ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ?

Update: 2021-10-01 06:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

'ಕನ್ಹಯ್ಯ ಎಲ್ಲಿ?' ಎಂದು 'ಚೆಲುವ ಕೃಷ್ಣನಿಗೆ' ಮಲ ತಾಯಿ ಯಶೋಧೆ ಹುಡುಕುವಂತೆ ಎಡ ಪಕ್ಷದ ನಾಯಕರು ಅತ್ತಿತ್ತ ಹುಡುಕಾಡುತ್ತಿರುವಾಗ ಅವರು ಕಾಂಗ್ರೆಸ್ ಸೇರಿದ ಸುದ್ದಿ ಮಾಧ್ಯಮಗಳ ಮೂಲಕ ಹೊರ ಬಿದ್ದಿದೆ. ಎಡಪಕ್ಷಗಳ ಹಲವು ನಾಯಕರು ಕನ್ಹಯ್ಯ ಕುರಿತಂತೆ ತೀವ್ರ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಿರಾಶೆ, ಕನ್ಹಯ್ಯರನ್ನು ಕಳೆದುಕೊಂಡದ್ದಕ್ಕೋ, ಕನ್ಹಯ್ಯ ಕಾಂಗ್ರೆಸ್ ಸೇರಿಕೊಂಡದ್ದಕ್ಕೋ ಎನ್ನುವುದು ಸ್ಪಷ್ಟವಿಲ್ಲ. ಕನ್ಹಯ್ಯ ಅವರನ್ನು ಕಳೆದುಕೊಳ್ಳುವ ಮೂಲಕ ಸಿಪಿಐಗೆ ನಷ್ಟವಾಗಿದೆ ಎನ್ನುವುದು ಅವರ ಅಳಲಿನಿಂದ ಮೇಲ್ನೋಟಕ್ಕೇ ಗೊತ್ತಾಗಿ ಬಿಡುತ್ತದೆ. ಇಲ್ಲದೇ ಇದ್ದರೆ, ತಳಸ್ತರದ, ಈಗಷ್ಟೇ ವಿಶ್ವವಿದ್ಯಾನಿಲಯದಿಂದ ಹೊರಬಿದ್ದ ಯುವ ನಾಯಕನ ಪಕ್ಷಾಂತರಕ್ಕೆ ಇಷ್ಟೊಂದು ಆಘಾತ ವ್ಯಕ್ತಪಡಿಸುವ ಅಗತ್ಯವಿರಲಿಲ್ಲ. ಇದೇ ಸಂದರ್ಭದಲ್ಲಿ ಕನ್ಹಯ್ಯ ಅವರನ್ನು ಕಾಂಗ್ರೆಸ್ ಹೇಗೆ ಸ್ವೀಕರಿಸುತ್ತದೆ ಎನ್ನುವುದೂ ಕುತೂಹಲಕರವಾಗಿದೆ.

