ಫ್ರಾನ್ಸ್ ಚರ್ಚ್ ಗಳಲ್ಲಿ 2 ಲಕ್ಕಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ತನಿಖಾ ವರದಿ

Update: 2021-10-05 16:49 GMT

ಪ್ಯಾರಿಸ್, ಅ.5: ಫ್ರಾನ್ಸ್ನ ಚರ್ಚ್ ಗಳಲ್ಲಿ 1950ರಿಂದ ಸುಮಾರು 2,16,000 ಮಕ್ಕಳ ಮೇಲೆ ಕ್ರೈಸ್ತ ಪಾದ್ರಿಗಳು, ಧರ್ಮಗುರುಗಳು ಹಾಗೂ ಚರ್ಚ್ ಗೆ ಸಂಬಂಧಿಸಿದ ಇತರರಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು ಈ ವಿದ್ಯಮಾನವನ್ನು ದಶಕಗಳಿಂದಲೂ ಮೌನದ ಮುಸುಕಿನಡಿ ಮರೆಮಾಚಲಾಗಿದೆ ಎಂದು ಫ್ರಾನ್ಸ್ ನ ಸ್ವತಂತ್ರ ತನಿಖಾ ಆಯೋಗ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಲೈಂಗಿಕ ದೌರ್ಜನ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದ್ದು ಚರ್ಚ್ಗೆ ಸಂಬಂಧಿಸಿದ ಸುಮಾರು 30000 ಪಾದ್ರಿಗಳು ಹಾಗೂ ಇತರರು ಒಳಗೊಂಡಿದ್ದಾರೆ. ಸಂತ್ರಸ್ತರಲ್ಲಿ ಸುಮಾರು 80%ದಷ್ಟು ಬಾಲಕರು ಎಂದು ಜೀನ್ ಮಾರ್ಕ್ ಸಾವೆ ನೇತೃತ್ವದ ತನಿಖಾ ಆಯೋಗದ ವರದಿ ಹೇಳಿದೆ. ಮಂಗಳವಾರ ಬಿಡುಗಡೆಗೊಂಡಿರುವ ವರದಿಯು ರೋಮನ್ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಕಳೆದ 20 ವರ್ಷಗಳಿಂದ ವರದಿಯಾಗುತ್ತಿರುವ ಸರಣಿ ಲೈಂಗಿಕ ಹಗರಣ ಪ್ರರಣಕ್ಕೆ ಇತ್ತೀಚಿಗಿನ ಸೇರ್ಪಡೆಯಾಗಿದೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಯಿದ್ದರೂ ಚರ್ಚ್ ಗಳು ಇದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಜಾಣ ಕುರುಡುತನ ತೋರುವ ಜೊತೆಗೆ, ಗೊತ್ತಿದ್ದೂ ಮಕ್ಕಳನ್ನು ಶೋಷಣೆಗಾರರ ಸಂಪರ್ಕಕ್ಕೆ ತಳ್ಳಿದೆ. ಸಂತ್ರಸ್ತರ ರಕ್ಷಣೆಯ ಬದಲು ತನ್ನ ರಕ್ಷಣೆಗೆ ಆಸಕ್ತಿ ತೋರುವ ಮೂಲಕ ಹಲವು ವರ್ಷಗಳಿಂದ ಕ್ರೂರ ಉಪೇಕ್ಷೆ ಮೆರೆದಿದೆ ಎಂದು ಆನ್ಲೈನ್ ಮೂಲಕ ವರದಿ ಬಿಡುಗಡೆಗೊಳಿಸಿದ ಬಳಿಕ ಸಾವೆ ಹೇಳಿದ್ದಾರೆ. ಇದರ ಪರಿಣಾಮ ಅತ್ಯಂತ ಗಂಭೀರವಾಗಿದ್ದು, ಲೈಂಗಿಕ ದೌರ್ಜನ್ಯ ಎದುರಿಸಿದ್ದ ಸುಮಾರು 60%ದಷ್ಟು ಪುರುಷರು ಮತ್ತು ಮಹಿಳೆಯರು ಭಾವನಾತ್ಮಕ ಅಥವಾ ಲೈಂಗಿಕ ಸಮಸ್ಯೆಗೆ ಒಳಗಾಗಿದ್ದಾರೆ ಎಂದವರು ಹೇಳಿದ್ದಾರೆ.

