ಅರ್ಬಾಝ್‌ ಕೊಲೆ ಪ್ರಕರಣದಲ್ಲಿ ಹಿಂದುತ್ವ ಸಂಘಟನೆಗಳ ಶಾಮೀಲಾತಿಗೆ ಕಾಲ್‌ ರೆಕಾರ್ಡಿಂಗ್‌ ಗಳು ಸಾಕ್ಷಿ: ಕುಟುಂಬಸ್ಥರು

Update: 2021-10-05 14:56 GMT

ಬೆಳಗಾವಿ: ಸೆಪ್ಟೆಂಬರ್‌ 26ರ ದಿನ ನಝೀಮಾ ಶೈಖ್‌ ರವರಿಗೆ ಇನ್ನೂ ಚೆನ್ನಾಗಿ ನೆನಪಿದೆ. ಶ್ರೀರಾಮಸೇನಾ ಹಿಂದೂಸ್ಥಾನ ಎಂಬ ಸಂಘಟನೆಯ ಕೆಲ ಕಾರ್ಯಕರ್ತರು ಅರ್ಬಾಝ್‌ ಜೊತೆಗೆ ʼಸಂಧಾನʼಕ್ಕಾಗಿ ಬಂದ ದಿನ. ಅರ್ಬಾಝ್‌ ಹಿಂದೂ ಧರ್ಮೀಯ ಯುವತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿತ್ತು. ಸಾವಿರಾರು ಮಂದಿ ನಿಮ್ಮನ್ನು ಥಳಿಸಲು ಸಿದ್ಧರಾಗಿದ್ದಾರೆ ಎಂಬ ಕರೆಯ ಮೇರೆಗೆ ನಾವು ತೆರಳಿದ್ದೆವು. ಆದರೆ ಅಲ್ಲಿ  ಪುಂಡಲೀಕ, ಪ್ರಶಾಂತ್‌ ಬಿರ್ಜೆ, ಹಾಗೂ ಅಲಿ ರಂಗಾರಿ ಎಂಬ ಮೂರು ಮಂದಿ ಮಾತ್ರ ಇದ್ದರು ಎಂದು thenewsminure.com ನ ಪ್ರಜ್ವಲ್‌ ಭಟ್‌ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

ಅಲ್ಲಿಗೆ ತಮ್ಮ ಎಲ್ಲಾ ತೊಂದರೆಗಳು ಮುಗಿಯಬಹುದೆಂದು ನಝೀಮಾ ಶೈಖ್‌ ಭಾವಿಸಿದ್ದರು. ಅದಾದ ಎರಡೇ ದಿನಗಳ ಬಳಿಕ ಬೆಳಗಾವಿಗೆ ಅವರು ಹಿಂದಿರುಗುತ್ತಿದ್ದ ವೇಳೆ ಅವರ ಪುತ್ರ 24ರ ಹರೆಯದ ಅರ್ಬಾಝ್‌ ನ ಕೊಲೆಯಾದ ಕುರಿತು ಮಾಹಿತಿ ದೊರಕಿತ್ತು. ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ.

