ರೈತ ಹೋರಾಟ ಹಿಂಸೆಯ ಪ್ರಚೋದನೆಗೆ ಬಲಿಯಾಗದಿರಲಿ

Update: 2021-10-05 06:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದ ಬರ್ಬರ ಹಿಂಸಾಚಾರ ಅನಿರೀಕ್ಷಿತವೇನೂ ಅಲ್ಲ. ರೈತರ ಧರಣಿಯನ್ನು ಪೊಲೀಸರ ಮೂಲಕ, ಸಂಘಪರಿವಾರ ಕಾರ್ಯಕರ್ತರ ಮೂಲಕ ಬೆದರಿಸುವ, ಅವರ ಮೇಲೆ ದಾಳಿ ನಡೆಸಿ ಅವರನ್ನು ಹಿಂಜರಿಯುವಂತೆ ಮಾಡುವ ಪ್ರಯತ್ನ ಹಿಂದೆಯೂ ಹಲವು ಬಾರಿ ನಡೆದಿದ್ದವು. ಗಣರಾಜ್ಯೋತ್ಸವ ದಿನದಂದು ಈ ನಿಟ್ಟಿನಲ್ಲಿ ದೊಡ್ಡದೊಂದು ಪ್ರಯತ್ನವನ್ನು ಸರಕಾರ ನಡೆಸಿತಾದರೂ, ರೈತರ ಅಪಾರ ತಾಳ್ಮೆ ಮತ್ತು ಅಹಿಂಸೆಯ ನಡೆಯಿಂದಾಗಿ ಅದು ವಿಫಲವಾಯಿತು. ಇದಾದ ಬಳಿಕ, ನ್ಯಾಯಾಲಯದ ಮೂಲಕವೇ ರೈತರ ಪ್ರತಿಭಟನೆಯನ್ನು ಅಕ್ರಮವೆಂದು ಘೋಷಿಸುವ ತನ್ನ ಪ್ರಯತ್ನವನ್ನು ಮುಂದುವರಿಸುತ್ತಾ ಬಂದಿದೆ. ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರ, ಭವಿಷ್ಯದಲ್ಲಿ ರೈತರು ಮತ್ತು ಪ್ರಭುತ್ವದ ನಡುವೆ ನಡೆಯಬಹುದಾದ ಭೀಕರ ಸಂಘರ್ಷವೊಂದರ ಸೂಚನೆಯನ್ನು ನೀಡಿದೆ. ಸಿಎಎ ಪ್ರತಿಭಟನಾಕಾರರನ್ನು ಬಗ್ಗು ಬಡಿದಂತೆ, ಅವರಿಗೆ ಉಗ್ರರು ಎಂಬ ಹಣೆ ಪಟ್ಟಿ ಕಟ್ಟಿ ಜೈಲಿಗೆ ತಳ್ಳಿದಂತೆ ಪ್ರತಿಭಟನಾ ನಿರತ ರೈತರನ್ನು ಜೈಲಿಗೆ ತಳ್ಳಲು ಉತ್ತರ ಪ್ರದೇಶ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ, ತನ್ನದೇ ಗೂಂಡಾಗಳನ್ನು ರೈತರ ಮೇಲೆ ಛೂ ಬಿಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಈ ಕಾರಣದಿಂದಲೇ, ರೈತರ ಮೇಲೆ ಕಾರು ಹರಿದದ್ದು ಆಕಸ್ಮಿಕ ಎನ್ನುವಂತಿಲ್ಲ.

