ಲಖಿಂಪುರ ಖೇರಿ ಹಿಂಸಾಚಾರ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Update: 2021-10-05 11:30 GMT
Photo: Newslaundry

ಲಖಿಂಪುರ ಖೇರಿ,ಅ.5: ‘ನನ್ನ ಮಗ ಸ್ಥಳದಲ್ಲಿರಲಿಲ್ಲ ’ಇದು ಕೇಂದ್ರ ಸಹಾಯಕ ಗೃಹಸಚಿವ ಅಜಯಕುಮಾರ ಮಿಶ್ರಾ ಅವರು ಅ.3ರಂದು ಸುದ್ದಿಸಂಸ್ಥೆಗಳಿಗೆ ನೀಡಿದ್ದ ಹೇಳಿಕೆ. ಅದೇ ದಿನ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ತಿಕುನಿಯಾದಲ್ಲಿ ಎಂಟು ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಸಚಿವರ ಪುತ್ರ ಆಶಿಷ್ ಮಿಶ್ರಾ ಚಲಾಯಿಸುತ್ತಿದ್ದ ಕಾರು ಸೇರಿದಂತೆ ಸಚಿವರ ಮೂರು ಬೆಂಗಾವಲು ವಾಹನಗಳು ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ನುಗ್ಗಿದ್ದವು ಎಂದು ಆರೋಪಿಸಲಾಗಿದೆ.

ವೇಗವಾಗಿ ಬಂದ ಮೂರು ವಾಹನಗಳು ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದ ರೈತರ ಗುಂಪಿನ ಮೇಲೆ ಚಲಿಸಿದ್ದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾದ 29 ಸೆಕೆಂಡ್ ಗಳ ವೀಡಿಯೊ ತೋರಿಸಿದೆ. ಓರ್ವ ರೈತ ಪುಟಿದು ಕಾರಿನ ಬಾನೆಟ್ ನ ಮೇಲೆ ಬಿದ್ದಿದ್ದರೂ ವಾಹನಗಳ ವೇಗ ಕಡಿಮೆಯಾಗಿರಲಿಲ್ಲ. ಈ ಘಟನೆಯಲ್ಲಿ ನಾಲ್ವರು ರೈತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಇದರ ಬೆನ್ನಿಗೇ ಎರಡು ವಾಹನಗಳು ರಸ್ತೆ ಬದಿಯಲ್ಲಿ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿತ್ತು ಎನ್ನಲಾಗಿದೆ. ಕ್ರುದ್ಧ ರೈತರು ಒಂದು ವಾಹನದಲ್ಲಿದ್ದ ವ್ಯಕ್ತಿಯನ್ನು ಹೊರಗೆಳೆದು ಥಳಿಸುತ್ತಿರುವುದನ್ನು ವೀಡಿಯೊಗಳು ತೋರಿಸಿವೆ.

ಸಂಜೆ ಏಳು ಗಂಟೆಯ ವೇಳೆಗೆ ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ವಾಹನವೊಂದರ ಚಾಲಕ ಮೃತಪಟ್ಟಿದ್ದರು. ಇವರೊಂದಿಗೆ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪರ್ತಕರ್ತನೋರ್ವ ಕೂಡ ಬಲಿಯಾಗಿದ್ದಾನೆ. ಗುಂಡೇಟಿನ ಗಾಯಗಳಿದ್ದ ಆತನ ಮೃತದೇಹ ಶವಾಗಾರದಲ್ಲಿ ಪತ್ತೆಯಾಗಿದ್ದು,ಅಲ್ಲಿಗೆ ಸಾವುಗಳ ಸಂಖ್ಯೆ ಎಂಟಕ್ಕೇರಿತ್ತು.

ಮೂರು ವಾಹನಗಳಲ್ಲಿದ್ದವರು ಉ.ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರನ್ನು ಭೇಟಿಯಾಗಲು ತೆರಳುತ್ತಿದ್ದಾಗ ರೈತರು ಕಲ್ಲು ತೂರಾಟ ಆರಂಭಿಸಿದ್ದರು ಎಂದು ನಂತರ ಸುದ್ದಿಸಂಸ್ಥೆಗೆ ತಿಳಿಸಿದ್ದ ಆಶಿಷ್,ತಾನು ಸ್ಥಳದಲ್ಲಿರಲಿಲ್ಲ ಎಂದು ಹೇಳಿಕೊಂಡಿದ್ದರು. ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ವಾಹನದಿಂದ ಹೊರಗೆಳೆದು ಕೊಂದಿದ್ದಾರೆ. ತಾನು ಎರಡು ದಿನಗಳಿಂದ ಪ್ರತಿಭಟನಾ ಸ್ಥಳದ ಸಮೀಪವೂ ಇರಲಿಲ್ಲ ಎಂದೂ ಆಶಿಷ್ ಹೇಳಿದ್ದರು.