‘ನೀವು ಮಾನವಕುಲಕ್ಕೆ ಒಂದು ಕಳಂಕವಾಗಿದ್ದೀರಿ. ಈ ನರಕದಲ್ಲಿ ಅಸಹ್ಯಕರ ಸಾಮೂಹಿಕ ಅಪರಾಧ ಘಟಿಸಿವೆ. ಆದರೆ ಇದು ಅವೆಲ್ಲಕ್ಕಿಂತ ಕೆಟ್ಟದಾದ, ಘೋರವಾದ, ವಿಶ್ವಾಸದ್ರೋಹದ, ನೈತಿಕತೆ ಮತ್ತು ಮಕ್ಕಳಿಗೆ ಎಸಗಿದ ವಂಚನೆಯಾಗಿದೆ’ ಎಂದು ವರದಿ ಬಿಡುಗಡೆ ಸಂದರ್ಭ ಉಪಸ್ಥಿತರಿದ್ದ ಸಂತ್ರಸ್ತರ ಸಂಘಟನೆಯ ಸ್ಥಾಪಕ ಫ್ರಾಂಕೋಯಿಸ್ ದೆವಾಕ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರ್ಚ್ ಗಳಿಗೆ ಅವಮಾನ ಮತ್ತು ಬದುಕುಳಿದವರಿಗೆ ಅಪಾರ ನೋವು ಈ ವರದಿಯ ತಕ್ಷಣದ ಪರಿಣಾಮವಾಗಿದೆ ಎಂದು ಕ್ಯಾಥೊಲಿಕ್ ಚರ್ಚ್ ಗಳನ್ನು ಕೇಂದ್ರೀಕರಿಸಿ ಪ್ರಕಟವಾಗುತ್ತಿರುವ ‘ದಿ ಟ್ಯಾಬ್ಲೆಟ್’ ಮಾಧ್ಯಮದ ವ್ಯಾಟಿಕನ್ ಪ್ರತಿನಿಧಿ ಕ್ರಿಸ್ಟೋಫರ್ ಲ್ಯಾಂಬ್ ಹೇಳಿದ್ದಾರೆ. ಈ ಹಿಂದೆ ನಡೆದಿರುವ ಸತ್ಯವನ್ನು ಎದುರಿಸುವ ಉಪಕ್ರಮಗಳನ್ನು ಚರ್ಚ್ ಆರಂಭಿಸಿದರೆ ಆಗ ನೋವಿಗೆ ತುಸು ಉಪಶಮನ ಸಿಗಬಹುದು. ಆದರೆ ದುರದೃಷ್ಟವಶಾತ್, ಈ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದು ಅಧಿಕಾರದ ದುರ್ಬಳಕೆಯಾಗಿದೆ. ಈ ಬಗ್ಗೆ ಚರ್ಚ್ ಗಳು ಗಮನ ಹರಿಸಬೇಕಿದೆ ಮತ್ತು ಈ ನಿಟ್ಟಿನಲ್ಲಿ ಸುಧಾರಣೆ ಆಗಬೇಕು ಎಂದವರು ಆಗ್ರಹಿಸಿದ್ದಾರೆ.

ಲೈಂಗಿಕ ದೌರ್ಜ್ಯನ್ಯ ಪ್ರಕರಣಗಳ ಬಗ್ಗೆ ವಿವರ ಸಂಗ್ರಹಿಸಲು ಹಾಗೂ ಚರ್ಚ್ ಗಳ ಬಗ್ಗೆ ಸಾರ್ವಜನಿಕರ ನಂಬಿಕೆ, ವಿಶ್ವಾಸ ಮರುಸ್ಥಾಪನೆಯ ಉದ್ದೇಶದಿಂದ ಫ್ರಾನ್ಸ್ನ ಕ್ಯಾಥೊಲಿಕ್ ಬಿಷಪ್ 2018ರಲ್ಲಿ ಈ ತನಿಖಾ ಆಯೋಗವನ್ನು ಸ್ಥಾಪಿಸಿದ್ದರು. ಸುಮಾರು ಎರಡೂವರೆ ವರ್ಷ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ ಆಯೋಗ, 1950ರಿಂದ ಅನ್ವಯಿಸುವಂತೆ ಚರ್ಚ್, ನ್ಯಾಯಾಲಯ, ಪೊಲೀಸ್ ಇಲಾಖೆಯ ವರದಿಯ ಪರಿಶೀಲನೆ, ಸಂತ್ರಸ್ತರು ಮತ್ತು ಸಾಕ್ಷಿಗಳ ಅಭಿಪ್ರಾಯ ಸಂಗ್ರಹ ನಡೆಸಿದೆ. ಸರಕಾರದ ಪತ್ರಾಗಾರದಿಂದ ದಾಖಲೆ ಸಂಗ್ರಹಿಸಿದೆ.

ಸಂತ್ರಸ್ತರ ಸಂಖ್ಯೆ 3 ಲಕ್ಷಕ್ಕೂ ಅಧಿಕ

ಚರ್ಚ್ ಗಳ ಪಾದ್ರಿ, ಧರ್ಮಗುರುಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ 2,16,000 ಆಗಿದ್ದರೂ, ಚರ್ಚ್ ಆಡಳಿತ ಮಂಡಳಿಯ ಸಾಮಾನ್ಯ ಸದಸ್ಯರ ಸಹಿತ ಇತರರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನೂ ಪರಿಗಣಿಸಿದರೆ ಈ ಸಂಖ್ಯೆ 3,30,000ಕ್ಕೇರಬಹುದು ಎಂದು ಸಾವೆ ಹೇಳಿದ್ದಾರೆ. ಈಗಲೂ ಕ್ರಮ ಕೈಗೊಳ್ಳಲು ಅವಕಾಶವಿರುವ 22 ಅಪರಾಧ ಪ್ರಕರಣಗಳನ್ನು ಅಭಿಯೋಜಕರಿಗೆ ರವಾನಿಸಲಾಗಿದೆ. ಫ್ರಾನ್ಸ್ ನ್ ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶವಿಲ್ಲದ ಸುಮಾರು 40 ತುಂಬಾ ಹಳೆಯ ಅಪರಾಧ ಪ್ರಕರಣಗಳನ್ನು ಚರ್ಚ್ ಅಧಿಕಾರಿಗಳಿಗೆ ರವಾನಿಸಲಾಗಿದೆ. ಲೈಂಗಿಕ ದೌರ್ಜನ್ಯ ತಡೆಯುವ ಬಗ್ಗೆ, ಸಂತ್ರಸ್ತರನ್ನು ಗುರುತಿಸಿ ಪರಿಹಾರ ಒದಗಿಸುವ ಬಗ್ಗೆ 45 ಶಿಫಾರಸುಗಳನ್ನು ಕುಹಿಸಲಾಗಿದೆ ಎಂದವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News