×
Ad

ಜಿಲ್ಲಾಸ್ಪತ್ರೆಗಳಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 24 ಹಾಸಿಗೆಗಳಿವೆ: ನೀತಿ ಆಯೋಗ

Update: 2021-09-30 22:27 IST

ಹೊಸದಿಲ್ಲಿ,ಸೆ.30: ಭಾರತದಲ್ಲಿ ಜಿಲ್ಲಾಸ್ಪತ್ರೆಗಳು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 24 ಹಾಸಿಗೆಗಳನ್ನು ಹೊಂದಿದ್ದು,ಬಿಹಾರ ಸರಾಸರಿ ಆರು ಹಾಸಿಗೆಗಳೊಂದಿಗೆ ಕನಿಷ್ಠ ಸ್ಥಾನದಲ್ಲಿದ್ದರೆ 222 ಹಾಸಿಗೆಗಳನ್ನು ಹೊಂದಿರುವ ಪುದುಚೇರಿ ಅಗ್ರಸ್ಥಾನದಲ್ಲಿದೆ ಎಂದು ನೀತಿ ಆಯೋಗವು ಗುರುವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ತಿಳಿಸಿದೆ.

ಜಿಲ್ಲಾಸ್ಪತ್ರೆಗಳು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ (2001ರ ಗಣತಿಯ ಸರಾಸರಿ ಜಿಲ್ಲಾ ಜನಸಂಖ್ಯೆ ಆಧಾರದಲ್ಲಿ) ಕನಿಷ್ಠ 22 ಹಾಸಿಗೆಗಳನ್ನು ಹೊಂದಿರಬೇಕು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳು 2012 ಮಾರ್ಗಸೂಚಿಗಳು ಶಿಫಾರಸು ಮಾಡಿವೆ ಎಂದು ವರದಿಯು ತಿಳಿಸಿದೆ. ವರದಿ ಸಿದ್ಧಪಡಿಸಲು ಆಯೋಗವು 2018-19ರಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ 707 ಜಿಲ್ಲಾಸ್ಪತ್ರೆಗಳ ವೌಲ್ಯಮಾಪನ ನಡೆಸಿತ್ತು. ದೇಶದಲ್ಲಿಯ ಜಿಲ್ಲಾಸ್ಪತ್ರೆಗಳು ಪ್ರತಿ ಒಂದು ಲ.ಜನಸಂಖ್ಯೆಗೆ ಒಂದರಿಂದ 408ರವರೆಗೆ ಹಾಸಿಗೆಗಳನ್ನು ಹೊಂದಿವೆ. 217 ಆಸ್ಪತ್ರೆಗಳು ಪ್ರತಿ ಒಂದು ಲ.ಜನಸಂಖ್ಯೆಗೆ ಕನಿಷ್ಠ 22 ಹಾಸಿಗೆಗಳನ್ನು ಹೊಂದಿವೆ ಎಂದು ವರದಿಯು ತಿಳಿಸಿದೆ.

15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಸರಾಸರಿ ಹಾಸಿಗೆಗಳ ಸಂಖ್ಯೆ 2012ರ ಮಾರ್ಗಸೂಚಿಗಳು ಶಿಫಾರಸು ಮಾಡಿರುವ ಪ್ರತಿ ಒಂದು ಲ.ಜನಸಂಖ್ಯೆಗೆ 22ಕ್ಕಿಂತ ಕಡಿಮೆಯಿದೆ. ಬಿಹಾರ(6), ಜಾರ್ಖಂಡ್(9),ತೆಲಂಗಾಣ(10),ಉ.ಪ್ರದೇಶ(13), ಹರ್ಯಾಣ(13),ಮಹಾರಾಷ್ಟ್ರ(14),ಜಮ್ಮು ಮತ್ತು ಕಾಶ್ಮೀರ(17), ಅಸ್ಸಾಂ(18), ಆಂಧ್ರಪ್ರದೇಶ(18), ಪಂಜಾಬ್(18)‌ ಗುಜರಾತ(19), ರಾಜಸ್ಥಾನ(19), ಪ.ಬಂಗಾಳ(19), ಛತ್ತೀಸ್ಗಡ (20) ಮತ್ತು ಮಧ್ಯಪ್ರದೇಶ(20) ಈ ಗುಂಪಿನಲ್ಲಿವೆ.

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಸ್ಪತ್ರೆಗಳಲ್ಲಿ ಪ್ರತಿ ಒಂದು ಲ.ಜನಸಂಖ್ಯೆಗೆ ಸರಾಸರಿ ಹಾಸಿಗೆಗಳ ಸಂಖ್ಯೆ 2012ರ ಮಾರ್ಗಸೂಚಿಗಳು ಶಿಫಾರಸು ಮಾಡಿರುವ 22 ಅಥವಾ ಅದಕ್ಕಿಂತ ಹೆಚ್ಚಿದೆ. ಪುದುಚೇರಿ(222),ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹ(200),ಲಡಾಖ್(150),ಅರುಣಾಚಲ ಪ್ರದೇಶ (102),ದಮನ್ ಮತ್ತು ದಿಯು (102),ಲಕ್ಷದ್ವೀಪ(78), ಸಿಕ್ಕಿಂ(70), ಮಿಝೋರಾಂ(63), ದಿಲ್ಲಿ(59), ಚಂಡಿಗಡ(57), ಮೇಘಾಲಯ(52), ನಾಗಾಲ್ಯಾಂಡ್(49), ಹಿಮಾಚಲ ಪ್ರದೇಶ (46), ಕರ್ನಾಟಕ(33), ಗೋವಾ(32), ತ್ರಿಪುರಾ(30), ಮಣಿಪುರ(24), ಉತ್ತರಾಖಂಡ(24), ಕೇರಳ(22), ಒಡಿಶಾ(22) ಮತ್ತು ತಮಿಳುನಾಡು (22) ಈ ಗುಂಪಿನಲ್ಲಿವೆ.

ಹಾಸಿಗೆಗಳ ಲಭ್ಯತೆ,ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ 75 ಜಿಲ್ಲಾಸ್ಪತ್ರೆಗಳು ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News