ರೈತರನ್ನು ಪ್ರಚೋದಿಸುವುದಕ್ಕಾಗಿಯೇ ಇಂತಹದೊಂದು ಕೃತ್ಯ ನಡೆದಿದೆ. ಈ ಪ್ರಚೋದನೆಯ ಕೆಲಸದಲ್ಲಿ ಸರಕಾರ ಭಾಗಶಃ ಯಶಸ್ವಿಯಾಗಿದೆ. ಹಿಂಸಾಚಾರದಲ್ಲಿ ಒಂಭತ್ತು ಮಂದಿ ಸತ್ತಿದ್ದಾರೆ. ರೈತರ ಪ್ರತಿಭಟನೆ ಹಿಂಸೆಗೆ ತಿರುಗಬೇಕು ಎನ್ನುವುದು ಸರಕಾರದ ಇಚ್ಛೆಯೂ ಆಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರ್ಯಾಲಿ ಹಿಂಸೆಗೆ ತಿರುಗಿದ್ದಿದ್ದರೆ, ರೈತ ಪ್ರತಿಭಟನೆಯನ್ನು ಸರಕಾರ ಸುಲಭವಾಗಿ ಮುಗಿಸಿ ಬಿಡುತ್ತಿತ್ತು. ಪೊಲೀಸರು ಲಾಠಿ ಬೀಸಿದರೂ, ಜಲಫಿರಂಗಿ ಸಿಡಿಸಿದರೂ ರೈತರು ಪ್ರತಿಹಿಂಸೆಯನ್ನು ಮಾಡಲಿಲ್ಲ. ಪ್ರತಿಭಟನೆಯ ಸಂದರ್ಭದಲ್ಲೇ ಬೇಡಿಕೆ ಈಡೇರಿಸಲು ಒತ್ತಾಯಿಸಿ ಧಾರ್ಮಿಕ ಮುಖಂರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ನೂರಾರು ರೈತರು ಒಬ್ಬೊಬ್ಬರಂತೆ ಅಸೌಖ್ಯದಿಂದ ರಸ್ತೆಯಲ್ಲೇ ಮೃತಪಟ್ಟಾಗಲೂ ಪ್ರತಿಭಟನಾಕಾರರು ರೊಚ್ಚಿಗೇಳಲಿಲ್ಲ. ರೈತರ ಅಹಿಂಸಾತ್ಮಕ ನಿಲುವು ಸರಕಾರಕ್ಕೆ ಅತಿ ದೊಡ್ಡ ಸಮಸ್ಯೆಯಾಗಿದೆ. ಇಲ್ಲವಾದರೆ ಸಿಎಎ ಪ್ರತಿಭಟನಾಕಾರರನ್ನು ದಮನಿಸಿದಂತೆಯೇ ರೈತರನ್ನು ದಮನಿಸಬಹುದಿತ್ತು. ಅವರ ತಲೆಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ ಆರೋಪವನ್ನು ಕಟ್ಟಸಬಹುದಿತ್ತು. ದೇಶದ ಮುಂದೆ ಅವರನ್ನು ಖಳನಾಯಕರಾಗಿಸಿ, ಬಗ್ಗು ಬಡಿಯಬಹುದಿತ್ತು. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲೂ , 'ಅವರ ತಲೆ ಒಡೆಯಿರಿ' ಎಂಬ ಆದೇಶಗಳನ್ನು ನೀಡಿದ ಉದಾಹರಣೆಗಳು ನಮ್ಮ ಮುಂದಿವೆೆ.