ಕನ್ಹಯ್ಯ, ಮೇವಾನಿಯಂತಹ ಬೆಂಕಿ ಚೆಂಡುಗಳನ್ನು ಪಕ್ಷಕ್ಕೆ ಸೇರಿಸುವ ಮೂಲಕ, ಇಡೀ ಪಕ್ಷವನ್ನು ರಾಹುಲ್ ಗಾಂಧಿ ಪುನರ್ ಸಂಘಟಿಸಲು ಹೊರಟಿದ್ದಾರೆಯೇ? ಮುಂದಿನ ಮಹಾಚುನಾವಣೆಯ ಹೊತ್ತಿಗೆ ಹಿರಿಯರ ಕಾಂಗ್ರೆಸ್ ಮತ್ತು ಯುವಕರ ಕಾಂಗ್ರೆಸ್ ಎಂದು ಹೋಳಾಗಲಿದೆಯೇ ಎನ್ನುವ ಕುತೂಹಲಕಾರಿ ಚರ್ಚೆಗೆ ರಾಜಕೀಯ ವಲಯ ತೆರೆದುಕೊಂಡಿದೆ. ದೇಶವನ್ನು ಮೋದಿ ಎನ್ನುವ ಹುಸಿ ವರ್ಚಸ್ಸು ಆಳುತ್ತಿರುವಾಗ, ಆ ಸುಳ್ಳಿನ ಬಲೂನನ್ನು ಒಡೆದು, ಯುವ ಸಮೂಹದ ನಡುವೆ ಜಾಗೃತಿ ಮೂಡಲು ಕಾರಣವಾದ ಜೆಎನ್‌ಯು ತಂಡದ ವಿದ್ಯಾರ್ಥಿಗಳಲ್ಲಿ ಪ್ರಮುಖರಾದವರು ಕನ್ಹಯ್ಯ ಕುಮಾರ್. ಹೈದರಾಬಾದ್ ವಿಶ್ವವಿದ್ಯಾನಿಲಯದ ಜಾತಿ ರಾಜಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಪರ ಹೋರಾಟದ ಮೂಲಕ ಈತ ಹಚ್ಚಿದ 'ಆಝಾದಿ ಕಿಚ್ಚು' ಬಳಿಕ ಇಡೀ ದೇಶವನ್ನೇ ವ್ಯಾಪಿಸಿತು. ವೇಮುಲಾ ಆತ್ಮಹತ್ಯೆಯ ಬಗ್ಗೆ ಮಾಯಾವತಿಯಂತಹ ನಾಯಕಿಯೇ ಜಾಣ ವೌನವನ್ನು ತಳೆದಿದ್ದಾಗ, ಕನ್ಹಯ್ಯ ತಂಡ ವೇಮುಲಾ ಪರವಾಗಿ ಧ್ವನಿಯೆತ್ತಿತ್ತು. ವೇಮುಲಾ ಪರವಾದ ಹೋರಾಟ ಮುಂದೆ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ, ಜೆಎನ್‌ಯು ಕಡೆಗೆ ಇಡೀ ವಿಶ್ವವೇ ತಿರುಗಿ ನೋಡುವಂತಾಯಿತು. ಕೇಂದ್ರದ ಸರ್ವಾಧಿಕಾರಿ ನಿಲುವುಗಳನ್ನು ಸಮರ್ಥವಾಗಿ ಪ್ರತಿರೋಧಿಸಲು ವಿರೋಧ ಪಕ್ಷಗಳ ಹಿರಿಯ ನಾಯಕರೇ ವಿಫಲರಾಗಿದ್ದ ಹೊತ್ತಿನಲ್ಲಿ, ಈ ಯುವ ಸಮೂಹ ಕೇಂದ್ರಕ್ಕೆ ತಲೆನೋವಾಗಿ ಕಾಡಿದ್ದು ಸುಳ್ಳಲ್ಲ.

