ಸರಕಾರಿ ಶಾಲೆಗಳಿಗೆ ಶಿಕ್ಷಕರ ಸವಾಲು

Update: 2021-10-07 06:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಒಂದೂವರೆ ವರ್ಷಗಳಿಂದ ಈ ದೇಶದ ಶಾಲೆಗಳ ಬಾಗಿಲು ಮುಚ್ಚಿವೆ. ಭವಿಷ್ಯದಲ್ಲಿ ಈ ದೇಶದ ಬೌದ್ಧಿಕ ವಲಯದ ಮೇಲೆ ಇದು ಬೀರುವ ಪರಿಣಾಮವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಭಾರತದಂತಹ ದೇಶಗಳಲ್ಲಿ ಶಾಲೆಗಳು ತೆರೆದಿದ್ದರೂ, ಅಲ್ಲಿ ಉತ್ತಮವಾದ ಶಿಕ್ಷಣ ಸಿಗುವಂತಿಲ್ಲ. ಭಾರತದ ಸರಕಾರಿ ಶಾಲೆಗಳು ಸರಿಯಾದ ಕಟ್ಟಡಗಳು, ಶೌಚಾಲಯಗಳು, ಆಟದ ಬಯಲುಗಳಿಲ್ಲದೆ ನರಳುತ್ತಿವೆ. ಶಿಕ್ಷಕರ ಕೊರತೆ ವ್ಯಾಪಕವಾಗಿದೆೆ. ಉತ್ತರ ಭಾರತದಲ್ಲಿ ಸರಕಾರಿ ಶಾಲೆಗಳ ಶಿಕ್ಷಕರ ಸ್ಥಿತಿ ದಯನೀಯವಾಗಿದೆ. ಶಿಕ್ಷಕರಿಗೆ ಸರಿಯಾಗಿ ಓದುವುದಕ್ಕೆ, ಬರೆಯುವುದಕ್ಕೆ ಗೊತ್ತಿಲ್ಲ. ಇಂತಹ ಶಿಕ್ಷಕರಿಂದ ಕಲಿತ ಮಕ್ಕಳ ಸ್ಥಿತಿಯೇನಾಗಬಹುದು? ಇಷ್ಟಾದರೂ ಭಾರತದ ಶಿಕ್ಷಣ ವ್ಯವಸ್ಥೆ ಕುಂಟುತ್ತಾ ಮುಂದೆ ಸಾಗುತ್ತಿತ್ತು. ಆನ್‌ಲೈನ್ ಶಿಕ್ಷಣ ಆರಂಭವಾದ ಬಳಿಕ ಸರಕಾರಿ ಶಾಲೆಗಳ ಮಕ್ಕಳು, ಅರೆಬರೆ ಓದಿನಿಂದಲೂ ದೂರವಾದರು. ಇದೀಗ ಹಂತಹಂತವಾಗಿ ಶಾಲೆಗಳು ಆರಂಭವಾಗಿವೆಯಾದರೂ, ಹೆಚ್ಚಿನ ಶಾಲೆಗಳಲ್ಲಿ ವ್ಯಾಪಕವಾಗಿ ಶಿಕ್ಷಕರ ಕೊರತೆ ಬೆಳಕಿಗೆ ಬರುತ್ತಿದೆೆ. ಲಾಕ್‌ಡೌನ್ ಅವಧಿಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದ ಹೆಚ್ಚಿನ ಶಿಕ್ಷಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಖಾಸಗಿ ಶಾಲೆಗಳೂ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಶಿಕ್ಷಕರನ್ನು ಮನೆಗೆ ಕಳುಹಿಸಿವೆೆ. ಅಷ್ಟೇ ಅಲ್ಲ, ಕಡಿಮೆ ವೇತನಕ್ಕೆ ದುಡಿಯುವ, ಕಡಿಮೆ ಅರ್ಹತೆಯಿರುವ ಶಿಕ್ಷಕರನ್ನು ಬಳಸಿಕೊಳ್ಳಲು ಮುಂದಾಗಿವೆೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ದೇಶದ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಯುನೆಸ್ಕೋ ನೀಡಿರುವ ವರದಿಯೊಂದು, ದೇಶದಲ್ಲಿ ಈಗಾಗಲೇ ಇರುವ ಶಿಕ್ಷಕರ ಸ್ಥಿತಿಗತಿಯನ್ನು ತೆರೆದಿಟ್ಟಿದೆ. ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಶಾಲೆಗಳಲ್ಲಿ ಒಬ್ಬನೇ ಶಿಕ್ಷಕನಿದ್ದಾನೆ. ಈ ಏಕೋಪಾಧ್ಯಾಯ ಶಾಲೆಯಲ್ಲಿ, ಶಿಕ್ಷಕನಿಗೆ ಅನಾರೋಗ್ಯವುಂಟಾದರೆ ಅಥವಾ ತುರ್ತು ರಜೆ ಬೇಕಾದರೆ ಮಕ್ಕಳ ಶಿಕ್ಷಣದ ಗತಿಯೇನಾಗಬೇಕು? ಮತ್ತು ಇಂತಹ ಏಕೋಪಾಧ್ಯಾಯ ಶಾಲೆಗಳಿರುವುದು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ. ಉತ್ತರ ಪ್ರದೇಶ, ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ದೊರಕುವುದು ತೀರಾ ಕಷ್ಟ. ಸ್ಥಳೀಯ ಮುಖಂಡರು ಇದನ್ನು ಗಂಭೀರವಾಗಿ ತೆಗೆದುಕೊಂಡದ್ದೇ ಇಲ್ಲ. ಯಾಕೆಂದರೆ ಈ ಮುಖಂಡರೆಲ್ಲ ಮೇಲ್‌ಜಾತಿಗೆ ಸೇರಿದವರು. ಹಿಂದುಳಿದ ವರ್ಗದ ಪ್ರಬಲ ಸಮುದಾಯಕ್ಕೆ ಸೇರಿದವರು. ಸರಕಾರಿ ಶಾಲೆಗಳಲ್ಲಿ ಕಲಿಯುವವರೆಲ್ಲ ಬಡವರು. ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡತೊಡಗಿದರೆ ಇವರಿಗೆ ಕೂಲಿಕೆಲಸಕ್ಕೆ ಜನರು ಸಿಗುವುದಿಲ್ಲ. ಉತ್ತರ ಭಾರತದಲ್ಲಿ ಈ ಕಾರಣಕ್ಕೆ ಗುಟ್ಟಾಗಿ ಜೀತ ಪದ್ಧತಿ ಅಸ್ತಿತ್ವದಲ್ಲಿದೆ. ದೇಶದ ಒಟ್ಟು ಶೇ. 19ರಷ್ಟು ಅಂದರೆ 11.16 ಲಕ್ಷ ಶಿಕ್ಷಕ ಹುದ್ದೆಗಳು ಶಾಲೆಗಳಲ್ಲಿ ಖಾಲಿ ಇವೆ ಎಂದು ಯುನೆಸ್ಕೋ ತನ್ನ ವರದಿಯಲ್ಲಿ ಹೇಳುತ್ತದೆ. ಇರುವ ಶಿಕ್ಷಕರಲ್ಲೂ ಅನರ್ಹರ ಸಂಖ್ಯೆ ದೊಡ್ಡದಿದೆ. ಪ್ರಾಥಮಿಕ ಪೂರ್ವ ಶಿಕ್ಷಕರ ಪೈಕಿ ಶೇ. 8, ಪ್ರಾಥಮಿಕ ಶಿಕ್ಷಕರಲ್ಲಿ ಶೇ. 5 ಹಾಗೂ ಉನ್ನತ ಪ್ರಾಥಮಿಕ ಶಿಕ್ಷಕರಲ್ಲಿ ಶೇ. 4ರಷ್ಟು ಅನರ್ಹರಿದ್ದಾರೆ ಎಂದು ವರದಿ ತಿಳಿಸಿದೆ. ಶಿಕ್ಷಕರಲ್ಲಿ ಶೇ. 50ರಷ್ಟು ಮಹಿಳೆಯರಿದ್ದರೂ, ಅನುಪಾತದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳ ನಡುವೆ ಭಾರೀ ಅಂತರವಿರುವುದನ್ನು ವರದಿ ಗುರುತಿಸಿದೆ.

