"ಜನರಿಗೆ ವಾಹನ ಢಿಕ್ಕಿ ಹೊಡೆಸಿದವರು ಮನುಷ್ಯರಲ್ಲ, ರಕ್ತಪಿಪಾಸುಗಳು, ಆರೋಪಿಗಳನ್ನು ವಾರದೊಳಗೆ ಬಂಧಿಸಬೇಕು"

Update: 2021-10-07 16:16 GMT

ಲಖಿಂಪುರ ಖೇರಿ (ಉತ್ತರಪ್ರದೇಶ), ಅ. 7: ಲಖಿಂಪುರ ಖೇರಿ ಹತ್ಯಾಕಾಂಡದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ವಕ್ತಾರ ರಾಕೇಶ್ ಟಿಕಾಯತ್ ಉತ್ತರಪ್ರದೇಶ ಸರಕಾರವನ್ನು ಗುರುವಾರ ಆಗ್ರಹಿಸಿದ್ದಾರೆ. ‘‘ಲಖಿಂಪುರ ಖೇರಿ ಹತ್ಯಾಕಾಂಡದ ಆರೋಪಿಗಳನ್ನು ಸರಕಾರ ಕೂಡಲೇ ಬಂಧಿಸಬೇಕು’’ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ. 

ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಸಂಭವಿಸಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಲಖಿಂಪುರ ಖೇರಿಯ ಹೆಲಿಪ್ಯಾಡ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಪ್ರತಿಭಟನೆ ಮುಗಿಸಿ ಚದುರುತ್ತಿರುವ ಸಂದರ್ಭ ಕೇಂದ್ರ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಮೂರು ವಾಹನಗಳೊಂದಿಗೆ ಆಗಮಿಸಿದ್ದ. ಹಲವು ರೈತರಿಗೆ ವಾಹನ ಢಿಕ್ಕಿ ಹೊಡೆಸಿದರು. ಅನಂತರ ಎಸ್ಕೆಎಂ ನಾಯಕ ತೇಜಿಂದರ್ ಸಿಂಗ್ ಮೇಲೆ ವಾಹನ ಹರಿಸಲು ಯತ್ನಿಸಿದ್ದರು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ.
 
ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿಯಾಗಲು ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು. ರೈತರನ್ನು ಹತ್ಯೆಗೈದ ಎಲ್ಲ ಆರೋಪಿಗಳನ್ನು ಸರಕಾರ ಕೂಡಲೇ ಬಂಧಿಸಬೇಕು ಎಂದು ಬುಧವಾರ ಟಿಕಾಯತ್ ಅವರು ಆಗ್ರಹಿಸಿದ್ದರು. ‘‘ಜನರಿಗೆ ವಾಹನ ಢಿಕ್ಕಿ ಹೊಡೆಸಿದವರು ಮನುಷ್ಯರಲ್ಲ ಅಥವಾ ನಾಯಕರಲ್ಲ. ಅವರು ರಕ್ತ ಪಿಪಾಸುಗಳು. ಆರೋಪಿಗಳನ್ನು ಬಂಧಿಸಲು ಸರಕಾರಕ್ಕೆ ಒಂದು ವಾರ ಕಾಲಾವಕಾಶ ಇದೆ. ಸರಕಾರ ನ್ಯಾಯ ನೀಡಲು ವಿಫಲವಾದರೆ, ಅನಂತರ ನಾವು ಮುಂದಿ ಕಾರ್ಯತಂತ್ರವನ್ನು ಘೋಷಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News