ರೈತರ ಮೇಲೆ ಪೊಲೀಸರ ಮೂಲಕ ಅಥವಾ ಗೂಂಡಾಗಳ ಮೂಲಕ ದಾಳಿ ನಡೆಸಲು ಸರಕಾರಕ್ಕೆ ಇಚ್ಛೆಯಿದೆಯಾದರೂ, ಬೃಹತ್ ಸಂಖ್ಯೆಯ ರೈತರನ್ನು ಎದುರು ಹಾಕಿಕೊಳ್ಳಲು ಅದು ಹೆದರುತ್ತಿದೆ. ಇಷ್ಟಾದರೂ, ಹರ್ಯಾಣದ ಮುಖ್ಯಮಂತ್ರಿ ತಮ್ಮ ಕಾರ್ಯಕರ್ತರಿಗೆ, ರೈತರ ಮೇಲೆ ದಾಳಿ ನಡೆಸಲು ಸೂಚನೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ದೊಣ್ಣೆಗಳನ್ನು ಕೈಗೆತ್ತಿಕೊಳ್ಳಿ, ಅವರ ತಲೆ ಒಡೆಯಿರಿ. ಪೊಲೀಸರ ಬಗ್ಗೆ ಹೆದರಬೇಡಿ, ಜೈಲಿನಿಂದ ಹೊರಬಂದರೆ ನೀವು ದೊಡ್ಡ ನಾಯಕರಾಗುತ್ತೀರಿ' ಎಂಬ ಸಲಹೆಯನ್ನು ಅವರು ಬಿಜೆಪಿ ಕಿಸಾನ್ ಮೋರ್ಚಾ ಕಾರ್ಯಕರ್ತರಿಗೆ ನೀಡಿದ್ದರು. ನಾಯಕರ ಪ್ರಚೋದನೆಯಿಂದಲೇ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ದಾಳಿ ನಡೆಸಲಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 'ಹಿಂಸೆಗಿಳಿದವರು ರೈತರಲ್ಲ' ಎಂದು ಆರೆಸ್ಸೆಸ್‌ನ ನಾಯಕರೂ ಸ್ಪಷ್ಟ ಪಡಿಸಿದ್ದಾರೆ. ಅದರ ಅರ್ಥ, ಹಿಂಸೆಗಿಳಿದವರು ಯಾರು ಎನ್ನುವುದು ಅವರಿಗೆ ಸ್ಪಷ್ಟವಿದೆ. ಹಿಂಸೆಯನ್ನು ಎಡಪಂಥೀಯರು ನಡೆಸಿರಬಹುದು ಎನ್ನುವುದು ಆರೆಸ್ಸೆಸ್‌ನ ಅನುಮಾನವಾಗಿದೆ. ಆದರೆ 'ರೈತರ ತಲೆ ಒಡೆಯಿರಿ' 'ದೊಣ್ಣೆ ಕೈಗೆತ್ತಿಕೊಳ್ಳಿ' ಎಂಬಿತ್ಯಾದಿಯಾಗಿ ಸಾರ್ವಜನಿಕ ವೇದಿಕೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಎಡಪಕ್ಷದ ನಾಯಕರಲ್ಲ. ಆದುದರಿಂದ, ಹಿಂಸಾಚಾರ ಸೃಷ್ಟಿಸುವುದಕ್ಕಾಗಿಯೇ ರಾಜಕೀಯ ನಾಯಕರು ತಮ್ಮ ಗೂಂಡಾಗಳನ್ನು ಸದ್ ಬಳಕೆ ಮಾಡಿಕೊಂಡಿದ್ದಾರೆ ಎಂದು ಅನುಮಾನಿಸಬಹುದು. ಹಿಂಸಾಚಾರ ನಡೆದ ಬೆನ್ನಿಗೇ ಸುಪ್ರೀಂಕೋರ್ಟ್ ಮತ್ತೆ ಜೋರಾಗಿ ಮಾತನಾಡಿದೆ ''ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗ ಪ್ರತಿಭಟನೆ ಎಷ್ಟು ಸರಿ?'' ಎಂದು ಅದು ಕೇಳಿದೆ. ಆದರೆ, ಕಾಶ್ಮೀರ, ಸಿಎಎ, ಎನ್‌ಆರ್‌ಸಿಯಂತಹ ಪ್ರಕರಣಗಳಿಗೆ ಕೋರ್ಟ್ ಎಷ್ಟರಮಟ್ಟಿಗೆ ನ್ಯಾಯ ನೀಡಿದೆ? ಎನ್ನುವುದನ್ನೊಮ್ಮೆ ಆತ್ಮವಿಮರ್ಶೆ ಮಾಡಬೇಕು. ಪ್ರಜಾಸತ್ತೆ ಅಪಾಯದಲ್ಲಿದ್ದಾಗ ತುರ್ತಾಗಿ ವಿಚಾರಣೆ ನಡೆಸಿ, ಆದೇಶಗಳನ್ನು ನೀಡಬೇಕಾದ ಸುಪ್ರೀಂಕೋರ್ಟ್, ಮೀನಮೇಷ ಎಣಿಸುತ್ತಾ ಮುಂದೆ ಹಾಕುತ್ತದೆ. ಒಂದು ವೇಳೆ, ರೈತರು ಬೀದಿಯಲ್ಲಿ ಈವರೆಗೆ ಪ್ರತಿಭಟನೆ ಮುಂದುವರಿಸದೇ ಇದ್ದರೆ, ಕೋರ್ಟ್ ಪ್ರಕರಣದ ಕುರಿತಂತೆ ಇಷ್ಟು ಕಾಳಜಿ ವಹಿಸುತ್ತಿತ್ತೇ?

