×
Ad

ಇದೇ ಮೊದಲ ಬಾರಿಗೆ ಪರಮಾಣು ಬಾಂಬ್ ಗಳ ಕುರಿತ ಮಾಹಿತಿ ಬಹಿರಂಗಗೊಳಿಸಿದ ಅಮೆರಿಕ

Update: 2021-10-06 22:39 IST

ವಾಷಿಂಗ್ಟನ್, ಅ.6: ಕಳೆದ 4 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಅಮೆರಿಕವು ತನ್ನಲ್ಲಿ ಸಂಗ್ರಹವಿರುವ ಪರಮಾಣು ಬಾಂಬ್ ಗಳ ಸಂಖ್ಯೆಯನ್ನು ಬಹಿರಂಗಗೊಳಿಸಿದೆ.

‌2020ರ ಸೆ.30ರವರೆಗೆ ಅಮೆರಿಕದ ಸೇನೆಯ ಬಳಿ 3,750 ಸಕ್ರಿಯ ಪರಮಾಣು ಬಾಂಬ್ಗಳಿವೆ. 2019ಕ್ಕೆ ಹೋಲಿಸಿದರೆ ಇದು 55ರಷ್ಟು ಮತ್ತು 2017ಕ್ಕೆ ಹೋಲಿಸಿದರೆ 72ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣುಬಾಂಬ್ ಕುರಿತ ಮಾಹಿತಿ ಬಹಿರಂಗಗೊಳಿಸುವುದನ್ನು ತಡೆಹಿಡಿದಿದ್ದರು. ಆದರೆ ಶಸ್ತ್ರಾಸ್ತ್ರ ನಿಯಂತ್ರಣದ ಉದ್ದೇಶದಿಂದ ರಶ್ಯಾದೊಂದಿಗಿನ ಮಾತುಕತೆಯನ್ನು ಪುನರಾರಂಭಿಸಲು ನಿರ್ಧರಿಸಿರುವ ಹಾಲಿ ಅಧ್ಯಕ್ಷ ಜೋ ಬೈಡನ್ , ದೇಶದ ಅಣುಬಾಂಬ್ ಸಂಗ್ರಹದ ಬಗ್ಗೆ ಮಾಹಿತಿ ಬಹಿರಂಗಗೊಳಿಸುವುದಾಗಿ ಹೇಳಿದ್ದರು.

ಪರಮಾಣು ತಂತ್ರಜ್ಞಾನದ ಪ್ರಸರಣ ನಿರ್ಬಂಧ ಹಾಗೂ ನಿಶಸ್ತ್ರೀಕರಣ ಪ್ರಕ್ರಿಯೆಗಳಿಗೆ ಈ ಪಾರದರ್ಶಕ ಕ್ರಮಗಳು ಪೂರಕವಾಗಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. ರಶ್ಯ-ಅಮೆರಿಕ ನಡುವಿನ ನ್ಯೂಸ್ಟಾರ್ಟ್ ಒಪ್ಪಂದಕ್ಕೂ ಟ್ರಂಪ್ ತಿಲಾಂಜಲಿ ನೀಡಿದ್ದರು. ಅಮೆರಿಕ ಮತ್ತು ರಶ್ಯಾವು ದಾಸ್ತಾನಿರಿಸುವ ಪರಮಾಣು ಅಸ್ತ್ರಗಳಿಗೆ ಮಿತಿಯನ್ನು ವಿಧಿಸುವ ಒಪ್ಪಂದ ಇದಾಗಿದೆ. ನ್ಯೂಸ್ಟಾರ್ಟ್ ಒಪ್ಪಂದದ ವಿಸ್ತರಣೆಗೆ ತಾನು ನಿರ್ಧರಿಸಿರುವುದಾಗಿ ಈ ವರ್ಷದ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಬೈಡನ್ ಘೋಷಿಸಿದ್ದರು. ಇದಕ್ಕೆ ರಶ್ಯಾ ಕೂಡಾ ಪೂರಕವಾಗಿ ಸ್ಪಂದಿಸಿದೆ. ಕಳೆದ ವಾರ ಜಿನೆವಾದಲ್ಲಿ ಅಮೆರಿಕ-ರಶ್ಯ ಅಧಿಕಾರಿಗಳು ನ್ಯೂಸ್ಟಾರ್ಟ್ ಒಪ್ಪಂದದ ಬಗ್ಗೆವಿಸ್ತತ ಮಾತುಕತೆ ನಡೆಸಿದ್ದರು.

ರಶ್ಯದೊಂದಿಗಿನ ಶೀತಲಯುದ್ದ ಪರಾಕಾಷ್ಟೆ ತಲುಪಿದ್ದ 1967ರಲ್ಲಿ ಅಮೆರಿಕದ ಬಳಿ 31,255 ಪರಮಾಣು ಬಾಂಬ್ಗಳಿದ್ದವು. ಸ್ಟಾಕ್ಹೋಂ ಅಂತರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ 2021ರ ಜನವರಿ ವರದಿ ಪ್ರಕಾರ ಅಮೆರಿಕದ ಬಳಿ 5,550 ಪರಮಾಣು ಬಾಂಬ್; ರಶ್ಯಾದ ಬಳಿ 6,225, ಚೀನಾದ ಬಳಿ 350, ಬ್ರಿಟನ್ನಲ್ಲಿ 225, ಫ್ರಾನ್ಸ್ ನಲ್ಲಿ 290 ಪರಮಾಣು ಬಾಂಬ್ಗಳಿವೆ. ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರಕೊರಿಯಾದ ಬಳಿ ಒಟ್ಟು 460 ಪರಮಾಣು ಬಾಂಬ್ಗಳಿವೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News