ಉತ್ತರ ಪ್ರದೇಶದಲ್ಲಿ 3.3 ಲಕ್ಷ, ಬಿಹಾರದಲ್ಲಿ 2.2 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 1.1 ಲಕ್ಷ ಶಿಕ್ಷಕ ಹುದ್ದೆಗಳು ಖಾಲಿ ಇವೆ. ದೇಶದಲ್ಲೇ ಮಧ್ಯಪ್ರದೇಶದಲ್ಲಿ ಅತ್ಯಧಿಕ ಅಂದರೆ 21,077 ಏಕೋಪಾಧ್ಯಾಯ ಶಾಲೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳೇ ಅತ್ಯಧಿಕ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ ಎನ್ನುವ ಅಂಶವನ್ನೂ ಯುನೆಸ್ಕೋ ವರದಿ ಹೇಳುತ್ತದೆ. ಒಂದೆಡೆ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಸಂಪೂರ್ಣ ನಾಶ ಮಾಡಿ ಮಧ್ಯಮವರ್ಗ ಮತ್ತು ಮೇಲ್‌ಮಧ್ಯಮ ವರ್ಗ ಖಾಸಗಿ ಶಾಲೆಗಳನ್ನು ಅವಲಂಬಿಸುವಂತೆ ಮಾಡಲಾಗಿದೆ. ಬಳಿಕ, ವಿದ್ಯಾರ್ಥಿಗಳ ಕೊರತೆಯನ್ನು ಮುಂದಿಟ್ಟು ಸಾವಿರಾರು ಶಾಲೆಗಳನ್ನು ಮುಚ್ಚುತ್ತಾ ಬರಲಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ, ಶಿಕ್ಷಕರ ಕೊರತೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡು ಬಂದರೆ ಅದಕ್ಕೆ ಕಾರಣವನ್ನು ಹುಡುಕಿ ಅದನ್ನು ಸರಿಪಡಿಸಬೇಕು. ಸರಕಾರಿ ಶಾಲೆಗಳ ಮೂಲಭೂತ ಅಗತ್ಯಗಳನ್ನು ಈಡೇರಿಸಬೇಕು. ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಸರಕಾರಿ ಶಾಲೆಗಳನ್ನು ಆಧುನೀಕರಣಗೊಳಿಸಬೇಕು. ಆದರೆ ಅದನ್ನು ಮಾಡದೆ, ಶಾಲೆಗಳನ್ನೇ ಮುಚ್ಚುವ ಮೂಲಕ, ಸರಕಾರಿ ಶಾಲೆಗಳನ್ನೇ ನೆಚ್ಚಿಕೊಂಡ ಬಡವರು, ಶೋಷಿತರಿಗೆ ಶಿಕ್ಷಣದ ಬಾಗಿಲನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ.

ಮುಖ್ಯವಾಗಿ ಎಲ್ಲ ಸರಕಾರಿ ನೌಕರರ ಮಕ್ಕಳು, ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲೇ ಕಲಿಯಬೇಕು ಎಂಬ ನಿಯಮ ಮಾಡಿದರೆ ಮಾತ್ರ ಶಾಲೆಗಳು ಉಳಿಯಲು ಸಾಧ್ಯ. ಉಳಿಯುವುದು ಮಾತ್ರವಲ್ಲ, ತನ್ನಷ್ಟಕ್ಕೆ ಸರಕಾರಿ ವ್ಯವಸ್ಥೆ ಈ ಶಾಲೆಗಳ ಮೇಲೆ ಕಾಳಜಿ ವಹಿಸಲು ಆರಂಭಿಸುತ್ತದೆ. ದುರದೃಷ್ಟವಶಾತ್ ಇದೀಗ ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರಿ ಶಾಲೆ ಮಾತ್ರವಲ್ಲ, ಖಾಸಗಿ ಶಾಲೆಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಉಳ್ಳವರ ಮಕ್ಕಳಿಗೆ ಶಿಕ್ಷಣ, ಇಲ್ಲದವರಿಗೆ ಶಿಕ್ಷಣವೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಹೊತ್ತಿಗೆ, ಶಾಲೆಗಳನ್ನು ಕೆಲವು ರಾಜಕೀಯ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಹೇಗೆ ಅನರ್ಹ ಶಿಕ್ಷಕರು ಶಾಲೆಗಳಲ್ಲಿ ನುಸುಳಿಕೊಂಡಿದ್ದಾರೆಯೋ ಹಾಗೆಯೇ ಜಾತಿವಾದಿ, ಮತಾಂಧ ಶಿಕ್ಷಕರೂ ಶಾಲೆಗಳೊಳಗೆ ನುಸುಳಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸ ಇವರಿಂದ ನಡೆಯುತ್ತಿದೆ. ಶೈಕ್ಷಣಿಕವಾಗಿ ಸಕಲ ಅರ್ಹತೆ ಇವರಿಗಿದ್ದರೂ, ಇವರೊಳಗಿರುವ ಜಾತೀಯತೆ ಶಿಕ್ಷಣದ ವೌಲ್ಯಗಳನ್ನೇ ಹಾಳು ಮಾಡುತ್ತಿದೆ. ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ದಲಿತ ಮಕ್ಕಳ ಮೇಲೆ ಭೇದಭಾವ ಪ್ರದರ್ಶಿಸಿದ ಶಿಕ್ಷಕರು ಮಾಧ್ಯಮಗಳಲ್ಲಿ ಸುದ್ದಿಯಾದರು.

ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಚಿಂತನೆಗಳನ್ನು ಸದ್ದಿಲ್ಲದೆ ಮಕ್ಕಳ ತಲೆಯೊಳಗೆ ತುಂಬುವ ಶಿಕ್ಷಕರೂ ಶಾಲೆಗಳಲ್ಲಿ ತುಂಬಿಕೊಂಡಿದ್ದಾರೆ. ಇವರಿಂದಲೇ ಮಕ್ಕಳು ಸಣ್ಣ ವಯಸ್ಸಿನಲ್ಲೇ ದ್ವೇಷ ರಾಜಕೀಯವನ್ನು ಕಲಿಯುತ್ತಿದ್ದಾರೆ. ಶಾಲೆಗಳ ಪಠ್ಯದಲ್ಲಿ ರಾಜಕಾರಣಿಗಳು ನೇರ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಇವೆಲ್ಲವೂ ಭಾರತದ ಭವಿಷ್ಯವನ್ನು ಆತಂಕಕ್ಕೆ ತಳ್ಳಿದೆ. ಐಎಎಸ್‌ನಂತಹ ಉನ್ನತ ಸ್ಥಾನಕ್ಕೆ ಆರೆಸ್ಸೆಸ್ ಕಾರ್ಯಕರ್ತರು ನುಸುಳಿಕೊಂಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಆರೋಪಿಸಿದ್ದರು. ಶಿಕ್ಷಣ ವಲಯದಲ್ಲಿ ನುಸುಳಿಕೊಂಡಿರುವ ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆಯೂ ಸಮಾಜ ಜಾಗರೂಕವಾಗಬೇಕು. ಒಬ್ಬ ಶಿಕ್ಷಕ ಕೆಟ್ಟರೆ ಇಡೀ ಶಾಲೆ ಕೆಡುತ್ತದೆ. ಶಾಲೆ ಇಡೀ ಸಮಾಜವನ್ನು ಕೆಡಿಸುತ್ತದೆ. ಸಮಾಜ ದೇಶಕ್ಕೆ ಸವಾಲಾಗುತ್ತದೆ. ಆದುದರಿಂದ, ಸರಕಾರಿ ಶಾಲೆಗಳ ಶಿಕ್ಷಕರನ್ನು ತುಂಬುವ ಕೆಲಸ ನಡೆಯಬೇಕು ಮಾತ್ರವಲ್ಲ, ಅರ್ಹ, ಜಾತ್ಯತೀತ, ಸಂವಿಧಾನದ ಮೇಲೆ ನಂಬಿಕೆಯಿರುವ ಶಿಕ್ಷಕರನ್ನು ತುಂಬುವ ಕೆಲಸವನ್ನು ಮಾಡಬೇಕು. ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿದರೂ ಪರವಾಗಿಲ್ಲ, ಸರಕಾರಿ ಶಾಲೆಗಳು ಉಳಿಯಬೇಕು. ಜ್ಞಾನ ಯಾವ ಭಾಷೆಯಲ್ಲಿ ನೀಡಿದರೇನು, ಬಡವರು, ಶೋಷಿತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಇರುವುದೇ ಸರಕಾರದ ಆದ್ಯತೆಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News