×
Ad

ಮರಣೋತ್ತರ ಪರೀಕ್ಷೆ, ಶವಸಂಸ್ಕಾರಗಳಲ್ಲಿ ವ್ಯಸ್ತರಾಗಿದ್ದೇವೆ: ಆಶಿಷ್ ಮಿಶ್ರಾ ಬಂಧನಕ್ಕೆ ವಿಳಂಬ ಕುರಿತು ಪೊಲೀಸರ ಸಮಜಾಯಿ

Update: 2021-10-05 22:08 IST
ಆಶಿಶ್ ಮಿಶ್ರಾ [photo: twitter.com/ANINewsUP]

ಲಖಿಂಪುರ ಖೇರಿ (ಉ.ಪ್ರ),ಅ.5: ರವಿವಾರ ಲಖಿಂಪುರ ಜಿಲ್ಲೆಯ ತಿಕುನಿಯಾದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವುಗಳಿಗೆ ಕಾರಣವಾಗಿದ್ದ ಹಿಂಸಾಚಾರ ಗಳಿಗೆ ಸಂಬಂಧಿಸಿದಂತೆ ಕೊಲೆ ಆರೋಪವನ್ನು ಎದುರಿಸುತ್ತಿರುವ ಕೇಂದ್ರ ಸಹಾಯಕ ಗೃಹಸಚಿವ ಅಜಯ್ ಕುಮಾರ ಮಿಶ್ರಾರ ಪುತ್ರ ಆಶಿಷ್ ಮಿಶ್ರಾರನ್ನು ಎಫ್ಐಆರ್ ಸಲ್ಲಿಸಿ24 ಗಂಟೆಗಳು ಕಳೆದಿದ್ದರೂ ಪೊಲೀಸರು ಬಂಧಿಸಿಲ್ಲ. ಮಂಗಳವಾರ ವಿಳಂಬಕ್ಕೆ ಕಾರಣವನ್ನು ವಿವರಿಸಿದ ಲಕ್ನೋ ವಲಯದ ಎಡಿಜಿಪಿ ಎಸ್.ಎನ್.ಸಬಾತ್ ಅವರು,ತಾವು ವ್ಯಸ್ತರಾಗಿದ್ದೇವೆ ಎಂದು ಹೇಳಿದರು.

"ಮೊದಲು ರೈತರೊಂದಿಗೆ ಮಾತುಕತೆಗಳಲ್ಲಿ,ಬಳಿಕ ಮರಣೋತ್ತರ ಪರೀಕ್ಷೆಗಳಲ್ಲಿ ನಾವು ವ್ಯಸ್ತರಾಗಿದ್ದು,ಈಗ ಶವಗಳ ಅಂತ್ಯಸಂಸ್ಕಾರದಲ್ಲಿ ವ್ಯಸ್ತರಾಗಿದ್ದೇವೆ. ಪ್ರತಿ ಪ್ರಕರಣದಲ್ಲಿಯೂ ಸೂಕ್ತ ಪ್ರಕ್ರಿಯೆಯನ್ನು ನಾವು ಕೈಗೊಳ್ಳುತ್ತೇವೆ ಮತ್ತು ಪ್ರತಿ ಪ್ರಕರಣವನ್ನೂ ಸಮಗ್ರವಾಗಿ ತನಿಖೆ ನಡೆಸುತ್ತೇವೆ" ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ತಿಳಿಸಿದರು.
  
ಆರೋಪಿ ಸಾಮಾನ್ಯ ವ್ಯಕ್ತಿಯಾಗಿದ್ದರೂ ಪೊಲೀಸರ ನಿಲುವು ಇದೇ ಆಗಿರುತ್ತಿತ್ತೇ ಎಂಬ ಪ್ರಶ್ನೆಗೆ ಅವರು, "ನಾವು ಬಲಿಪಶುಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದೇವೆ,ಆರೋಪಿಯ ಬಗ್ಗೆ ಅಲ್ಲ" ಎಂದು ಉತ್ತರಿಸಿದ ಅವರು ಹೆಚ್ಚಿನ ಪ್ರಶ್ನೆಗಳಿಗೆ ಅವಕಾಶ ನೀಡಲಿಲ್ಲ.
ವಾಹನವೊಂದು ರಸ್ತೆಯಲ್ಲಿ ನಡೆದುಕೊಂಡು ಸಾಗುತ್ತಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ನುಗ್ಗಿದ್ದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಹನವನ್ನು ಆಶಿಷ್ ಚಲಾಯಿಸುತ್ತಿದ್ದಾಗಿ ರೈತರು ಆರೋಪಿಸಿದ್ದಾರೆ.