"ನಾವು ಮೊದಲು ಶ್ರೀರಾಮಸೇನಾ ಹಿಂದೂಸ್ಥಾನದ ಕಾರ್ಯಕರ್ತರನ್ನು ಭೇಟಿಯಾದಾಗ ಅವರು ಅಸಭ್ಯವಾಗಿ ವರ್ತಿಸಿದ್ದರು. ಅವರು ಅರ್ಬಾಝ್‌ ನ ಫೋನ್‌ ಕಿತ್ತುಕೊಂಡು ಅದರಲ್ಲಿ ಅವರಿಬ್ಬರಿದ್ದ ಫೋಟೊಗಳನ್ನು ಡಿಲೀಟ್‌ ಮಾಡಿದರು. ಸಿಮ್‌ ಕಾರ್ಡ್‌ ತುಂಡರಿಸಿದರು. 7000ರೂ. ಲಂಚ ನೀಡುವಂತೆ ಹೇಳಿದರು. ಅರ್ಬಾಝ್‌ ಅವತ್ತು ಅವರಿಗೆ 500ರೂ. ನೀಡಿದ್ದ. ಉಳಿದ ಹಣವನ್ನು ಆನ್‌ ಲೈನ್‌ ಪೇಮೆಂಟ್‌ ಮಾಡುವಂತೆ ಅವರು ತಿಳಿಸಿದ್ದರು. ಪುಂಡಲೀಕ ಎಂಬಾತ ʼನನ್ನ ಮೇಲೆ 40ಕ್ಕೂ ಹೆಚ್ಚು ಕೇಸುಗಳಿವೆ, ಇದೊಂದು ಕೇಸಿನಿಂದ ನನಗೆ ಏನೂ ಆಗುವುದಿಲ್ಲʼ ಎಂದು ಹೇಳಿದ್ದ. ಅವರು ಹೇಳಿದಂತೆ ಕೇಳದಿದ್ದರೆ ಅರ್ಬಾಝ್‌ ನ ಮೇಲೆ ಆಸಿಡ್‌ ಎರಚುವುದಾಗಿಯೂ ಬೆದರಿಸಿದ್ದ" ಎಂದು ನಾಝಿಮಾ ಹೇಳುತ್ತಾರೆ.

"ಯುವತಿಯೊಂದಿಗಿನ ಸಂಬಂಧ ಕೊನೆಗೊಳಿಸಬೇಕು ಮತ್ತು ಅವರು ಕೇಳಿದ ಹಣ ನೀಡಬೇಕು" ಎಂಬುವುದಾಗಿತ್ತು ಅವರ ಬೇಡಿಕೆ. ಒಂದು ದಿನದ ಬಳಿಕ ತಮ್ಮ ಪಾಸ್‌ ಪೋರ್ಟ್‌ ಗೆ ಸಂಬಂಧಿಸಿದ ಕೆಲಸಕ್ಕಾಗಿ ನಝೀಮಾ ಗೋವಾಗೆ ತೆರಳಿದ್ದು, ಅಂದೇ ಅವರು ತಮ್ಮ ಮಗನನ್ನು ಕೊನೆಯ ಬಾರಿ ನೋಡಿದ್ದರು. ಈ ವೇಳೆ ಲಂಚದ ಹಣದ ಬೇಡಿಕೆ ಮತ್ತಷ್ಟು ಏರಿಕೆಯಾಯಿತು. 90,000ರೂ. ಪಾವತಿಸಬೇಕೆಂದು ಅವರು ಹೇಳಿದರು ಎಂದು ಅರ್ಬಾಝ್‌ ರ ಸಂಬಂಧಿ ಸಮೀರ್‌ ಪೇಶಾವರಿ ಹೇಳುತ್ತಾರೆ. ಈ ಹಣವನ್ನು ಹೊಂದಿಸಲು ಅರ್ಬಾಝ್‌ ತನ್ನ ಹಳೆಯ ಕಾರನ್ನು 90,000ರೂ.ಗೆ ಮಾರಾಟ ಮಾಡಿದ"

ಸೆಪ್ಟೆಂಬರ್‌ 28ರಂದು ಸಂಜೆ ಏಳು ಗಂಟೆಯ ವೇಳೆಗೆ ಅರ್ಬಾಝ್‌ ತಾಯಿ ನಝೀಮಾ ಗೋವಾದಿಂದ ಬೆಳಗಾವಿಗೆ ಬರುತ್ತಿದ್ದರು. ರೈಲ್ವೆ ಸ್ಟೇಷನ್‌ ನಿಂದ ನೇರವಾಗಿ ಮನೆಗೆ ಬರುವಂತೆ ಅರ್ಬಾಝ್‌ ತಾಯಿಗೆ ತಿಳಿಸಿದ್ದರಿಂದ ಅವರು ಆ ಕುರಿತೂ ಚಿಂತಾಕ್ರಾಂತರಾಗಿದ್ದರು. ಅವರು ಬೆಳಗಾವಿ ತಲುಪಿದಾಗ ಮಗನ ಫೋನ್‌ ನಿಂದ ಕರೆ ಬಂದಿದ್ದು, ರೈಲ್ವೆ ಸಿಬ್ಬಂದಿ ಮೃತದೇಹ ಸಿಕ್ಕಿರುವುದಾಗಿ ಮಾಹಿತಿ ನೀಡಿದ್ದರು.