'ದೇಶದ್ರೋಹ'ದ ಆರೋಪ ಹೊರಿಸಿ ಜೈಲಿಗೆ ತಳ್ಳಿ ಇವರನ್ನು ಬಾಯಿ ಮುಚ್ಚಿಸಬಹುದು ಎಂದು ಭಾವಿಸಿದ್ದ ಸರಕಾರಕ್ಕೆ, ಮುಂದೆ ಆ ನಿಲುವೇ ಮುಳುವಾಯಿತು. ಬರೇ ಜೆಎನ್‌ಯುಗೆ ಸೀಮಿತವಾಗಿದ್ದ 'ಆಝಾದಿ ಘೋಷಣೆ' ದೇಶಾದ್ಯಂತ ಹರಡತೊಡಗಿತು. ಜೆಎನ್‌ಯು ಜೊತೆಗೆ ದೇಶದ ಇನ್ನಿತರ ವಿಶ್ವವಿದ್ಯಾನಿಲಯಗಳು ಕೈ ಜೋಡಿಸಿದವು. ಮುಂದೆ ಎನ್‌ಆರ್‌ಸಿ, ಸಿಎಎ ಸೇರಿದಂತೆ ಹತ್ತು ಹಲವು ಹೋರಾಟಗಳ ನೇತೃತ್ವವನ್ನು ಈ ಯುವ ವಿದ್ಯಾರ್ಥಿಗಳು ವಹಿಸಿಕೊಂಡರು. ಕನ್ಹಯ್ಯ, ಉಮರ್ ಖಾಲಿದ್, ಶೆಹ್ಲಾ ರಶೀದ್, ದೇವಾಂಗನಾ, ನತಾಶಾ ನರ್ವಾಲ್, ಜಿಗ್ನೇಶ್ ಮೇವಾನಿ, ಚಂದ್ರಶೇಖರ್ ಆಝಾದ್‌ರಂತಹ ಯುವ ಶಕ್ತಿಗಳು ದೇಶದ ರಾಜಕೀಯ ಧ್ವನಿಯಾಗಿ ಮುನ್ನೆಲೆಗೆ ಬಂದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಈ ಯುವ ನಾಯಕರ ಪಾತ್ರಗಳು ಮಹತ್ವ ಪೂರ್ಣ. ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಪ್ರತಿಭಟಿಸುತ್ತಲೇ ಜನ ನಾಯಕನಾಗಿ ಬೆಳೆದ ಜಿಗ್ನೇಶ್ ಪಕ್ಷೇತರನಾಗಿ ನಿಂತು ಶಾಸಕನಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಿಪಿಐನಿಂದ ಲೋಕಸಭೆಗೆ ಸ್ಪರ್ಧಿಸಿದ ಕನ್ಹಯ್ಯ ಮೂರನೇ ಸ್ಥಾನವನ್ನು ಪಡೆದು ಸೋತರು. ಆದರೆ, ಬರೇ ಒಂದೆರಡು ವರ್ಷಗಳ ವಿದ್ಯಾರ್ಥಿ ಜೀವನದ ಹೋರಾಟದ ಮೂಲಕವೇ ಕನ್ಹಯ್ಯ ರಾಷ್ಟ್ರಮಟ್ಟದಲ್ಲಿ ಬೆಳೆದ ಬೆರಗನ್ನು ನಾವು ಆ ಬಳಿಕವೂ ನಿರಾಕರಿಸಲು ಸಾಧ್ಯವಿಲ್ಲ. ದೇಶದ ಯಾವುದೇ ಹಿರಿಯ ನಾಯಕರಿಗಿಂತ ಪರಿಣಾಮಕಾರಿಯಾಗಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಕನ್ಹಯ್ಯ ಮಾಡುತ್ತಾ ಬಂದಿದ್ದಾರೆ.

