ಬಿಎಸ್‍ವೈ ಆಪ್ತ ಉಮೇಶ್ ಮನೆ-ಕಚೇರಿ ಸೇರಿದಂತೆ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ, ದಾಖಲೆಗಳ ಪರಿಶೀಲನೆ

Update: 2021-10-07 17:54 GMT

ಬೆಂಗಳೂರು, ಅ. 7: ದೊಡ್ಡ ಮೊತ್ತದ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತನ ಮನೆ, ಕಚೇರಿ ಸೇರಿದಂತೆ 50 ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ದಾಖಲೆ ಪತ್ರಗಳ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ಗುರುವಾರ ಬೆಳ್ಳಂ ಬೆಳ್ಳಗ್ಗೆ ಆದಾಯ ತೆರಿಗೆ ಇಲಾಖೆ(ಐಟಿ)ಯ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಎಸ್‍ವೈ ಆಪ್ತ ಉಮೇಶ್ ಎಂಬವರ ಬೆಂಗಳೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿನ ಅವರ ಮನೆ ಮತ್ತು ಅವರ ಆಪ್ತರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಿಎಸ್‍ವೈ ಸಿಎಂ ಆಗಿದ್ದ ವೇಳೆ ಉಮೇಶ್, ಅವರಿಗೆ ಆಪ್ತ ಸಲಹೆಗಾರನಾಗಿದ್ದ ಎನ್ನಲಾಗಿದೆ.

ದಾಳಿಗೆ ಒಳಗಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಚಾಲಕ ಕಂ ನಿರ್ವಾಹಕ ಉಮೇಶ್, ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದು ಆ ಮನೆ ಸೇರಿ ಒಂಭತ್ತು ಕಡೆಗಳಲ್ಲಿ ಐಟಿ ದಾಳಿ ನಡೆದಿದ್ದು, ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ. ಆಪ್ತಸಹಾಯಕನಾಗಿ ನಿಯೋಜನೆಗೊಂಡಿದ್ದ ಉಮೇಶ್, ಯಡಿಯೂರಪ್ಪರ ಜತೆಯಲ್ಲಿಯೇ ಇರುತ್ತಿದ್ದರಲ್ಲದೆ, ಅವರ ಕಾರ್ಯಕ್ರಮಗಳ ಹೊಣೆ ಹೊತ್ತಿದ್ದರು ಎಂದು ಗೊತ್ತಾಗಿದೆ.

ಶಿವಮೊಗ್ಗ ಜಿಲ್ಲೆ ಆಯನೂರು ಮೂಲದ ಉಮೇಶ್, ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಸಂಪರ್ಕದಿಂದ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಯಡಿಯೂರಪ್ಪ ಹಾಗೂ ಅವರ ಪುತ್ರ ರಾಘವೇಂದ್ರರ ವಿಶ್ವಾಸ ಗಳಿಸಿ ಅವರಿಗೆ ಆಪ್ತ ಸಹಾಯಕರಾಗಿ ಸೇರಿಕೊಂಡಿದ್ದರು. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೂ ಆಪ್ತರಾಗಿದ್ದ ಎಂದು ಹೇಳಲಾಗಿದೆ.

ಗುತ್ತಿಗೆದಾರರ ಸಂಪರ್ಕ: ಜಲಸಂಪನ್ಮೂಲ ಇಲಾಖೆ ಗುತ್ತಿಗೆಗಳನ್ನು ನಿರ್ವಹಣೆ ಮಾಡುತ್ತಿದ್ದ ಉಮೇಶ್, ಆಂಧ್ರ, ತೆಲಂಗಾಣ ಮೂಲದ ಗುತ್ತಿಗೆದಾರರೊಂದಿಗೆ ನಂಟು ಹೊಂದಿದ್ದರು. ಕೋಟ್ಯಂತರ ರೂ. ಮೊತ್ತದ ನೀರಾವರಿ ಯೋಜನೆಗಳ ಗುತ್ತಿಗೆ ವಿಚಾರದಲ್ಲಿಯೂ ಮಧ್ಯಸ್ಥಿಕೆ ವಹಿಸಿದ್ದಲ್ಲದೆ, ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪವು ಕೇಳಿಬಂದಿದೆ. ಅಕ್ರಮವಾಗಿ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇರಿಸಿರುವ ಐಟಿ ಅಧಿಕಾರಿಗಳು ಉಮೇಶ್ ಜತೆ ಸಂಪರ್ಕದಲ್ಲಿದ್ದ ಆಂಧ್ರ ಮೂಲದ ಗುತ್ತಿಗೆದಾರದ ಮೇಲೆ ನಿಗಾ ಇರಿಸಿದ್ದಾರೆಂದು ತಿಳಿದು ಬಂದಿದೆ.

ಮನೆಗೆ ‘ಧವಳಗಿರಿ' ಹೆಸರು:  ಯಡಿಯೂರಪ್ಪ ತಮ್ಮ ಡಾಲರ್ಸ್ ಕಾಲನಿಯಲ್ಲಿರುವ ನಿವಾಸಕ್ಕೆ ಧವಳಗಿರಿ ಎಂದು ಹೆಸರಿಟ್ಟಿದ್ದಾರೆ. ಉಮೇಶ್, ತುಮಕೂರು ರಸ್ತೆಯಲ್ಲಿನ ನಾಗಸಂದ್ರ ಮೆಟ್ರೋ ಸ್ಟೇಷನ್ ಹಿಂಭಾಗದಲ್ಲಿ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ತನ್ನ ಮನೆಗೂ ಅದೇ ಹೆಸರನ್ನು ಇಟ್ಟಿದ್ದಾರೆ. ಆ ನಿವಾಸವೂ ಸೇರಿದಂತೆ ಉಮೇಶ್ ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ.