ಖಾನಾಪೂರದ ರಾಜಾ ಟೈಲ್ಸ್‌ ಸಮೀಪದ ರೈಲ್ವೆ ಹಳಿಯಲ್ಲಿ ಅರ್ಬಾಝ್‌ ಮೃತದೇಹ ದೊರಕಿತ್ತು. ತಲೆ ತುಂಡರಿಸಿದ ಸ್ಥಿತಿಯಲ್ಲಿದ್ದು, ಕೈಗಳನ್ನು ಕಟ್ಟಿ ಹಾಕಲಾಗಿತ್ತು. "ಖಾನಾಪುರದಲ್ಲಿ ಎಲ್ಲರಿಗೂ ಇವರ ಪ್ರೇಮ ಸಂಬಂಧದ ಕುರಿತು ತಿಳಿದ ಅಂದಿನಿಂದ ಅರ್ಬಾಝ್‌ ಸಂಪೂರ್ಣ ಭಯದಲ್ಲೇ ಜೀವಿಸುತ್ತಿದ್ದ. ಆತ ಆಗಾಗ್ಗೆ ನನಗೆ ಯಾವುದಾದರೂ ಬೆದರಿಕೆ ಕರೆಗಳು ಬಂದಿವೆಯೇ ಎಂದು ನನ್ನ ಫೋನ್‌ ಅನ್ನು ಪರಿಶೀಲಿಸುತ್ತಿದ್ದ" ಎಂದು ನಝೀಮಾ ಹೇಳುತ್ತಾರೆ.

ಪ್ರೀತಿಸಿದ್ದಕ್ಕೆ ಬೆದರಿಕೆ:

ಒಂದು ವರ್ಷದ ಮುಂಚೆ ನಝೀಮಾರಿಗೆ ತಮ್ಮ ಪುತ್ರನ ಪ್ರೇಮ ಸಂಬಂಧದ ಕುರಿತು ತಿಳಿದು ಬಂದಿತ್ತು. ಟೈಲರ್‌ ಆಗಿದ್ದ ನಝೀಮಾರ ಪತಿ 2017ರಲ್ಲಿ ನಿಧನರಾಗಿದ್ದರು. ಅವರ ಪುತ್ರಿ ತರ್ಝಿಲಾ ಅಫ್ತಾಬ್‌ ಯುನೈಟೆಡ್‌ ಕಿಂಗ್ಡಮ್‌ ನಲ್ಲಿ ತಮ್ಮ ಪತಿಯೊಂದಿಗೆ ಜೀವಿಸುತ್ತಿದ್ದಾರೆ. ಅರ್ಬಾಝ್‌ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಡೀಲರ್‌ ಆಗಿ ಕೆಲಸ ಮಾಡಿಕೊಂಡು ತಾಯಿಯೊಂದಿಗೆ ಜೀವಿಸುತ್ತಿದ್ದ. ನಝೀಮಾ ಬೆಳಗಾವಿ ಸರಕಾರಿ ಶಾಲೆಯಲ್ಲಿ ಉರ್ದು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗನ ಪ್ರೀತಿಯ ವಿಚಾರ ತಿಳಿದ ಕೂಡಲೇ ನಝೀಮಾ ಯುವತಿಯ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ಅವರು ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಯುವತಿಯನ್ನು ಕರೆದೊಯ್ದಿದ್ದರು. ಈ ವೇಳೆಗಾಗಲೇ ಊರಿನವರಿಗೆ ವಿಚಾರ ತಿಳಿದಿತ್ತು. ಅಂದಿನಿಂದ ಬೆದರಿಕೆಗಳೆಲ್ಲ ಪ್ರಾರಂಭವಾಗಿ ನಾವು ಮೂರು ಬಾರಿ ಮನೆ ಬದಲಾಯಿಸಿದ್ದೆವು ಎಂದು ನಝೀಮಾ ಹೇಳುತ್ತಾರೆ.