ಮೃತ ನಾಲ್ವರು ರೈತರ ಪೈಕಿ ಓರ್ವ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿರುವ ರೈತರು,ದಿಲ್ಲಿಯ ಆಸ್ಪತ್ರೆಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಇತರ ಮೂವರ ಅಂತ್ಯಸಂಸ್ಕಾರವನ್ನು ಮಂಗಳವಾರ ಅಪರಾಹ್ನ ನಡೆಸಲಾಗಿದ್ದು,ಸದ್ರಿ ರೈತನ ಶವವನ್ನು ಹಾಗೆಯೇ ಇರಿಸಲಾಗಿದೆ.
ಪೊಲೀಸರಲ್ಲಿ ದಾಖಲಿಸಲಾಗಿರುವ ಎಫ್ಐಆರ್ನಲ್ಲಿ ಆಶಿಷ್‌ ನನ್ನು ಕೊಲೆ ಮತ್ತು ನಿರ್ಲಕ್ಷದ ವಾಹನ ಚಾಲನೆಯ ಆರೋಪಿ ಎಂದು ಹೆಸರಿಸಲಾಗಿದೆ.

ಘಟನೆಯ ಸಂದರ್ಭದಲ್ಲಿ ತಾನು ಮತ್ತು ತನ್ನ ಪುತ್ರ ಸ್ಥಳದಲ್ಲಿರಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಆಶಿಷ್ ನನ್ನು ಬಂಧಿಸುವಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರತಿಪಕ್ಷ ನಾಯಕರು ಪುನರಪಿ ಪ್ರಶ್ನಿಸಿದ್ದಾರೆ.

"ರೈತರನ್ನು ನಿರ್ದಯವಾಗಿ ಕೊಂದವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಮತ್ತು ನಾವು ಕಳೆದ 36 ಗಂಟೆಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದೇವೆ. ರೈತರ ಕುಟುಂಬಗಳು ರೋದಿಸುತ್ತಿವೆ ಮತ್ತು ಲಕ್ನೋದಲ್ಲಿ ಸಂಭ್ರಮಾಚರಣೆಗಳು ನಡೆಯುತ್ತಿವೆ" ಎಂದು ಸೋಮವಾರ ಪ್ರಿಯಾಂಕಾರೊಂದಿಗೆ ಬಂಧಿಸಲ್ಪಟ್ಟಿರುವ ಕಾಂಗ್ರೆಸ್ ನ ದೀಪೇಂದರ್ ಸಿಂಗ್ ಹೂಡಾ ಅವರು ಸೀತಾಪುರ ಪೊಲೀಸ್ ಲೈನ್ಸ್ನಿಂದ ಟ್ವೀಟಿಸಿದ್ದಾರೆ.
   
ಮಂಗಳವಾರ ರೈತರ ಗುಂಪಿನ ಮೇಲೆ ಕಾರು ನುಗ್ಗಿದ್ದ ವೀಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, "ನರೇಂದ್ರ ಮೋದಿ ಸರ್,ನಿಮ್ಮ ಸರಕಾರವು ಯಾವುದೇ ಆದೇಶ ಅಥವಾ ಎಫ್ಐಆರ್ ಇಲ್ಲದೆ ನನ್ನನ್ನು ಕಸ್ಟಡಿಯಲ್ಲಿ ಇರಿಸಿದೆ. ರೈತರನ್ನು ಕೊಂದಿರುವ ವ್ಯಕ್ತಿಯನ್ನು ಬಂಧಿಸಿಲ್ಲವೇಕೆ" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News