ಸ್ಯಾಚ್ ಸಂಸ್ಥೆ ಅಂದಾಜಿಸಿದೆ.

ದೇಶದ ಕನಿಷ್ಟ 17 ಪ್ರಾಂತ್ಯ ಹಾಗೂ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಈ 17 ಪ್ರಾಂತ್ಯಗಳು ದೇಶದ ಜಿಡಿಪಿಗೆ 66%ರಷ್ಟು ಕೊಡುಗೆ ನೀಡುತ್ತಿದ್ದು ಇಲ್ಲಿನ ಕೈಗಾರಿಕೆಗಳ ಕಾರ್ಯಕ್ಕೆ ಅಡ್ಡಿಯಾಗಿರುವುದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ ಸಂಸ್ಥೆ ಹೇಳಿದೆ. 

ಚೀನಾದಲ್ಲಿ ಆರ್ಥಿಕ ಚಟುವಟಿಕೆಗೆ ಅಗತ್ಯವಾದ ಇಂಧನ ಶಕ್ತಿಯಲ್ಲಿ ಸುಮಾರು 60% ಕಲ್ಲಿದ್ದಲಿನಿಂದ ದೊರಕುತ್ತದೆ. ಆದರೆ ಕೊರೋನ ಸೋಂಕಿನಿಂದಾಗಿ ಮತ್ತು ಪ್ರಮುಖ ಕಲ್ಲಿದ್ದಲು ಪೂರೈಕೆದಾರ ಆಸ್ಟ್ರೇಲಿಯಾದೊಂದಿಗಿನ ಸಂಬಂಧ ಹಳಸಿರುವುದರಿಂದ ಕಲ್ಲಿದ್ದಲು ಪೂರೈಕೆ ವ್ಯವಸ್ಥೆಗೆ ತೊಡಕಾಗಿದೆ. ಈ ವರ್ಷದ ಪ್ರಥಮಾರ್ಧದಲ್ಲಿ ವಿದ್ಯುತ್ ಶಕ್ತಿಗೆ ಬೇಡಿಕೆ ಕೊರೋನ ಪೂರ್ವದ ಅವಧಿಗಿಂತ ಹೆಚ್ಚಿದೆ ಎಂದು ರಾಷ್ಟ್ರೀಯ ಇಂಧನ ಸಂಸ್ಥೆ ಹೇಳಿದೆ.

ವಿದ್ಯುತ್ ಕಡಿತದಿಂದಾಗಿ ಬೃಹತ್ ಕೈಗಾರಿಕೆಗಳು ಉತ್ಪಾದನೆ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದರ 7.8%(ಈ ಹಿಂದೆ 8.2% ಎಂದು ಅಂದಾಜಿಸಲಾಗಿತ್ತು) ಆಗಲಿದೆ ಎಂದು ಗೋಲ್ಡಮನ್ ಸ್ಯಾಚ್ಸ್ ವರದಿ ಮಾಡಿದೆ.
ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಸರಕಾರ ಕಠಿಣ ಕಾನೂನು ರೂಪಿಸಿರುವುದರಿಂದ ಅಥವಾ ಕಲ್ಲಿದ್ದಲು ಕೊರತೆಯಿಂದ ಹಲವಾರು ಕಾರ್ಖಾನೆಗಳು ಕಾರ್ಯಾಚರಣೆಯನ್ನು ಸೀಮಿತಗೊಳಿಸುವ ಅನಿವಾರ್ಯತೆ ಎದುರಾಗಿರುವ ಹಿನ್ನೆಲೆಯಲ್ಲಿ ಚೀನಾದ ವಾರ್ಷಿಕ ಜಿಡಿಪಿ ದರ 7.7%ಕ್ಕೆ ಇಳಿಕೆಯಾಗಲಿದೆ ಎಂದು ‘ನೊಮ್ಯುರಾ ’ ವಿಶ್ಲೇಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News