ಮೃತಪಟ್ಟ ದಿನ ನಡೆದದ್ದೇನು?:

ಅರ್ಬಾಝ್‌ ಸಂಬಂಧಿ ಸಮೀರ್‌ ಪ್ರಕಾರ "ಅಂದು ಅರ್ಬಾಝ್‌ ತನ್ನೊಂದಿಗಿದ್ದ ಎರಡು ಫೋನ್‌ ಗಳನ್ನು ತಮ್ಮ ಅಜ್ಜಿಯ ಕೈಯಲ್ಲಿ ನೀಡಿ ಹೊರಟಿದ್ದ. ಆತನ ಫೋನ್‌ ಅನ್ನು ಮತ್ತೊಮ್ಮೆ ಅವರು ಎಗರಿಸಬಹುದೆಂಬ ಭಯ ಆತನಲ್ಲಿತ್ತು. ಆತನ ಬಳಿ ಸಣ್ಣದೊಂದು ಫೋನ್‌ ಮಾತ್ರ ಇತ್ತು. ಈಗ ನಮ್ಮಲ್ಲಿ ಸಾಕ್ಷ್ಯವೆಂಬಂತೆ ಆ ಫೋನ್‌ ಮಾತ್ರ ಇದೆ." ಕೊನೆಯ ಹಂತದ ಸಂಧಾನ ಪ್ರಕ್ರಿಯೆ ನಡೆಸಲು ಸಂಜೆ 6 ಗಂಟೆಯ ವೇಳೆ ಅರ್ಬಾಝ್‌ ತೆರಳುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಕಾರ್‌ ಮಾತ್ರವಲ್ಲದೇ ತನ್ನ ಐಫೋನ್‌ ಅನ್ನು ಮಾರಿ ಹಣ ಹೊಂದಿಸಲು ಸಿದ್ಧವಾಗಿದ್ದ. ಅಂದೇ ರಾತ್ರಿ 8 ಗಂಟೆಯ ವೇಳೆ ಅರ್ಬಾಝ್‌ ಮೃತದೇಹ ಪತ್ತೆಯಾದ ಸುದ್ದಿ ಸಿಕ್ಕಿತ್ತು. ಆತನನ್ನು ಆ ಪರಿಸ್ಥಿತಿಯಲ್ಲಿ ನೋಡಲು ನನ್ನಿಂದ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸಮೀರ್.‌

ಸಮೀರ್ ಪ್ರಕಾರ, ಆತನ ಕೈಗಳನ್ನು ಹಗ್ಗದಿಂದ ಕಟ್ಟಿರುವುದು ಮತ್ತು ಆತನ ಮೃತದೇಹ ರೈಲ್ವೆ ಹಳಿಗಳ ಮೇಲೆ ಇಲ್ಲದಿರುವುದು ಇದು ಪೂರ್ವಯೋಜಿತ ಕೊಲೆ ಎಂದು ಸೂಚಿಸುತ್ತದೆ ಮತ್ತು ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120 (ಬಿ) (ಕ್ರಿಮಿನಲ್ ಪಿತೂರಿ) ಅನ್ನು ದಾಖಲಿಸಬೇಕಾಗಿತ್ತು.  ಮೃತದೇಹ ಪತ್ತೆಯಾದ ಒಂದು ದಿನದ ನಂತರ ಸೆಪ್ಟೆಂಬರ್ 29 ರಂದು ನಝೀಮಾ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 201 (ಸಾಕ್ಷ್ಯ ನಾಶ) ಮತ್ತು 34 (ಸಾಮಾನ್ಯ ಉದ್ದೇಶ) ಗಳನ್ನು ಪೊಲೀಸರು ಇಲ್ಲಿಯವರೆಗೆ ಜಾರಿಗೊಳಿಸಿದ್ದಾರೆ.

