×
Ad

ವಿಮಾನ ಸಂಚಾರ ಪುನರಾರಂಭ ಮಾಡುವಂತೆ ಭಾರತಕ್ಕೆ ತಾಲಿಬಾನ್ ಕೋರಿಕೆ

Update: 2021-09-29 23:22 IST

ಕಾಬೂಲ್, ಸೆ. 29: ಅಫ್ಗಾನಿಸ್ತಾನಕ್ಕೆ ವಾಣಿಜ್ಯ ವಿಮಾನಗಳ ಸಂಚಾರವನ್ನು ಪುನರಾರಂಭಿಸುವಂತೆ ಕೋರಿ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ತಾಲಿಬಾನ್ ಪತ್ರದ ಮೂಲಕ ವಿನಂತಿಸಿದೆ ಎಂದು ವರದಿಯಾಗಿದೆ.

ಆಗಸ್ಟ್ 15ರಂದು ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಭಾರತದೊಂದಿಗೆ ತಾಲಿಬಾನ್ ಆಡಳಿತ ನಡೆಸಿರುವ ಪ್ರಪ್ರಥಮ ಅಧಿಕೃತ ಸಂವಹನ ಇದಾಗಿದೆ. ಭಾರತವು ಅಫ್ಫಾನ್ ನ ವಾಯುಕ್ಷೇತ್ರದ ಬಳಕೆ ಸ್ಥಗಿತಗೊಳಿಸಿದ ಬಳಿಕ ಹಲವು ಅಂತರ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೂ ಈ ಕ್ರಮವನ್ನು ಅನುಸರಿಸಿದ್ದವು.

ಅಫ್ಫಾನ್ ನ ನಾಗರಿಕ ವಿಮಾನಯಾನ ಮತ್ತು ಸಾರಿಗೆ ಇಲಾಖೆಯ ಹಂಗಾಮಿ ಸಚಿವ ಹಮೀದುಲ್ಲಾ ಅಖುಂದ್ ಝಾದಾ ಅವರು ಭಾರತದ ನಾಗರಿಕ ವಿಮಾನಯಾನ ನಿರ್ದೇಶಕ ಅರುಣ್ ಕುಮಾರ್ಗೆ ಬರೆದಿರುವ ಸೆ.7ರ ದಿನಾಂಕ ಹೊಂದಿರುವ ಪತ್ರದಲ್ಲಿ ಈ ಕೋರಿಕೆ ಮಾಡಿದ್ದು ಅಫ್ಗಾನ್ನ ವಿಮಾನಯಾನ ಸಂಸ್ಥೆಗಳಾದ ಕಮ್ ಏರ್ ಮತ್ತು ಅರಿಯಾನಾ ಅಫ್ಗಾನ್ ಏರ್ಲೈನ್ನ ವಿಮಾನಗಳು ಭಾರತಕ್ಕೆ ಸಂಚರಿಸಲು, ಭಾರತದ ವಿಮಾನಗಳು ಅಫ್ಗಾನ್ಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
  
ಇತ್ತೀಚೆಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಪಡೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡ ಸಂದರ್ಭ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದ್ದು ಕಾರ್ಯನಿರ್ವಹಿಸಲು ಅಸಾಧ್ಯದ ಸ್ಥಿತಿ ಇದ್ದುದು ನಿಮಗೆ ತಿಳಿದಿದೆ. ನಮ್ಮ ಖತರ್ ಸಹೋದರರ ತಾಂತ್ರಿಕ ನೆರವಿನಿಂದ ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು ಈ ಕುರಿತ ಸೂಚನೆಯನ್ನು ಸೆಪ್ಟಂಬರ್ 6ರಂದು ನೀಡಲಾಗಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ನ ನಾಗರಿಕ ವಿಮಾನಯಾನ ಇಲಾಖೆ ಅಂತರ್ ರಾಷ್ಟ್ರೀಯ ವಿಮಾನಗಳಿಗೆ ಪೂರ್ಣ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ವಿಷಯದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಶೀಘ್ರ ನಿರ್ಧಾರ ಕೈಗೊಳ್ಳುತ್ತದೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News