ಘಟನೆಯ ಸಂದರ್ಭ ತನ್ನ ಪುತ್ರ ತನ್ನೊಂದಿಗೆ ತವರೂರು ಬನವೀರಪುರದಲ್ಲಿ ನಡೆಯುತ್ತಿದ್ದ ಕುಸ್ತಿಪಂದ್ಯವನ್ನು ವೀಕ್ಷಿಸುತ್ತಿದ್ದ ಮತ್ತು ಮೌರ್ಯ ಕೂಡ ತಮ್ಮೊಂದಿಗಿದ್ದರು ಎಂದು ವಿವರಣೆ ನೀಡಿರುವ ಅಜಯ್ ಕುಮಾರ್ ಮಿಶ್ರಾ,‌ ಘಟನೆಯ ಹಿಂದೆ ಖಲಿಸ್ತಾನಿ ಕೈವಾಡವಿದೆ ಎಂದು ದೂರಿದ್ದಾರೆ. ಆದರೆ ಪ್ರತ್ಯಕ್ಷದರ್ಶಿಗಳು ಹೇಳುತ್ತಿರುವುದೇ ಬೇರೆ,ಅವರ ಹೇಳಿಕೆಗಳು ಇಲ್ಲಿವೆ.......

‘ನನ್ನೆದುರಿಗೆ ಬನ್ನಿ,ನಿಮಗೆ ಶಿಸ್ತು ಕಲಿಸಲು ಕೇವಲ ಎರಡು ನಿಮಿಷಗಳು ಸಾಕು ’ಎಂದು ಮಿಶ್ರಾ ಸೆ.2ರಂದು ಭಾಷಣವೊಂದರಲ್ಲಿ ಹೇಳಿದ್ದು ಅ.3ರಂದು ಲಖಿಂಪುರದಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿತ್ತು ಎಂದು ತಿಕುನಿಯಾ ನಿವಾಸಿ ಜೋತ್ ಸಿಂಗ್ ಹೇಳಿದರು.
ಮಿಶ್ರಾ ಸೆಪ್ಟಂಬರ್ ನಲ್ಲಿ ಪಾಲಿಯಾಕ್ಕೆ ಭೇಟಿ ನೀಡಿದ್ದಾಗ ರೈತರು ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಿದ್ದರು. ಇದಕ್ಕೆ ತನ್ನ ಭಾಷಣದಲ್ಲಿ ಪ್ರತಿಕ್ರಿಯಿಸಿದ್ದ ಮಿಶ್ರಾ,ರೈತರು ಪಾಲಿಯಾ ಮಾತ್ರವಲ್ಲ,ಲಖಿಂಪುರದಿಂದಲೇ ಕಾಲ್ಕೀಳುವಂತೆ ಮಾಡುತ್ತೇನೆ ಎಂದು ಗುಡುಗಿದ್ದರು.

ಅ.3ರಂದು ಬನವೀರಪುರದಲ್ಲಿ ಸ್ಥಳೀಯ ಕುಸ್ತಿಪಂದ್ಯದಲ್ಲಿ ಪಾಲ್ಗೊಳ್ಳಲು ಮೌರ್ಯ ಮತ್ತು ಮಿಶ್ರಾ ತಿಕುನಿಯಾದ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿದ್ದರು. ಈ ನಾಯಕರಿಗಾಗಿ ಹೆಲಿಪ್ಯಾಡ್ ಆಗಿ ಬಳಕೆಯಾಗಲಿದ್ದ ಮಹಾರಾಜಾ ಅಗ್ರಸೇನ ಕಾಲೇಜು ಮೈದಾನದಲ್ಲಿ ಪ್ರತಿಭಟನೆಗಾಗಿ ರೈತರು ಜಮಾಯಿಸಿದ್ದರು.

