‘ಅಪರಾಧ ಎಸಗಿದ ಕೇಂದ್ರ ಸಚಿವರ ಪುತ್ರನನ್ನು ಬಂಧಿಸಿ, ನಮ್ಮಂತಹವರನ್ನು ಬಂಧಿಸಬೇಡಿ’: ಪ್ರಿಯಾಂಕಾ ಗಾಂಧಿ
ಲಕ್ನೊ / ಹೊಸದಿಲ್ಲಿ: ಉತ್ತರಪ್ರದೇಶ ಸರಕಾರವು ತನ್ನನ್ನು 24 ಗಂಟೆಗಳಿಗೂ ಅಧಿಕ ಸಮಯದಿಂದ ಅನಿರ್ದಿಷ್ಟ ಕಾಲ 'ಅನಧಿಕೃತವಾಗಿ' ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರವಿವಾರ ಲಖಿಂಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ವಾಹನವನ್ನು ಹರಿಸಿದ ಆರೋಪದ ಮೇಲೆ ಕೇಂದ್ರ ಸಚಿವರ ಪುತ್ರನ ವಿರುದ್ಧ ಈ ತನಕ ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ?, ಲಕ್ನೋಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಜೀ ಲಖಿಂಪುರ್ ಖೇರಿಗೆ ಹೋಗುತ್ತೀರಾ?ಎಂದು ಪ್ರಶ್ನಿಸಿದರು.
"ಯಾವುದೇ ಆದೇಶವಿಲ್ಲದೆ ಪ್ರತಿಪಕ್ಷದ ಸದಸ್ಯರನ್ನು ಏಕೆ ಬಂಧಿಸಲಾಗಿದೆ ಹಾಗೂ ಅಂತಹ ಭಯಾನಕ ಅಪರಾಧ ಮಾಡಿದ ವ್ಯಕ್ತಿಯನ್ನು ಏಕೆ ಬಂಧಿಸಲಾಗಿಲ್ಲ. ಪ್ರಧಾನಿ ಮೋದಿಯವರೇ ಆರೋಪಿಯನ್ನು ಬಂಧಿಸಿ, ನಮ್ಮಂತಹ ವ್ಯಕ್ತಿಗಳನ್ನು ಬಂಧಿಸಬೇಡಿ" ಎಂದು ಪ್ರಿಯಾಂಕಾ ಗಾಂಧಿ ಅವರು ಸೀತಾಪುರದ ಸರಕಾರಿ ಅತಿಥಿಗೃಹದಿಂದ ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಲಕ್ನೋಗೆ ಶೀಘ್ರವೇ ಭೇಟಿ ನೀಡುತ್ತಿರುವುದನ್ನು ಬೆಟ್ಟು ಮಾಡಿದ ಕಾಂಗ್ರೆಸ್ ನಾಯಕಿ, "ಮೋದಿಜೀ ಆಝಾದಿ (ಸ್ವಾತಂತ್ರ್ಯ) ಆಚರಿಸಲು ಬರುತ್ತಿದ್ದಾರೆ. ನಮಗೆ ಯಾರು ಸ್ವಾತಂತ್ರ್ಯ ನೀಡಿದರು? ರೈತರು ನಮಗೆ ಸ್ವಾತಂತ್ರ್ಯ ನೀಡಿದರು. ಲಕ್ನೋದಲ್ಲಿ ನೀವು ಸ್ವಾತಂತ್ರ್ಯ ಆಚರಿಸಲು ಯಾವ ನೈತಿಕ ಅಧಿಕಾರವಿದೆ ಹಾಗೂ ನಿಮ್ಮ ಮಂತ್ರಿಯನ್ನು ವಜಾ ಮಾಡಿ ಆತನ ಮಗನನ್ನು ಬಂಧಿಸಿಲ್ಲ ಏಕೆ? ಈ ಸಚಿವರು ಮುಂದುವರಿದರೆ ಈ ಸರಕಾರಕ್ಕೆ ಮುಂದುವರೆಯುವ ನೈತಿಕ ಅಧಿಕಾರವಿಲ್ಲ"ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.