ಪೊಲೀಸ್ ಇಲಾಖೆಯ ನೈತಿಕತೆ ಪ್ರಶ್ನಿಸುತ್ತಿರುವ ಅನೈತಿಕ ಪೊಲೀಸರು

Update: 2021-09-30 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪೊಲೀಸ್ ವ್ಯವಸ್ಥೆ ದುರ್ಬಲವಾಗಿರುವಲ್ಲಿ ದುಷ್ಕರ್ಮಿಗಳು ವಿಜೃಂಭಿಸುತ್ತಾರೆ. ದೇಶದಲ್ಲಿ ನಡೆದ ಎಲ್ಲಾ ಕೋಮುಗಲಭೆಗಳು, ಕಾನೂನು ವ್ಯವಸ್ಥೆಯ ನಿಷ್ಕ್ರಿಯತೆಯ ಕಾರಣದಿಂದ ನಡೆದಿವೆ. ಗುಜರಾತ್, ಮುಂಬೈ ಅಥವಾ ಇತ್ತೀಚೆಗೆ ನಡೆದ ದಿಲ್ಲಿ ಗಲಭೆಗಳೇ ಇರಲಿ, ಪೊಲೀಸ್ ಇಲಾಖೆಯ ವೈಫಲ್ಯದ ಪಾತ್ರವನ್ನು ವರದಿಗಳು ಹೇಳುತ್ತವೆ. ಕೆಲವು ಗಲಭೆಗಳಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸದೆ ಸುಮ್ಮಗಿದ್ದರೆ, ಇನ್ನು ಕೆಲವು ಗಲಭೆಗಳಲ್ಲಿ ದುಷ್ಕರ್ಮಿಗಳ ಜೊತೆಗೆ ಪೊಲೀಸರೂ ಭಾಗವಹಿಸಿದ ಆರೋಪಗಳು ವರದಿಯಾಗಿವೆ. ಎಂತಹ ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸರು ಕಟ್ಟು ನಿಟ್ಟಾದ ಕ್ರಮ ತೆಗೆದುಕೊಂಡಾಗ, ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಗಲಭೆ ನಡೆಸುವ ಧೈರ್ಯವನ್ನು ದುಷ್ಕರ್ಮಿಗಳು ತೋರಿಸಿದ್ದಿಲ್ಲ.

ಇದೀಗ ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಅನೈತಿಕ ಪೊಲೀಸ್ ಗಿರಿ ಸುದ್ದಿಯಲ್ಲಿದೆ. ವಿಪರ್ಯಾಸವೆಂದರೆ, ಈ ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗವಹಿಸುತ್ತಿರುವ ಬಹುತೇಕ ದುಷ್ಕರ್ಮಿಗಳು ಪೊಲೀಸರಿಗೆ ‘ಬೇಕಾದವರು’. ಗೂಂಡಾಗಿರಿ, ಕಳವು, ಅಕ್ರಮಗಳಲ್ಲಿ ಗುರುತಿಸಿಕೊಂಡು ಪೊಲೀಸರ ಅತಿಥಿಗಳಾದವರೇ ಇಂದು ರಾಜ್ಯದಲ್ಲಿ ‘ಅನೈತಿಕ ಪೊಲೀಸರ’ ವೇಷದಲ್ಲಿ ಮಿಂಚುತ್ತಿರುವವರು. ಯಾರು ಯಾರ ಜೊತೆಗೆ ಓಡಾಡಬೇಕು, ರೈತರು ತಮ್ಮ ಜಾನುವಾರುಗಳನ್ನು ಯಾರಿಗೆ ಯಾವಾಗ ಮಾರಬೇಕು ಎನ್ನುವುದನ್ನೂ ಇವರೇ ನಿರ್ಧರಿಸಲು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ಈ ‘ಅನೈತಿಕ ಪೊಲೀಸ್’ಗಿರಿಯ ಕುರಿತಂತೆ ತಳೆದಿರುವ ಮೃದು ನಿಲುವೇ ಇಂದು ರಾಜ್ಯಾದ್ಯಂತ ಪ್ರಕರಣ ಹೆಚ್ಚುವುದಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ ಎಂದು ಒಂದೆಡೆ ರಾಜಕಾರಣಿಗಳು ವೇದಿಕೆಗಳಲ್ಲಿ ಭಾಷಣ ಬಿಗಿಯುತ್ತಿದ್ದರೆ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ರಾಜಕಾರಣಿಗಳ ನೆರವಿನಿಂದಲೇ ದುಷ್ಕರ್ಮಿಗಳು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ಮತ್ತು ಅರಾಜಕತೆ ಜೊತೆ ಜೊತೆಯಾಗಿ ಸಾಗಲಾರವು ಎನ್ನುವ ಪ್ರಾಥಮಿಕ ಅರಿವೂ ಇಲ್ಲದ ರಾಜಕಾರಣಿಗಳೇ, ಜಿಲ್ಲೆಯ ಭವ್ಯಕ್ಕೆ ಬಹುದೊಡ್ಡ ತೊಡಕಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಲೆನಾಡಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳೆಲ್ಲ ‘ಸಂಸ್ಕೃತಿ ರಕ್ಷಕ’, ‘ಗೋ ರಕ್ಷಕ’ ಮುಖವಾಡಗಳೊಂದಿಗೆ ಓಡಾಡುತ್ತಿದ್ದಾರೆ. ಈ ಮುಖವಾಡದೊಂದಿಗೆ ಅವರು ನಡೆಸುವ ಯಾವುದೇ ಕ್ರಿಮಿನಲ್ ಚಟುವಟಿಕೆಗಳೂ, ಕಾನೂನಿನ ಪರೋಕ್ಷ ಮಾನ್ಯತೆಯನ್ನು ಪಡೆಯುತ್ತವೆ. ನಿರ್ದಿಷ್ಟ ಬಣ್ಣದ ಶಾಲು ಮತ್ತು ರಾಜಕೀಯ ಬೆಂಬಲವನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡಿರುವ ಈ ತಂಡ, ಯಾವುದೇ ಬಸ್ ಅಥವಾ ಇನ್ನಿತರ ವಾಹನಗಳನ್ನು ತಡೆದು ‘ಯಾರು? ಯಾರ ಜೊತೆಗೆ? ಯಾಕೆ?’ ಪ್ರಯಾಣಿಸುತ್ತಿದ್ದಾರೆ ಎನ್ನುವುದನ್ನು ವಿಚಾರಣೆ ನಡೆಸುವ ಅಧಿಕಾರವನ್ನು ತನ್ನದಾಗಿಸಿಕೊಂಡಂತೆ ವರ್ತಿಸುತ್ತಿವೆ. ಈ ತಂಡ ವಿಚಾರಣೆ ನಡೆಸಿ, ಅಮಾಯಕ ಪ್ರಯಾಣಿಕರನ್ನು, ತರುಣಿಯನ್ನು ಪೊಲೀಸ್ ಠಾಣೆಗೆ ಕೊಂಡೊಯ್ದರೆ, ಮುಂದಿನ ವಿಚಾರಣೆಯನ್ನು ಪೊಲೀಸರು ಕೈಗೆತ್ತಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ. ಇಷ್ಟಕ್ಕೂ ‘ಬಸ್‌ನ್ನು ನಿಮಗೆ ತಡೆಯಲು ಅಧಿಕಾರ ನೀಡಿದವರು ಯಾರು?’ ‘ತರುಣಿಯರನ್ನು ವಿಚಾರಿಸಲು ನಿಮಗೆ ಸರಕಾರ ಅಧಿಕೃತ ಪರವಾನಿಗೆಯನ್ನು ನೀಡಿದೆಯೇ?’ ‘ನಿಮ್ಮ ಇಲಾಖೆ ಯಾವ ವ್ಯಾಪ್ತಿಯಲ್ಲಿ ಬರುತ್ತದೆ?’ ಎಂದು ಅನೈತಿಕ ಪೊಲೀಸರನ್ನು ವಿಚಾರಣೆ ನಡೆಸಿ ಅವರ ಮೇಲೆ ಮೊದಲು ಪೊಲೀಸರು ಕ್ರಮವನ್ನು ತೆಗೆದುಕೊಳ್ಳಬೇಕು. ಉಳಿದಂತೆ ಅಮಾಯಕ ಪ್ರಯಾಣಿಕರು ಅಕ್ರಮವಾಗಿ ಅಥವಾ ಕಾನೂನು ಬಾಹಿರವಾಗಿ ಯಾವುದಾದರೂ ಕೃತ್ಯವೆಸಗಿದ್ದಾರೆ ಎಂದಾದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು. ದುರಂತವೆಂದರೆ, ದುಷ್ಕರ್ಮಿಗಳಿಂದ ಅನೈತಿಕ ಪೊಲೀಸ್‌ಗಿರಿಗೆ ಒಳಗಾದ ಅಮಾಯಕರ ಮೇಲೆಯೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾ ಬಂದಿದ್ದಾರೆ.