ಕುಸ್ತಿ ಪಂದ್ಯ ಪೂರ್ವಾಹ್ನ 11.30ಕ್ಕೆ ಆರಂಭಗೊಳ್ಳಲಿತ್ತು. ಮೌರ್ಯ ಮತ್ತು ಮಿಶ್ರಾರ ಆಗಮನದ ಮುನ್ನ ಜಿಲ್ಲಾಧಿಕಾರಿಗಳು ‘ನೀವು ನಿಮ್ಮ ಪ್ರತಿಭಟನೆಯನ್ನು ಮುಂದುವರಿಸಬಹುದು ಮತ್ತು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬೇರೆ ಮಾರ್ಗವಾಗಿ ತೆರಳುತ್ತಾರೆ ’ಎಂದು ರೈತರಿಗೆ ತಿಳಿಸಿದ್ದರು ಎಂದು ಆಗ ಸ್ಥಳದಲ್ಲಿ ಉಪಸ್ಥಿತರಿದ್ದ ದಿಲ್ಬಾಗ್ ಸಿಂಗ್ ಹೇಳಿದರು.
 
ಹೆಲಿಕಾಪ್ಟರ್ ನ ಬದಲು ರಸ್ತೆ ಮಾರ್ಗವಾಗಿ ಮಿಶ್ರಾ ಮತ್ತು ಮೌರ್ಯ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದ್ದರು. ಇತ್ತ ರೈತರು ಮೈದಾನದಲ್ಲಿಯೇ ಬೀಡು ಬಿಟ್ಟಿದ್ದರು. ಮಿಶ್ರಾ ಮತ್ತು ಮೌರ್ಯ ಬರದಿದ್ದಾಗ ಅವರು ಮೈದಾನದಿಂದ ನಿರ್ಗಮಿಸಲು ಸಜ್ಜಾಗಿದ್ದರು.
ಇದೇ ವೇಳೆ ಮೂರು ವಾಹನಗಳು ತಮ್ಮತ್ತ ವೇಗವಾಗಿ ಬರುತ್ತಿದ್ದವು. ರೈತರ ಗುಂಪು ಸಮೀಪವಾದಾಗಲೂ ಅವು ವೇಗವನ್ನು ತಗ್ಗಿಸಿರಲಿಲ್ಲ. ಕೆಲವು ರೈತರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ವಾಹನಗಳಡಿ ಸಿಲುಕಿದ್ದರು ಮತು ವಾಹನಗಳು ಅವರನ್ನು ಎಳೆದುಕೊಂಡೇ ಮುಂದಕ್ಕೆ ಸಾಗಿದ್ದವು. 

ಇದೇ ವೇಳೆ ಇನ್ನೊಂದು ವಾಹನದಲ್ಲಿದ್ದ ಇಬ್ಬರು ಗುಂಡುಗಳನ್ನು ಹಾರಿಸಲು ಆರಂಭಿಸಿದ್ದರು. ಎಷ್ಟೊಂದು ಧೂಳು ಎದ್ದಿತ್ತೆಂದರೆ ಮೊದಲಿಗೆ ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕಾಣುವುದೂ ಕಷ್ಟವಾಗಿತ್ತು. ಅದೇ ವೇಳೆ ಅವರು ಸತ್ತರು, ಅವರು ಸತ್ತರು ಎಂಬ ಕೂಗುಗಳು ಕೇಳಿ ಬರತೊಡಗಿದ್ದವು. ಓರ್ವ ರೈತನ ಕಣ್ತಲೆಗೆ ಗುಂಡೇಟು ಬಿದ್ದಿತ್ತು ಎಂದು ರೈತ ಜೋಗಮಿತ್ತಲ್ ಸಿಂಗ್ ತಿಳಿಸಿದರು.

ಆದಾಗ್ಯೂ ಎಲ್ಲ ನಾಲ್ವರು ರೈತರು ಗಾಯಗೊಂಡು ವಿಪರೀತ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಮತ್ತು ಗುಂಡೇಟಿನಿಂದ ಯಾರೂ ಸತ್ತಿಲ್ಲ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಗಳು ತಿಳಿಸಿವೆ.

