ಇಸ್ರೇಲ್ ಸೇನೆಯಿಂದ ಇಬ್ಬರು ಪೆಲೆಸ್ತೀನಿಯರ ಹತ್ಯೆ

Update: 2021-09-30 16:52 GMT

ರಮಲ್ಲ, ಸೆ.30: ಆಕ್ರಮಿತ ಪಶ್ಚಿಮ ದಂಡೆಯ ಗ್ರಾಮಗಳಲ್ಲಿ ಇಸ್ರೇಲ್ ಸೇನೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಪೆಲೆಸ್ತೀನಿಯರು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಪಶ್ಚಿಮದಂಡೆಯ ಬರ್ಖಿನ್ ಮತ್ತು ಖಬಾತಿಯಾ ನಗರಗಳಲ್ಲಿರುವ ಪೆಲೆಸ್ತೀನಿಯನ್ ನಾಗರಿಕರ ಮನೆಗೆ ನುಗ್ಗಿ ಇಸ್ರೇಲ್ ಸೇನೆ ನಡೆಸುತ್ತಿರುವ ಶೋಧ ಕಾರ್ಯಾಚರಣೆ ಸಂದರ್ಭ ಈ ಹತ್ಯೆ ನಡೆದಿದೆ. ಜೆನಿನ್ ನಗರದ ವಾಯವ್ಯದಲ್ಲಿರುವ ಅಲ್ಸಿಲಾಹ್ ಅಲ್ ಹರಿಥಿಯಾ ಗ್ರಾಮದ ನಿವಾಸಿ, 22 ವರ್ಷದ ನಾಸಿರ್ ಮುಹಮ್ಮದ್ ಗುರುವಾರ ಬರ್ಖಿನ್ನಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆ ಸಂದರ್ಭ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಬೆಳಗ್ಗಿನ ವೇಳೆ 12ಕ್ಕೂ ಅಧಿಕ ಮಿಲಿಟರಿ ವಾಹನಗಳಲ್ಲಿ ಆಗಮಿಸಿದ ಇಸ್ರೇಲ್ನ ವಿಶೇಷ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯನ್ನು ಸ್ಥಳೀಯರು ವಿರೋಧಿಸಿದಾಗ ನಡೆದ ಸಂಘರ್ಷದಲ್ಲಿ ಮುಹಮ್ಮದ್ ಮೃತರಾಗಿದ್ದಾರೆ. ಈತನ ಎದೆಗೆ 2, ಕುತ್ತಿಗೆಗೆ 1 ಮತ್ತು ಬಲ ತೊಡೆಗೆ 1 ಗುಂಡು ಹೊಕ್ಕಿದೆ ಎಂದು ಪೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ. ಮುಹಮ್ಮದ್ನನ್ನು ಸುತ್ತುವರಿದ ಸೇನೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿ ಹತ್ಯೆಗೈದಿದೆ. ಗುಂಡಿನ ದಾಳಿಯಿಂದ ನೆಲಕ್ಕುರುಳಿದ ಮುಹಮ್ಮದ್ನ ನೆರವಿಗೆ ಧಾವಿಸಿದ ಆ್ಯಂಬುಲೆನ್ಸ್ ಅನ್ನು ಯೋಧರು ತಡೆದರು ಮತ್ತು ಆತ ಮೃತಪಟ್ಟನೆಂದು ದೃಢಪಟ್ಟ ಬಳಿಕ ಮುಂದೆ ಸಾಗಲು ಅವಕಾಶ ನೀಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.


 ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರನ್ನು ಇಸ್ರೇಲ್ ಸೇನೆ ಬಂಧಿಸಿದೆ. ಖಬತಿಯಾ ಗ್ರಾಮದಲ್ಲಿ 3 ಮಕ್ಕಳ ತಾಯಿ, 30 ವರ್ಷದ ಇಸ್ರಾ ಖುಝೈಮಾ ಇಸ್ರೇಲ್ ಸೇನೆಯ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಈಕೆ ಅಧಿಕಾರಿಯೊಬ್ಬರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದು ಆತ ಆತ್ಮರಕ್ಷಣೆಗೆಂದು ಗುಂಡು ಹಾರಿಸಿದಾಗ ಇಸ್ರಾ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News