 ಕನ್ಹಯ್ಯ ಚುನಾವಣೆಗೆ ನಿಲ್ಲುವವರೆಗೂ ಅವರ ಪಕ್ಷ ಯಾವುದೆನ್ನುವುದು ಸ್ಪಷ್ಟವಾಗಿ ದೇಶದ ಜನರಿಗೆ ತಿಳಿದಿರಲಿಲ್ಲ. ವಿದ್ಯಾರ್ಥಿ ಬದುಕಿನಲ್ಲಿ ಎಡಪಂಥೀಯ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರೂ, ಅದರ ಪ್ರಮುಖ ಕಾರ್ಯಕರ್ತರಾಗಿದ್ದರೂ, ದೇಶದ ಜನರು ಅವರನ್ನು ಸಿಪಿಐ ಪಕ್ಷದ ನೆಲೆಯಲ್ಲಿ ಬೆಂಬಲಿಸಿರಲಿಲ್ಲ. ಹಾಗೆ ನೋಡಿದರೆ ಇಡೀ ಜೆಎನ್‌ಯು ವಿದ್ಯಾರ್ಥಿ ಶಕ್ತಿಯೇ ಒಂದು ಪಕ್ಷವಾಗಿ, ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ಮಾತನಾಡುತ್ತಿತ್ತು. ಎಡಪಂಥೀಯ ಪಕ್ಷಗಳ ಬಗ್ಗೆ ಆಳವಾಗಿ ಅರಿವುಳ್ಳವರಿಗೆ ಅವರು ಕನ್ಹಯ್ಯ ಸಿಪಿಐ ಸದಸ್ಯರೆನ್ನುವುದು ಅರಿವಿತ್ತು. ಆದರೆ ಅವರ ಬೆನ್ನಿಗಿರುವ ಸಿಪಿಐ ಪಕ್ಷವನ್ನು ನೋಡಿ ಯಾರೂ ಕನ್ಹಯ್ಯ ಅವರನ್ನು ಬೆಂಬಲಿಸಿರಲಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಿದೆ. ಎಲ್ಲ ಪಕ್ಷ, ಮತ, ಧರ್ಮಗಳನ್ನು ಮೀರಿದ ಒಂದು ಬೆಂಬಲ ಕನ್ಹಯ್ಯ ಮತ್ತು ಅವರ ಬಳಗಕ್ಕೆ ಸಿಕ್ಕಿತು. ದೇಶದ ಸರ್ವ ಮಾಧ್ಯಮಗಳನ್ನು ಬಳಸಿಕೊಂಡು 'ತಾನು ಆಡಿದ್ದೇ ಮಾತು' ಎಂಬಂತೆ ಮೆರೆಯುತ್ತಿದ್ದ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದ ಈ ಯುವಕರ ತಂಡದ ದೇಶಭಕ್ತಿಗೆ, ರಾಜಕೀಯ ಪ್ರಜ್ಞೆಗೆ ದೇಶದ ದೊಡ್ಡ ಸಮೂಹವೊಂದು ಮಾರು ಹೋಗಿತ್ತು. ಅದಾಗಲೇ ಸಿಪಿಐಯಲ್ಲಿ ಹತ್ತು ಹಲವು ಹಿರಿಯ ನಾಯಕರಿದ್ದರೂ, ತಮ್ಮ ಪ್ರಾಮಾಣಿಕ ಹೋರಾಟದ ಕಾರಣದಿಂದಲೇ ಅವರೆಲ್ಲರನ್ನು ಮೀರಿ ಈ ಯುವಕರು ಜನರನ್ನು ತಲುಪಿದರು.

ಕನ್ಹಯ್ಯ ಮತ್ತು ಅವರ ತಂಡ, ಸಿಪಿಐಯ ಸೂತ್ರದಿಂದ ಅದು ಯಾವತ್ತೋ ಹರಿದು ಹೋಗಿತ್ತು. ತಾನು ಹೋದಲ್ಲೆಲ್ಲ ಭಾಷಣದಲ್ಲಿ ಕೋಮುವಾದಿ, ರೈತ ವಿರೋಧಿ, ಜನಪರ ವಿರೋಧಿ ಸರಕಾರದ ನೀತಿಗಳನ್ನು ಟೀಕಿಸುತ್ತಿದ್ದರೇ ಹೊರತು, ಅವರು ಎಂದಿಗೂ ಒಂದು ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ತನ್ನನ್ನು ಅಲ್ಲಿ ಘೋಷಿಸಿಕೊಂಡು ಮಾತನಾಡುತ್ತಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿ ಆತ್ಮವಿಶ್ವಾಸದಿಂದ ಕನ್ಹಯ್ಯ ಸ್ಪರ್ಧಿಸಿದರಾದರೂ, ರಾಜಕೀಯದ ಹತ್ತು ಹಲವು ಒಳ ಸುಳಿಗಳನ್ನು ಅವರು ಆ ಫಲಿತಾಂಶದಲ್ಲಿ ತನ್ನದಾಗಿಸಿ ಕೊಂಡರು. ಬಿಜೆಪಿಯನ್ನು ನೇರಾನೇರವಾಗಿ ಎದುರಿಸುವಲ್ಲಿ ಸಿಪಿಐ ಸಂಪೂರ್ಣ ವಿಫಲವಾಗುತ್ತಿರುವುದನ್ನು, ದೇಶದೊಳಗಿರುವ ಜಾತಿ ವೈರುಧ್ಯಗಳನ್ನು ರಾಜಕೀಯವಾಗಿ ಬಳಸುವಲ್ಲಿ ಅಂದು ಹಿಂಜರಿಯುತ್ತಿರುವುದನ್ನು ಅವರು ಮನಗಂಡಿದ್ದರು. ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಎಡಪಕ್ಷಗಳ ದೊಡ್ಡ ಗುಂಪು ತೃಣಮೂಲ ಕಾಂಗ್ರೆಸ್‌ನ್ನು ಎದುರಿಸುವುದಕ್ಕಾಗಿ ಅನಿವಾರ್ಯವಾಗಿ ಬಿಜೆಪಿಯನ್ನು ಬಳಸಿಕೊಂಡದ್ದು ಅವರನ್ನು ಗೊಂದಲದಲ್ಲಿ ಕೆಡವಿರಬಹುದು. ಹಿರಿಯ ತಲೆಗಳು ತುಂಬಿಕೊಂಡಿರುವ ಸಿಪಿಐಯು, ಕನ್ಹಯ್ಯ ಎನ್ನುವ ಕಿರಿಯನನ್ನು ಏಕಾಏಕಿ ಎತ್ತರದ ಸ್ಥಾನದಲ್ಲಿ ಪರಿಗಣಿಸುವುದು ಅಷ್ಟು ಸುಲಭವಿಲ್ಲ. ಬಿಜೆಪಿಯನ್ನು ಎದುರಿಸಲು ಎಡಪಕ್ಷಗಳ ಸಿದ್ಧ ತಂತ್ರಗಳಾಚೆಗೆ ಯೋಚಿಸುತ್ತಿದ್ದ, ಅದಾಗಲೇ ಆ ಪಕ್ಷದ ಗೆರೆಗಳನ್ನು ದಾಟಿ ಬಿಟ್ಟಿದ್ದ ಕನ್ಹಯ್ಯರನ್ನು ಹಿಡಿದಿರಿಸುವುದು ಎಡಪಕ್ಷಗಳಿಗೂ ಅಷ್ಟು ಸುಲಭವಿರಲಿಲ್ಲ. ಸದ್ಯಕ್ಕೆ ದೇಶಕ್ಕೆ ಅತಿ ದೊಡ್ಡ ಸವಾಲಾಗಿ ಮೋದಿ ನೇತೃತ್ವದ ಸರಕಾರ ಮಾತ್ರವಲ್ಲ, ಆರೆಸ್ಸೆಸ್ ಕೂಡ ಬೆಳೆದಿದೆ. ಇದರ ವಿರುದ್ಧ ಸರ್ವ ಶಕ್ತಿಗಳು ಒಂದಾಗಿ ಹೋರಾಡಬೇಕಾದ ಅನಿವಾರ್ಯ ಸ್ಥಿತಿ ಇದೆ. ದೇಶದ ನೆತ್ತಿಯ ಮೇಲೆ ಸರ್ವಾಧಿಕಾರಿ ಸರಕಾರದ ತೂಗುಗತ್ತಿ ತೂಗುತ್ತಿದೆ.

