"ನೀವು ಎಷ್ಟು ಜನರನ್ನು ಬಂಧಿಸಿದ್ದೀರಿ?" : ಉತ್ತರ ಪ್ರದೇಶ ಸರಕಾರವನ್ನು ಕೇಳಿದ ಸುಪ್ರೀಂಕೋರ್ಟ್

Update: 2021-10-07 07:26 GMT

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಗುರುವಾರ  ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್ .ವಿ. ರಮಣ ನೇತೃತ್ವದ ನ್ಯಾಯಪೀಠ, ಹಿಂಸಾಚಾರ ಘಟನೆಯಲ್ಲಿ  "ನೀವು ಎಷ್ಟು ಜನರನ್ನು ಬಂಧಿಸಿದ್ದೀರಿ?"ಎಂದು ಉತ್ತರ ಪ್ರದೇಶ ಸರಕಾರವನ್ನು ಕೇಳಿದೆ ಎಂದು NDTV ವರದಿ ಮಾಡಿದೆ.

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಘಟನೆಯಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ನಾಳೆಯೊಳಗೆ ವರದಿ ನೀಡುವಂತೆ ರಾಜ್ಯ ಸರಕಾರವನ್ನು ಕೇಳಿದೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಭೇಟಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹತ್ಯೆಗೀಡಾದ ಎಂಟು ಮಂದಿಯನ್ನು ಉಲ್ಲೇಖಿಸಿದ ನ್ಯಾಯಾಲಯ, ಘಟನೆಯ ಕುರಿತಾಗಿ ಕೈಗೊಂಡಿರುವ ನಿರ್ದಿಷ್ಟ ಕ್ರಮದ ಕುರಿತು  ನಾಳೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸರಕಾರವನ್ನು ಕೇಳಿದೆ.

"ಸ್ಥಿತಿಗತಿ ವರದಿಯಲ್ಲಿ ಕೊಲ್ಲಲ್ಪಟ್ಟ ರೈತರು, ಪತ್ರಕರ್ತರು ಇತ್ಯಾದಿ ಎಂಟು ವ್ಯಕ್ತಿಗಳ ಬಗ್ಗೆಯೂ ನಮಗೆ ತಿಳಿಸಿ. ಇದು ದುರದೃಷ್ಟಕರ ಘಟನೆ. ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ ಎಂದು ನಮಗೆ ತಿಳಿಸಿ. ನೀವು ಎಷ್ಟು ಜನರನ್ನು ಬಂಧಿಸಿದ್ದೀರಿ" ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News