ಒಮಾನ್‌ ಗೆ ಅಪ್ಪಳಿಸಿದ ಶಾಹೀನ್‌ ಚಂಡಮಾರುತ: ಕನಿಷ್ಠ ಮೂವರು ಬಲಿ, ನಿವಾಸಿಗಳ ಸ್ಥಳಾಂತರ

Update: 2021-10-03 14:24 GMT
Photo: twitter/omanobserver

ಉಷ್ಣವಲಯದ ಚಂಡಮಾರುತ ಶಾಹೀನ್‌ ಅಬ್ಬರಕ್ಕೆ ಒಮಾನ್‌ ತತ್ತರಿಸಿದ್ದು, ಕನಿಷ್ಠ ಮೂವರು ಬಲಿಯಾಗಿದ್ದಾರೆ ಎಂದು reuters ವರದಿ ಮಾಡಿದೆ. ಕರಾವಳಿ ಪ್ರದೇಶಗಳನ್ನು ತ್ಯಜಿಸುವಂತೆ ನಿವಾಸಿಗಳಿಗೆ ಅಲ್ಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆಂದು ವರದಿ ತಿಳಿಸಿದೆ. ರಾಜಧಾನಿ ಮಸ್ಕತ್‌ ನಿಂದ ವಿಮಾನ ಯಾನವನ್ನೂ ಸ್ಥಗಿತಗೊಳಿಸಲಾಗಿದೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಗುವಿನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಚಂಡಮಾರುತದ ಪರಿಣಾಮದಿಂದ ಕೈಗಾರಿಕಾ ವಲಯದ ವಸತಿ ಪ್ರದೇಶದ ಮೇಲೆ ಗುಡ್ಡ ಕುಸಿದ ಪರಿಣಾಮ ಏಷ್ಯಾದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಚಂಡಮಾರುತವು ಮಸ್ಕತ್ ನಿಂದ ಸುಮಾರು 60 ಕಿಮೀ (40 ಮೈಲಿ) ದೂರದಲ್ಲಿದೆ ಮತ್ತು ಇದು 120 ಕಿಮೀ (75 ಎಮ್ಪಿಎಚ್) ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬೀಸುತ್ತಿದೆ ಎಂದು ದೇಶದ ಅಪಾಯ, ಹವಾಮಾನ ಮತ್ತು ನಾಗರಿಕ ವಿಮಾನಯಾನ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿವೆ.

ಅಪಘಾತಗಳನ್ನು ತಪ್ಪಿಸಲು ರಾಜಧಾನಿಯ ಪೂರ್ವದಲ್ಲಿರುವ ಅಲ್-ಕುರ್ಮ್ ನಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗುವುದು ಎಂದು ರಾಷ್ಟ್ರೀಯ ತುರ್ತು ಸಮಿತಿಯು ಹೇಳಿದ್ದು, 2,700 ಕ್ಕೂ ಹೆಚ್ಚು ಜನರನ್ನು ತುರ್ತು ಆಶ್ರಯದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಐದು ಮಿಲಿಯನ್ ಗೂ ಅಧಿಕ ಜನರು ಮಸ್ಕತ್ ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಚಂಡಮಾರುತದ ಪ್ರಭಾವ ಸಂಪೂರ್ಣ ಸ್ಥಗಿತವಾಗುವವರೆಗೂ ರಾಜಧಾನಿಯ ರಸ್ತೆಗಳು ತುರ್ತು ಪ್ರಯಾಣದ ವಾಹನಗಳಿಗೆ ಮಾತ್ರ ತೆರೆದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯ ನಿರೀಕ್ಷೆಯಿರುವ ಕಡಲತೀರಗಳು ಮತ್ತು ಕಣಿವೆಗಳ ಬಳಿ ಭದ್ರತಾ ಗಸ್ತು ನಡೆಸುವ ಮೂಲಕ ಸುರಕ್ಷತೆಯನ್ನು ಪೊಲೀಸರು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News