 ಉತ್ತರ ಪ್ರದೇಶದ ಹಿಂಸಾಚಾರ ಸಣ್ಣ ಪ್ರಯೋಗ. ಮುಂದಿನ ದಿನಗಳಲ್ಲಿ ಸರಕಾರ ನಡೆಸಲಿರುವ ಹಿಂಸಾಚಾರಗಳಿಗೆ ಒಂದು ಪುಟ್ಟ ತಾಲೀಮು ಎಂದು ಭಾವಿಸಬಹುದು. ಯಾಕೆಂದರೆ, ಮೂರು ಕೃಷಿ ನೀತಿಗಳನ್ನು ಪೂರ್ಣ ಪ್ರಮಾಣದಲ್ಲಿ ಹಿಂದೆಗೆಯಲು ಸುಪ್ರೀಂಕೋರ್ಟ್ ಆದೇಶ ನೀಡುತ್ತದೆ ಎಂದು ಭಾವಿಸುವಂತಿಲ್ಲ. ಯಾಕೆಂದರೆ, ಈ ಕೃಷಿ ನೀತಿಯ ಹಿಂದಿರುವುದು ಸರಕಾರವಲ್ಲ, ಕೆಲವು ಕಾರ್ಪೊರೇಟ್ ಶಕ್ತಿಗಳು. ಈ ನೀತಿಗೆ ಪೂರಕವಾಗಿ ಈಗಾಗಲೇ ಅವರು ಭಾರೀ ಪ್ರಮಾಣದ ಬಂಡವಾಳವನ್ನು ಹೂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಏನಾದರೂ ಈ ಕೃಷಿ ನೀತಿಯನ್ನು ತಡೆದರೆ ಅದು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಭಾರೀ ಆಘಾತ ನೀಡಲಿದೆ. ಅಷ್ಟೇ ಅಲ್ಲ, ಮೋದಿ ನೇತೃತ್ವದ ಸರ್ವಾಧಿಕಾರಿ ಆಡಳಿತಕ್ಕೆ ಭಾರೀ ಮುಖಭಂಗವಾಗುತ್ತದೆ. ಈಗಾಗಲೇ ತೆಗೆದುಕೊಂಡ ಹಲವು ನಿರ್ಧಾರಗಳನ್ನು ಪುನರ್ ಪರಿಶೀಲನೆ ಮಾಡಬೇಕಾದ ಒತ್ತಡ ಸರಕಾರಕ್ಕೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ, ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ಸುಪ್ರೀಂಕೋರ್ಟ್ ತೀರ್ಪು ನೀಡುವ ಸಾಧ್ಯತೆಯೇ ಹೆಚ್ಚು. ಈ ತೀರ್ಪನ್ನು ರೈತರು ಒಪ್ಪುವುದು ಕಷ್ಟ. ಇದು ಅಂತಿಮವಾಗಿ ರೈತರು ಮತ್ತು ಸರಕಾರದ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News