ರಶ್ಯದೊಂದಿಗಿನ ಸಂಬಂಧ ಸುಧಾರಣೆಗೆ ಆದ್ಯತೆ :ಇರಾನ್ ವಿದೇಶ ಸಚಿವ ಅಮೀರಬ್ದುಲ್ಲಾ

Update: 2021-10-06 15:14 GMT

ಟೆಹ್ರಾನ್, ಅ.6: ರಶ್ಯಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವಿಸ್ತರಿಸಲು ಇರಾನ್ ಉತ್ಸುಕವಾಗಿದೆ ಎಂದು ಇರಾನ್ನ ವಿದೇಶ ವ್ಯವಹಾರ ಸಚಿವ ಹುಸೇನ್ ಅಮೀರಬ್ದುಲ್ಲಾ ಹೇಳಿದ್ದಾರೆ.

ಇದರರ್ಥ ನಾವು ಚೀನಾ ಅಥವಾ ರಶ್ಯಾವನ್ನು ಅವಲಂಬಿಸಿದ್ದೇವೆ ಎಂದಲ್ಲ. ಆದರೆ ತಂತ್ರಕುಶಲತೆಯ ದೃಷ್ಟಿಯಿಂದ ಈಗಿನ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವುದು ಉಭಯ ದೇಶಗಳ ಹಿತಾಸಕ್ತಿಗೂ ಪೂರಕವಾಗಿದೆ ಎಂದವರು ಹೇಳಿದ್ದಾರೆ.

ರಶ್ಯದ ವಿದೇಶ ವ್ಯವಹಾರ ಸಚಿವ ಸೆರ್ಗೈ ಲಾವ್ರೋವ್ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅಮೀರಬ್ದುಲ್ಲಾ ಮಂಗಳವಾರ ಮಾಸ್ಕೋ ತಲುಪಿದ್ದಾರೆ.
ದ್ವಿಪಕ್ಷೀಯ ಒಪ್ಪಂದದ ಜತೆಗೆ ಅಫ್ಗಾನಿಸ್ತಾನದ ಪರಿಸ್ಥಿತಿ ಹಾಗೂ ದಕ್ಷಿಣ ಕಾಕಸಸ್ ನಲ್ಲಿನ ಬಿಕ್ಕಟ್ಟಿನ ಕುರಿತೂ ಚರ್ಚೆ ನಡೆಯಲಿದೆ. ಇರಾನ್ನ ವಾಯವ್ಯದಲ್ಲಿರುವ , ಅಝರ್ಬೈಜಾನ್ ಗಡಿಭಾಗದಲ್ಲಿ ಇತ್ತೀಚೆಗೆ ಇರಾನ್ ಸೇನೆ ಹಾಗೂ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಪಡೆ ಜಂಟಿ ಸಮರಾಭ್ಯಾಸ ನಡೆಸಿವೆ. ಇದಕ್ಕೆ ಪ್ರತಿಯಾಗಿ ಅಝರ್ ಬೈಜಾನ್ ಮತ್ತು ಟರ್ಕಿ ಪಡೆಗಳೂ ಬುಧವಾರದಿಂದ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಿವೆ.

ರಶ್ಯವು ಈ ಪ್ರದೇಶದ ಗಡಿಭಾಗದಲ್ಲಿ ಸಂಭಾವ್ಯ ಬದಲಾವಣೆ ಬಗ್ಗೆ ಸೂಕ್ಷ್ಮಗ್ರಾಹಿಯಾಗಬೇಕು ಎಂದು ಇರಾನ್ ಅಪೇಕ್ಷಿಸುತ್ತದೆ. ಅಲ್ಲದೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿರುವ ಭಯೋತ್ಪಾದಕರು ಹಾಗೂ ಝಿಯೊನಿಸ್ಟ್ ಗುಂಪಿನ ಚಲನವಲನದ ಬಗ್ಗೆ ರಶ್ಯಾ ಹೆಚ್ಚು ಸೂಕ್ಷ್ಮಗ್ರಾಹಿಯಾಗಬೇಕು ಎಂದು ಅಮೀರಬ್ದುಲ್ಲಾ ಹೇಳಿದ್ದಾರೆ.

ಇರಾನ್ ನ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಆಡಳಿತವು ಪರಮಾಣು ಒಪ್ಪಂದದ ಕುರಿತ ಮಾತುಕತೆ ಶೀಘ್ರ ಪುನರಾರಂಭಿಸಬೇಕು ಎಂದು ವಿಶ್ವದ ಬಲಿಷ್ಟ ದೇಶಗಳ ಒತ್ತಡ ಹೆಚ್ಚುತ್ತಿರುವ ಮಧ್ಯೆಯೇ, ಇರಾನ್ ವಿದೇಶ ಸಚಿವರ ರಶ್ಯಾ ಭೇಟಿಗೆ ಹೆಚ್ಚಿನ ಮಹತ್ವವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪರಮಾಣು ಒಪ್ಪಂದ ಮಾತುಕತೆ ಪುನರಾರಂಭಿಸಲು ಇರಾನ್ಗೆ ಆಸಕ್ತಿಯಿಲ್ಲ ಎಂದು ಹೇಳಲು ಯಾವುದೇ ಕಾರಣಗಳಿಲ್ಲ ಎಂದು ವಿಯೆನ್ನ ಮಾತುಕತೆಯಲ್ಲಿ ರಶ್ಯದ ಪ್ರತಿನಿಧಿ ಮಿಖಾಯಿಲ್ ಉಲ್ಯನೋವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News