ರಾಮಸೇನೆ ಮುಖಂಡ ಹೇಳುವುದೇನು?

ಬೆಳಗಾವಿಯ ಶ್ರೀರಾಮಸೇನೆ ಹಿಂದೂಸ್ಥಾನ ಸಂಘಟನೆಯ ಅಧ್ಯಕ್ಷ ರಾಮನಾಥ ಕೊಂಡುಸ್ಕರ್‌ ನೊಂದಿಗೆ ಸುದ್ದಿಸಂಸ್ಥೆ ಮಾತನಾಡಿದ್ದು, ಪುಂಡಲೀಕ ಮತ್ತು ಪ್ರಶಾಂತ್‌ ನಮ್ಮ ಸಂಘಟನೆಯ ಸದಸ್ಯರು ಎಂಬುವುದನ್ನು ಅವರು ಒಪ್ಪಿಕೊಂಡಿದ್ದಾರೆ. "ನಮ್ಮ ಸಂಘಟನೆ ಈ ಹಿಂದೆಯೂ ಇಂತಹಾ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಹಲವು ಯುವತಿಯರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ನಾವು ಪೊಲೀಸರೊಂದಿಗೆಯೂ ಕಾರ್ಯ ನಿರ್ವಹಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಸದಸ್ಯರನ್ನು ವಿಚಾರಣೆ ಮಾಡಿದ್ದರೂ, ಪೊಲೀಸರು ಬಂಧಿಸಲಿಲ್ಲ. ಈ ಪ್ರಕರಣದಲ್ಲಿ ಹಲವು ಪ್ರಶ್ನಾರ್ಥಕ ಚಿಹ್ನೆಗಳಿವೆ" ಎಂದು ಅವರು ಹೇಳಿದ್ದಾರೆ.

ಸಾವಿಗೆ ಕನಿಷ್ಠ ಎರಡು ದಿನಗಳ ಮೊದಲು ಅರ್ಬಾಝ್ ಮತ್ತು ಆತನ ತಾಯಿಯನ್ನು ಭೇಟಿಯಾದ ಶ್ರೀರಾಮ ಸೇನೆ ಹಿಂದೂಸ್ಥಾನದ ಪುಂಡಲೀಕ್ ಮತ್ತು ಪ್ರಶಾಂತ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಜನರನ್ನು ಪ್ರಶ್ನಿಸಿದ್ದಾರೆ. ಪೊಲೀಸರು ಆತನ ಪ್ರೇಯಸಿಯ ಕುಟುಂಬವನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ. ರೈಲ್ವೇ ಪೊಲೀಸರು ಮೊದಲು ದಾಖಲಿಸಿದ್ದ ಪ್ರಕರಣವನ್ನು ಅಕ್ಟೋಬರ್ 3 ರಂದು ಜಿಲ್ಲಾ ಪೊಲೀಸರಿಗೆ ವರ್ಗಾಯಿಸಲಾಯಿತು. ಆದರೆ ಸಾವು ವರದಿಯಾಗಿ ಒಂದು ವಾರ ಕಳೆದರೂ, ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

"ನನಗೆ ಪೊಲೀಸರೊಂದಿಗೆ ಸಂಪೂರ್ಣ ನಂಬಿಕೆಯಿದೆ. ನನ್ನ ಮಗನ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬಹುದೆಂಬ ಭರವಸೆಯಲ್ಲಿದ್ದೇನೆ" ಎಂದು ನಝೀಮಾ ಹೇಳುತ್ತಾರೆ.

ಕೃಪೆ: Thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News