ಬಿಎಸ್‍ವೈ ಕುಟುಂಬ ರಾಮಲಿಂಗಂ ಕನ್‍ಸ್ಟ್ರಕ್ಷನ್ ಸಂಸ್ಥೆಯಿಂದ ಕಿಕ್‍ಬ್ಯಾಕ್ ಪಡೆದ ಆರೋಪ ಬಂದಿತ್ತು. ಆ ಸಂಬಂಧ ಐಟಿ ಮತ್ತು ಈಡಿ ದೂರು ದಾಖಲಿಸಲಾಗಿತ್ತು. ಉಮೇಶ್ ಕಾರ್ಯಚಟುವಟಿಕೆಗಳ ಮೇಲೆ ಹಲವು ತಿಂಗಳುಗಳಿಂದ ನಿಗಾ ಇರಿಸಿದ್ದ ಐಟಿ ಅಧಿಕಾರಿಗಳು, ದಿಢೀರ್ ದಾಳಿ ನಡೆಸಿದ್ದು, ಹಣಕಾಸಿನ ವಹಿವಾಟು, ಆಸ್ತಿ ಸಂಪಾದನೆ ಕುರಿತು ಪರಿಶೀಲನೆ ನಡೆಸಿದ್ದಾರೆ.

‘ರಾಜ್ಯದ ವಿವಿಧೆಡೆಗಳಲ್ಲಿ ಐಟಿ ದಾಳಿ ನಡೆದಿದೆ ಎಂಬ ಮಾಹಿತಿ ಬಂದಿದೆ. ನನಗೆ ಇನ್ನೂ ವಿವರವಾದ ಮಾಹಿತಿ ಬಂದಿಲ್ಲ. ಆದಾಯ ತೆರಿಗೆ ಇಲಾಖೆ ದಾಳಿಗೂ ಸರಕಾರಕ್ಕೂ ಸಂಬಂಧವಿಲ್ಲ. ಯಾರ ಮೇಲೆ ಮತ್ತು ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬ ಮಾಹಿತಿ ಇಲ್ಲದ ಕಾರಣ ಈ ಕುರಿತು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಟ್ರೈನಿ ಉದ್ಯೋಗಿ ಕೋಟ್ಯಾಧೀಶನಾಗಿದ್ದು: ಬಿಎಂಟಿಸಿ ಚಾಲಕ ಕಂ ನಿರ್ವಾಹಕನಾಗಿ 2007-08ರಲ್ಲಿ ಟ್ರೈನಿ ಉದ್ಯೋಗಿಯಾಗಿ ಕರ್ತವ್ಯಕ್ಕೆ ಸೇರಿದ್ದ ಉಮೇಶ್, ಇಂದು ಕೋಟ್ಯಾದೀಶ. ಬಿಎಸ್‍ವೈ ಸಿಎಂ ಆಗಿದ್ದ ಅವಧಿಯಲ್ಲಿ ಎರವಲು ಸೇವೆಗೆ ನಿಯೋಜನೆಗೊಂಡ ಉಮೇಶ್ ಒಂದೇ ವರ್ಷದಲ್ಲಿ ಭಡ್ತಿ ಪಡೆದಿದ್ದ. 2008ರಿಂದ ಈವರೆಗೂ ಉಮೇಶ್ ನಿಯೋಜನೆ ಮೇಲೆಯೇ ಮುಂದುವರಿಸಿದ್ದಾರೆ.

ರಾಜಾಜಿನಗರದ ಭಾಷ್ಯಂ ವೃತ್ತದ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆ ಇದ್ದು, ಸಹಕಾರ ನಗರದಲ್ಲಿ ಕೋಟ್ಯಂತರ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಬಾಗಲಗುಂಟೆಯಲ್ಲಿ ನಿವೇಶನ, ನೆಲಮಂಗಲದಲ್ಲಿ ಜಮೀನು, ಅನೇಕ ಕಡೆಗಳಲ್ಲಿ ಬಿಡಿಎ ನಿವೇಶನಗಳು, ಜೊತೆಗೆ ಕುಟುಂಬದ ಸದಸ್ಯರ ಹೆಸರಿನಲ್ಲೂ ಆಸ್ತಿ ಹೊಂದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ. ಬಿಎಸ್‍ವೈ ಸಿಎಂ ಆಗಿದ್ದ ಸಂದರ್ಭದಿಂದ ಈವರೆಗೂ ಸಿಎಂ ಆಪ್ತ ಶಾಖೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಉಮೇಶ್ ಐಟಿ ವಶಕ್ಕೆ?:

‘ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ಬಿಎಸ್‍ವೈ ಆಪ್ತ ಉಮೇಶ್ ಎಂಬವರನ್ನು ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ. ಉಮೇಶ್ ಅಕ್ರಮಗಳಿಗೆ ಸಾಥ್ ನೀಡಿದ ಆರೋಪದ ಮೇಲೆ ಅರವಿಂದ ಎಂಬವರನ್ನು ವಿಚಾರಣೆ ನಡೆಸಿದ್ದಾರೆ.

ಉತ್ತರಹಳ್ಳಿ ಮತ್ತು ಆರ್.ಟಿ.ನಗರದಲ್ಲಿನ ಅರವಿಂದ ನಿವಾಸದ ಮೇಲೆಯೂ ದಾಳಿ ನಡೆಸಿದ್ದ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ.'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News