ಏರ್‌ ಇಂಡಿಯಾ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಕೇರಳದ ಮಹಿಳೆ

Update: 2021-10-07 14:49 GMT
Photo: www.onmanorama.com

ಕೋಝಿಕ್ಕೋಡ್:‌ ಏರ್‌ ಇಂಡಿಯಾ ಲಂಡನ್‌ ನಿಂದ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿ ಕೇರಳದ ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ್ದು ಸದ್ಯ ಸುದ್ದಿಯಾಗಿದೆ.

ಮಗು ಮತ್ತು ತಾಯಿಯ ಆರೋಗ್ಯ ವಿಚಾರಣೆಗೆಂದು ಜರ್ಮನಿಯ ಫ್ರಾಂಕ್‌ ಫರ್ಟ್‌ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಕೊಂಡೊಯ್ದ ಕಾರಣ ವಿಮಾನವು ಕೊಚ್ಚಿಗೆ ತಲುಪುವಾಗ ಆರು ಗಂಟೆ ತಡವಾಗಿತ್ತು. ಪತ್ತನಂತಿಟ್ಟ ನಿವಾಸಿ ಮರಿಯಾ ಫಿಲಿಪ್‌ ಹಾಗೂ ಅವರ ಮಗು ಸದ್ಯ ಫ್ರಾಂಕ್‌ ಫರ್ಟ್‌ ನ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ವರದಿ ತಿಳಿಸಿದೆ.

ಮಹಿಳೆಯು ಏಳು ತಿಂಗಳ ಗರ್ಭಿಣಿಯಾಗಿದ್ದು, ರಾತ್ರಿಯ ಆಹಾರ ಸೇವಿಸಿದ ಬಳಿಕ ಹೆರಿಗೆ ನೋವು ಪ್ರಾರಂಭವಾಗಿತ್ತು. ಕೂಡಲೇ ಸಿಬ್ಬಂದಿ ವಿಮಾನದಲ್ಲಿದ್ದ ಇಬ್ಬರು ವೈದ್ಯರಿಗೆ ಮಾಹಿತಿ ನೀಡಿದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಕೇರಳದ ನರ್ಸ್‌ ಗಳು ಕೂಡಾ ಸಹಕರಿಸಿದ್ದು, ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. 

ವಿಮಾನದಲ್ಲಿ ಆಹಾರಗಳನ್ನು ಶೇಖರಿಸಿಡುವ ಜಾಗವನ್ನು ಡೆಲಿವರಿ ಕೊಠಡಿಯಾಗಿ ಮಾರ್ಪಾಡು ಮಾಡಲಾಯಿತು. ವಿಮಾನದಲ್ಲಿದ್ದ ತಲೆದಿಂಬು ಹಾಗೂ ಹಾಸಿಗೆಗಳನ್ನು ಬಳಸಲಾಯಿತು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಡಾಕ್ಟರ್‌ ಗಳ ಕಿಟ್‌ ಕೂಡಾ ಸಹಕಾರಿಯಾಯಿತು. 

ಮಗು ಮತ್ತು ತಾಯಿ ಆರೋಗ್ಯವಾಗಿದ್ದರೂ ಕೂಡಾ ಚಿಕಿತ್ಸೆ ನೀಡಲೇಬೇಕಾದ ಅವಶ್ಯಕತೆಯಿದ್ದರಿಂದ ಮೂರು ಗಂಟೆಗಳ ಒಳಗಡೆ ಆಸ್ಪತ್ರೆಗೆ ತಲುಪಿಸಬೇಕು ಎಂದು ವೈದ್ಯರು ಹೇಳಿದ್ದು, ಅದರಂತೆ ಪೈಲಟ್‌ ಗಳು ಮುಖ್ಯಸ್ಥರ ಅನುಮತಿ ಪಡೆದು ೨ ಗಂಟೆ ಕ್ರಮಿಸುವಷ್ಟು ದೂರವಿದ್ದ ಫ್ರಾಂಕ್ಫರ್ಟ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲಾಯಿತು. ಬೆಳಗ್ಗೆ ೩:೪೫ಕ್ಕೆ ಇಳಿಯಬೇಕಾಗಿದ್ದ ವಿಮಾನ ಕೊಚ್ಚಿಯಲ್ಲಿ ೯:೪೫ಕ್ಕೆ ಲ್ಯಾಂಡ್‌ ಆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News