ಕಳೆದ ಜನವರಿಯಿಂದ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12ಕ್ಕಿಂತ ಅಧಿಕ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ನಡೆದಿವೆ. ನಾಗರಿಕರು ಈ ಪ್ರಕರಣಗಳನ್ನು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗವಹಿಸುವವರಿಗೆ ಕ್ರಿಮಿನಲ್ ಹಿನ್ನೆಲೆಯಿರುವುದರ ಅರಿವಿದ್ದೂ ಪೊಲೀಸರು ಇವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಇಂತಹ ಪ್ರಕರಣ ಹೆಚ್ಚಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಪೊಲೀಸರು ಮತ್ತು ಸಂಘಪರಿವಾರದ ನಡುವಿನ ಅನೈತಿಕ ಸಂಬಂಧವೂ ಇಂತಹ ಅನೈತಿಕ ಪೊಲೀಸ್‌ಗಿರಿ ಹೆಚ್ಚು ಹೆಚ್ಚು ನಡೆಯುವುದಕ್ಕೆ ಕಾರಣ ಎನ್ನುವುದು ಇನ್ನೊಂದು ವಾದ. ಒಂದು ನಿರ್ದಿಷ್ಟ ಧರ್ಮದ ಮೇಲೆ ದ್ವೇಷವನ್ನು ಹರಡುವುದು, ಅವರೊಳಗೆ ಭೀತಿಯನ್ನು ಬಿತ್ತುವುದು ದುಷ್ಕರ್ಮಿಗಳ ಪ್ರಮುಖ ಉದ್ದೇಶ. ಹಾಗೆಂದು ಇದು ಸಂಘಪರಿವಾರದ ದುಷ್ಕರ್ಮಿಗಳಿಗಷ್ಟೇ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ಮುಸ್ಲಿಮ್ ಹುಡುಗಿಯೊಂದಿಗೆ ಬೈಕ್‌ನಲ್ಲಿ ಸವಾರಿ ಹೊರಟ ಕಾರಣಕ್ಕೆ, ಸಂಘಟನೆಯೊಂದು ತಡೆದು ಹಲ್ಲೆ ನಡೆಸಿತ್ತು. ಕರಾವಳಿಯಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ. ಇಲ್ಲಿರುವ ವಿಶೇಷವೆಂದರೆ, ಒಂದು ನಿರ್ದಿಷ್ಟ ಸಮುದಾಯದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಅತ್ಯಾಸಕ್ತಿಯಿಂದ ಕಠಿಣ ಕ್ರಮ ಕೈಗೊಂಡರೆ, ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತದೆ.