ತಮ್ಮ ಸಹಚರರ ಸಾವುಗಳಿಗೆ ಪ್ರತಿಕ್ರಿಯಿಸಲು ರೈತರು ಮುಂದಾಗುತ್ತಿದ್ದಂತೆ ಒಂದು ವಾಹನದಲ್ಲಿದ್ದವರು ಗುಂಡುಗಳನ್ನು ಹಾರಿಸುತ್ತ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಓಣಿಯಲ್ಲಿ ಓಡತೊಡಗಿದ್ದರು. ರೈತರು ಗಾಯಾಳುಗಳ ಬಳಿಗೆ ಧಾವಿಸಿದ್ದರಾದರೂ ಗುಂಡುಗಳು ಹಾರುತ್ತಿದ್ದರಿಂದ ಅರ್ಧಕ್ಕೇ ನಿಲ್ಲುವಂತಾಗಿತ್ತು. ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅದಾಗಲೇ ಸ್ಥಳದಲ್ಲಿದ್ದ ಪೊಲೀಸರೂ ಓಣಿಯಲ್ಲಿ ಗುಂಡುಗಳನ್ನು ಹಾರಿಸುತ್ತ ಓಡುತ್ತಿದ್ದವರನ್ನು ರಕ್ಷಿಸಲು ಅವರ ಹಿಂದೆಯೇ ಓಡಿದ್ದರು ಎಂದು ಇನ್ನೋರ್ವ ಪ್ರತ್ಯಕ್ಷದರ್ಶಿ ಗುರುಸೇವಕ ಸಿಂಗ್ ತಿಳಿಸಿದರು.

ರೈತರು ವಾಹನದ ಚಾಲಕನನ್ನು ಥಳಿಸುತ್ತಿರುವುದನ್ನು ವೀಡಿಯೊಗಳು ತೋರಿಸಿದ್ದರೂ ಗುರುಸೇವಕ,ತಮ್ಮ ವಾಹನಗಳು ಪಲ್ಟಿಯಾದಾಗ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕ ಮೃತಪಟ್ಟಿದ್ದರು ಎಂದು ಹೇಳಿದರು. ಆಶಿಷ್ ಕಾರಿನಲ್ಲಿ ಇದ್ದಿದ್ದನ್ನು ಪ್ರತಿಯೊಬ್ಬರೂ ನೋಡಿದ್ದಾರೆ ಎಂದು ಜೋಗಮಿತ್ತಲ್ ತಿಳಿಸಿದರು.

ಗುಂಪಿನ ಮೇಲೆ ನುಗ್ಗಿದ ಮೂರು ವಾಹನಗಳಲ್ಲಿ ಒಂದನ್ನು ಆಶಿಷ್ ಚಲಾಯಿಸುತ್ತಿದ್ದನ್ನು ತಾನು ನೋಡಿದ್ದೇನೆ. ಬಳಿಕ ವಾಹನದಿಂದ ಇಳಿದು ಗುಂಡು ಹಾರಿಸುತ್ತ ಓಣಿಯಲ್ಲಿ ಓಡಿದ್ದನ್ನು ತನ್ನಂತೆ ಬಹಳಷ್ಟು ಜನರೂ ನೋಡಿದ್ದಾರೆ ಎಂದು ಇನ್ನೋರ್ವ ಪ್ರತ್ಯಕ್ಷದರ್ಶಿ ತಲ್ವಿಂದರ್ ಸಿಂಗ್ ತಿಳಿಸಿದರು.

‘ನ್ಯೂಸ್ ಲಾಂಡ್ರಿ’ಗೆ ವೀಡಿಯೊ ಕ್ಲಿಪ್ವೊಂದನ್ನು ತೋರಿಸಿದ ಜೋಗಮಿತ್ತಲ್ ಮತ್ತು ಗುರುಸೇವಕ ಸೇರಿದಂತೆ ನಾಲ್ವರು ಪ್ರತ್ಯಕ್ಷದರ್ಶಿಗಳು ಆಶಿಷ್ ಪಿಸ್ತೂಲನ್ನು ಲೋಡ್ ಮಾಡುತ್ತಿರುವುದನ್ನು ಇಲ್ಲಿ ಕಾಣಬಹುದು ಎಂದರು. ಘಟನೆಗೆ ಮುನ್ನ ಮೂರು ಗಂಟೆಗೆ ಪ್ರತಿಭಟನಾ ಸ್ಥಳದಿಂದ ಸುಮಾರು ಮೂರು ಕಿ.ಮೀ.ದೂರದ ರೈಸ್ ಮಿಲ್ವೊಂದರಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ಗುರುಸೇವಕ ತಿಳಿಸಿದರು.

