ಗೋರಖ್ ಪುರ್ ಹೊಟೇಲ್ ಮೇಲೆ ಪೊಲೀಸ್ ದಾಳಿಯಲ್ಲಿ ಉದ್ಯಮಿ ಮೃತ್ಯು, 6 ಪೊಲೀಸರು ಅಮಾನತು

Update: 2021-09-29 05:39 GMT

ಲಕ್ನೋ: ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರುಪಟ್ಟಣ ಉತ್ತರ ಪ್ರದೇಶದ ಗೋರಖ್ ಪುರ ನಗರದ ಹೋಟೆಲ್ ಮೇಲೆ ಮಂಗಳವಾರ ತಡರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ ಓರ್ವ ಉದ್ಯಮಿ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಉದ್ಯಮಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮೃತ ವ್ಯಕ್ತಿಯ ಕುಟುಂಬವು ಆರೋಪಿಸಿದೆ. ವ್ಯಕ್ತಿಯ ಸಾವನ್ನು 'ಆಕಸ್ಮಿಕ' ಎಂದು ಹೇಳಿರುವ ಪೊಲೀಸರು ಉದ್ಯಮಿ ಹೋಟೆಲ್ ಕೊಠಡಿಯೊಳಗೆ ಬಿದ್ದುಕೊಂಡ ಸ್ಥಿತಿಯಲ್ಲಿದ್ದ ಎಂದು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ಮನೀಶ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯರಾತ್ರಿಯ ನಂತರ ನಡೆದ ದಾಳಿಯ ಸಮಯದಲ್ಲಿ ಆತ ಹಾಗೂ ಬೇರೆ ನಗರಗಳ ಇಬ್ಬರು ವ್ಯಕ್ತಿಗಳು ಹೋಟೆಲ್ ಕೊಠಡಿಯಲ್ಲಿದ್ದರು.

 ತಾವು ವ್ಯಾಪಾರಿಗಳಾಗಿದ್ದು  ಸ್ನೇಹಿತನನ್ನು ಭೇಟಿ ಮಾಡಲು ಗೋರಖ್‌ಪುರಕ್ಕೆ ಬಂದಿರುವುದಾಗಿ ಮೃತ ಉದ್ಯಮಿಯ ಜೊತೆಗಿದ್ವವರು ಮಾಧ್ಯಮಕ್ಕೆ ತಿಳಿಸಿದರು.

"ನಾವು ಮೂವರು ನಮ್ಮ ಕೋಣೆಯಲ್ಲಿ ಮಲಗಿದ್ದೆವು. ಸುಮಾರು ರಾತ್ರಿ 12: 30 ರ ಸುಮಾರಿಗೆ ಡೋರ್‌ಬೆಲ್ ಬಾರಿಸಿತು. ನಾನು ಬಾಗಿಲು ತೆರೆದಿದ್ದೇನೆ . ಅಲ್ಲಿ 5-7 ಪೋಲಿಸರು ಹಾಗೂ  ರಿಸೆಪ್ಶನ್‌ ಹುಡುಗ ಇದ್ದರು. ಅವರು ಕೋಣೆಯ ಒಳಗೆ ಬಂದು ನಮ್ಮನ್ನು ಐಡಿಗಳನ್ನು ಕೇಳಲಾರಂಭಿಸಿದರು. ನಾನು ನನ್ನ ಐಡಿಯನ್ನು ತೋರಿಸಿದ  ನಂತರ ಮನೀಶ್ ನನ್ನು ಎಬ್ಬಿಸಿದೆ. ತಡರಾತ್ರಿಯಲ್ಲಿ ನೀವು ಯಾಕೆ ನಮಗೆ ತೊಂದರೆ ಮಾಡುತ್ತಿದ್ದೀರಿ ಎಂದು ಮನೀಷ್ ಪೊಲೀಸರನ್ನು ಕೇಳಿದರು. ನಂತರ ಪೊಲೀಸರು ನಮ್ಮನ್ನು ಬೆದರಿಸಲು ಆರಂಭಿಸಿದರು'' ಎಂದು ಹೋಟೆಲ್ ಕೊಠಡಿಯೊಳಗಿದ್ದವರಲ್ಲಿ ಒಬ್ಬರಾದ ಹರ್ವೀರ್ ಸಿಂಗ್ ಹೇಳಿದರು.

 "ಪೊಲೀಸರು ನನ್ನನ್ನು ಹೊರಗೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ, ಮನೀಶ್‌ನನ್ನು ಕೊಠಡಿಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ನಾನು ನೋಡಿದೆ ಹಾಗೂ  ಅವನ ಮುಖದ ಮೇಲೆ ರಕ್ತವಿತ್ತು "ಎಂದು ಸಿಂಗ್ ಅವರು ಹೇಳಿದರು.

ಹೋಟೆಲ್‌ನಲ್ಲಿ ತಂಗಿರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಗೋರಖ್‌ಪುರ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News