‘ನಕಲಿ ಗೋರಕ್ಷಣೆ’ಗೂ ‘ಅನೈತಿಕ ಪೊಲೀಸ್‌ಗಿರಿ’ಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ರೈತನೊಬ್ಬ ಸಾಕಿದ ಜಾನುವಾರುಗಳನ್ನು ಯಾರಿಗೆ ಮಾರಬೇಕು ಎನ್ನುವ ನಿರ್ಧಾರವನ್ನು ಇಂದು ಬೀದಿಯಲ್ಲಿ ಉಂಡಾಡಿ ಅಲೆಯುತ್ತಿರುವ ‘ನಕಲಿ ಗೋರಕ್ಷಕರು’ ನಿರ್ಧರಿಸುತ್ತಿದ್ದಾರೆ. ಸಾಗಾಟ ಮಾಡುವ ಜಾನುವಾರುಗಳು ಅಕ್ರಮವಾಗಿರಲಿ, ಸಕ್ರಮವಾಗಿರಲಿ, ಅವರ ಮೇಲೆ ಮಾರಣಾಂತಿಕ ದಾಳಿ ನಡೆಸುವ, ಚಾಲಕರ ದುಡ್ಡು, ಮೊಬೈಲ್‌ಗಳನ್ನ್ನು ದೋಚುವ ಪರೋಕ್ಷ ಸಮ್ಮತಿಯನ್ನು ಪೊಲೀಸ್ ಇಲಾಖೆ ನಕಲಿ ಗೋರಕ್ಷಕರಿಗೆ ನೀಡಿದೆ. ಗೋ ಸಾಗಾಟವನ್ನು ತಡೆದು ದಾಳಿ ನಡೆಸಿದ ಹತ್ತು ಹಲವು ಪ್ರಕರಣಗಳು ವರದಿಯಾಗಿದ್ದರೂ, ಸಂತ್ರಸ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹೊರತು, ಈ ನಕಲಿ ಗೋರಕ್ಷಕರ ಮೇಲೆ ಪ್ರಕರಣ ದಾಖಲಿಸಿದ ಉದಾಹಣೆಗಳಿಲ್ಲ. ಕಾನೂನು ಬಾಹಿರವಾಗಿ ಶ್ರೀಸಾಮಾನ್ಯರ ಮೇಲೆ ದಾಳಿ ನಡೆಸಿಯೂ ಸಂಸ್ಕೃತಿ ರಕ್ಷಕರು, ಗೋರಕ್ಷಕರು ಎಂಬ ಬಿರುದಿನ ಜೊತೆಗೆ ಓಡಾಡುವ ಸವಲತ್ತನ್ನು ಕಾನೂನು ಇಲಾಖೆಯೇ ಪರೋಕ್ಷವಾಗಿ ನೀಡಿದರೆ, ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಹೆಚ್ಚದೇ ಇನ್ನೇನಾಗುತ್ತದೆ?

ದುಷ್ಕರ್ಮಿಗಳ ಪರ್ಯಾಯ ಪೊಲೀಸ್‌ಗಿರಿಯಿಂದಾಗಿ ಮಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ಮಹಿಳೆಯರು, ರೈತರು ಮುಕ್ತವಾಗಿ ಓಡಾಡುವುದಕ್ಕೆ ಕಷ್ಟವೆನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪರ ರಾಜ್ಯಗಳಿಂದ ಇಲ್ಲಿನ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ. ಉದ್ಯಮಿಗಳು ಕರಾವಳಿಯಲ್ಲಿ ಬಂಡವಾಳ ಹೂಡುವುದಕ್ಕೆ ಹೆದರುತ್ತಿದ್ದಾರೆ. ಈ ಹಿಂದೆ ಆರೆಸ್ಸೆಸ್‌ನ ನಾಯಕರೊಬ್ಬರು ಉಳ್ಳಾಲವನ್ನು ‘ಪಾಕಿಸ್ತಾನ’ ಎಂದು ಜರೆದಿದ್ದರು. ಆದರೆ ಕಾವಳಿ ಮತ್ತು ಮಲೆನಾಡು ಭಾಗದ ಕಾನೂನು ವ್ಯವಸ್ಥೆಯ ನಿಯಂತ್ರಣ ಹೀಗೆ ದುಷ್ಕರ್ಮಿಗಳ ಕೈಗೆ ಹಸ್ತಾಂತರ ವಾಗುತ್ತಾ ಹೋದರೆ, ಈ ಪ್ರದೇಶವನ್ನು ಹೊರರಾಜ್ಯದ ಜನರು ‘ತಾಲಿಬಾನ್ ಆಕ್ರಮಿತ ವಲಯ’ವಾಗಿ ಗುರುತಿಸಿದರೆ ಅದರಲ್ಲಿ ಅಚ್ಚರಿಯಿಲ್ಲ. ಅದಕ್ಕೆ ಮುನ್ನ ಪೊಲೀಸ್ ಇಲಾಖೆ ತಮ್ಮ ಹೊಣೆಗಾರಿಕೆ ಅರಿತು, ಕಾರ್ಯ ನಿರ್ವಹಿಸಿ ತಮ್ಮ ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳಬೇಕು. ದುಷ್ಕರ್ಮಿಗಳ ಹಿಡಿತದಿಂದ ಕರಾವಳಿಯನ್ನು ಪಾರು ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News