ಆದರೆ ಅವರು ತೋರಿಸಿದ್ದ ವೀಡಿಯೊ ಕ್ಲಿಪ್ ಅತ್ಯಂತ ಮಸುಕಾಗಿತ್ತಾದರೂ ಅದರಲ್ಲಿರುವ ವ್ಯಕ್ತಿ ಆಶಿಷ್ ಎಂದು ಹಲವಾರು ಸ್ಥಳೀಯರೂ ಗುರುತಿಸಿದರು. ಆದರೆ ಕ್ಲಿಪ್ನಲ್ಲಿರುವ ವ್ಯಕ್ತಿ ಆಶಿಷ್ ಹೌದೇ ಮತ್ತು ಆತ ಪಿಸ್ತೂಲನ್ನು ಲೋಡ್ ಮಾಡುತ್ತಿದ್ದನೇ ಎನ್ನುವುದನ್ನು ದೃಢಪಡಿಸಿಕೊಳ್ಳಲು ನ್ಯೂಸ್ ಲಾಂಡ್ರಿಗೆ ಸಾಧ್ಯವಾಗಿಲ್ಲ. ತನ್ನ ಮಗ ಪಿಸ್ತೂಲನ್ನು ಹೊಂದಿದ್ದರೆ ಅದಕ್ಕೆ ಪರವಾನಿಗೆ ಇರುತ್ತಿತ್ತು. ತಾನಾಗಲೀ ತನ್ನ ಮಗನಾಗಲೀ ಅಲ್ಲಿರಲಿಲ್ಲ ಎಂದು ಮಿಶ್ರಾ ಸುದ್ದಿಸಂಸ್ಥೆಗೆ ತಿಳಿಸಿದ್ದರು.
 
ಗಲಾಟೆಯಿಂದ ಭಯಭೀತರಾಗಿದ್ದ ಸ್ಥಳೀಯ ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಗಳ ಹಿಂದಿನ ಹೊಲಗಳತ್ತ ಓಡಿದ್ದರು. ಆ ವೇಳೆ ‘ಮೋನು ಭಯ್ಯ,ಮೋನು ಭಯ್ಯ’ ಎಂದು ಜನರು ಕೂಗುತ್ತಿರುವುದು ಕೇಳಿಸಿತ್ತು ಎಂದು ಘಟನಾ ಸ್ಥಳದ ಸಮೀಪದ ನಿವಾಸಿ ಅಸದ್ ರ ಪತ್ನಿ ತಿಳಿಸಿದರು.

ಸ್ಥಳೀಯರು ಆಶಿಷ್ ಗೆ ‘ಮೋನು ಭಯ್ಯ’ ಎಂದು ಕರೆಯುತ್ತಾರೆ. ತಿಕುನಿಯಾ ಪೊಲೀಸ ಠಾಣೆಯಲ್ಲಿ ಎರಡು ಎಫ್ ಐಆರ್ ಗಳು  ದಾಖಲಾಗಿವೆ. ಕೊಲೆ,ಕ್ರಿಮಿನಲ್ ಒಳಸಂಚು ಮತ್ತು ಅಜಾಗ್ರತೆಯಿಂದ ವಾಹನ ಚಲಾಯಿಸಿ ಸಾವಿಗೆ ಕಾರಣರಾಗಿದ್ದ ಆರೋಪಗಳಲ್ಲಿ ಆಶಿಷ್ ಮತ್ತು ಇತರ 13 ಜನರ ವಿರುದ್ಧ ಮೊದಲ ಎಫ್ ಐಆರ್ ದಾಖಲಾಗಿದ್ದರೆ, ದಂಗೆ, ನಿರ್ಲಕ್ಷದ ವಾಹನ ಚಾಲನೆಯಿಂದ ಸಾವಿಗೆ ಕಾರಣವಾಗಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಇನ್ನೊಂದು ಎಫ್ ಐಆರ್ ಅನ್ನು ಸುಮಿತ್ ಜೈಸ್ವಾಲ ಎನ್ನುವವರು ದಾಖಲಿಸಿದ್ದಾರೆ.

ಕೊಲೆಯಾಗಿರುವ ಪತ್ರಕರ್ತನ ಕುಟುಂಬವೂ ಆಶಿಷ್ ಮತ್ತು ಆತನ ಸಹಚರರನ್ನು ಹಂತಕರು ಎಂದು ಆರೋಪಿಸಿದೆ. ಈವರೆಗೆ ಆಶಿಷ್ ಬಂಧನವಾಗಿಲ್ಲ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News