ಗಿನಿಯಾ: ಹಂಗಾಮಿ ಅಧ್ಯಕ್ಷರಾಗಿ ಮಮದಿ ದೌಂಬುಯಾ ಪ್ರಮಾಣ ವಚನ
ಕೊನಾಕ್ರಿ, ಅ.2: ಸೆಪ್ಟಂಬರ್ 5ರಂದು ಕ್ಷಿಪ್ರಕ್ರಾಂತಿಯ ಮೂಲಕ ಅಧ್ಯಕ್ಷರನ್ನು ಪದಚ್ಯುತಗೊಳಿಸುವಲ್ಲಿ ನೇತೃತ್ವ ವಹಿಸಿದ್ದ ಸೇನಾಧಿಕಾರಿ ಕರ್ನಲ್ ಮಮದಿ ದೌಂಬುಯಾ ಗಿನಿಯಾದ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇಶದ ಚುನಾವಣಾ ವ್ಯವಸ್ಥೆಯನ್ನು ಮರುರೂಪಿಸಿದ ಬಳಿಕ ದೇಶದಲ್ಲಿ ಮುಕ್ತ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಚುನಾವಣೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ಗಿನಿಯಾದ ಅಧ್ಯಕ್ಷರಾಗಿದ್ದ ಅಲ್ಫಾ ಕೋಂಡೆ ಸೆ.5ರಂದು ನಡೆದ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡಿದ್ದರು. ದೇಶದ ಹಂಗಾಮಿ ಅಧ್ಯಕ್ಷರಾಗಿ ದೌಂಬುಯಾರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನವನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರು ಬೋಧಿಸಿದರು. ಮಧ್ಯಂತರ ಅಧ್ಯಕ್ಷರಾಗಿ ದೌಂಬುಯಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಹೇಳಿದ್ದು, ಚುನಾವಣೆ ನಡೆಯುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಪ್ರಮಾಣವಚನದ ಬಳಿಕ ಮಾತನಾಡಿದ ದೌಂಬುಯಾ, ತಾನು ಅಥವಾ ಸೇನಾ ಸರಕಾರದ ಯಾವುದೇ ಸದಸ್ಯ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಚುನಾವಣಾ ವ್ಯವಸ್ಥೆಯನ್ನು ಮರು ರೂಪಿಸಿ, ನೂತನ ಸಂವಿಧಾನ ರಚಿಸಿ, ದೇಶವನ್ನು ಮತ್ತೆ ಸ್ಥಾಪಿಸಿದ ಬಳಿಕ ಮುಕ್ತ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಚುನಾವಣೆ ನಡೆಯಲಿದೆ. ದೇಶವು ಒಪ್ಪಿಕೊಂಡಿರುವ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬದ್ಧತೆಗಳನ್ನು ಗೌರವಿಸಲಾಗುವುದು ಎಂದು ಘೋಷಿಸಿದ್ದಾರೆ.