ಇಂತಹ ಸಂದರ್ಭದಲ್ಲಿ ಎಡಪಕ್ಷಗಳು ಇತರ ಪಕ್ಷಗಳ ಜೊತೆಗೆ ಸೇರಿಕೊಂಡು ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸುವಲ್ಲಿ ಆಸಕ್ತಿ ಹೊಂದಿದ್ದರೆ ಕನ್ಹಯ್ಯ ಅಲ್ಲೇ ಉಳಿದುಕೊಳ್ಳುತ್ತಿದ್ದರೇನೋ. ಅಥವಾ ಕಾಂಗ್ರೆಸ್ ಹೊರತಾದ ಯಾವುದಾದರೂ ಒಂದು ಪಕ್ಷ, ಕನಿಷ್ಠ ಬಿಎಸ್‌ಪಿಯಂತಹ ಪಕ್ಷವಾದರೂ ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ಪ್ರತಿರೋಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಿದ್ದರೆ ನಾವು ಕನ್ಹಯ್ಯ ಅವರ ಕಾಂಗ್ರೆಸ್ ಸೇರ್ಪಡೆಯನ್ನು ಪ್ರಶ್ನಿಸ ಬಹುದಿತ್ತು. ಅಥವಾ ಅವರೂ ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲವೇನೋ. ಈಗಲೂ ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್‌ನೊಳಗಿಂದ ರಾಹುಲ್‌ಗಾಂಧಿಯವರದು ಒಂಟಿ ಧ್ವನಿ. ಕನಿಷ್ಠ ಜಾತ್ಯತೀತತೆಯ ತಳಹದಿಯಲ್ಲಿ ಕಾಂಗ್ರೆಸ್‌ನ್ನು ಮತ್ತೆ ಸಂಘಟಿಸುವ ಪ್ರಯತ್ನವನ್ನು ರಾಹುಲ್‌ಗಾಂಧಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಜಾತ್ಯತೀತ ಸ್ವರೂಪವನ್ನು ಉಳಿಸಲು ಕಾಂಗ್ರೆಸ್ ಶಕ್ತವಾಗುತ್ತದೆ ಎಂಬ ನಂಬಿಕೆ ಕನ್ಹಯ್ಯ ಅವರಿಗೆ ಬಂದಿದೆಯಾದರೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಕಾಂಗ್ರೆಸ್ ಜೊತೆಗೆ ಹಲವೆಡೆ ಎಡಪಕ್ಷಗಳು ಒಪ್ಪಂದ ಮಾಡಿಕೊಂಡಿವೆ. ಕೆಲವೆಡೆ ಬಿಜೆಪಿಯ ಜೊತೆಗೆ ಗುಟ್ಟಾಗಿ ಕೈ ಜೋಡಿಸಿವೆ. ಇಂತಹ ಸಂದರ್ಭದಲ್ಲಿ, ಎಡಪಕ್ಷದ ತಳಸ್ತರದ ನಾಯಕನೊಬ್ಬ ಬಿಜೆಪಿಯನ್ನು ಎದುರಿಸುವಲ್ಲಿ ಎಡಪಕ್ಷದ ಶಕ್ತಿಯ ಕುರಿತಂತೆ ನಂಬಿಕೆ ಕಳೆದುಕೊಂಡು, ಕಾಂಗ್ರೆಸ್ ಸೇರಿದರೆ, ಆ ಮೂಲಕ ಕಾಂಗ್ರೆಸ್‌ನೊಳಗೆ ಒಂದು ಯುವ ತಲೆ ಮಾರು ಮುನ್ನೆಲೆಗೆ ಬಂದು ಆರೆಸ್ಸೆಸ್ ಮತ್ತು ಮೋದಿ ನೇತೃತ್ವದ ಶಕ್ತಿಗಳ ವಿರುದ್ಧ ಕೆಲಸ ಮಾಡುತ್ತದೆಯಾದರೆ ಅದಕ್ಕೂ ಒಂದು ಅವಕಾಶವನ್ನು ಕೊಡಲೇ ಬೇಕಾಗುತ್ತದೆ. ಯಾಕೆಂದರೆ ಅದಕ್ಕೆ ಹೊರತಾದ ಪರ್ಯಾಯ ನಿರೀಕ್ಷೆಗಳನ್ನು ಹುಟ್ಟಿಸುವ ಯಾವುದೇ ರಾಜಕೀಯ ಶಕ್ತಿ ನಮ್ಮ ಮುಂದೆ ಕಾಣಿಸುತ್ತಿಲ್ಲ. ಇರುವ ಹಿರಿಯರೆಲ್ಲರೂ ಮೋದಿಯ ಸುಳ್ಳಿನ ಮುಂದೆ ಸತ್ಯವನ್ನು ಮುಂದಿಡಲು ಯತ್ನಿಸಿ ದಣಿದು ಸೋತವುಗಳಂತೆ ವರ್ತಿಸುತ್ತಿದ್ದಾರೆ. ಆದುದರಿಂದ, ಕನ್ಹಯ್ಯ ಅವರ ಪಕ್ಷಾಂತರ ನಿರ್ಧಾರವನ್ನು ನಾವು ತಾಳ್ಮೆಯಿಂದ ಗಮನಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News