ಪೆರು ಪ್ರಧಾನಿಯಾಗಿ ಪರಿಸರ ಹೋರಾಟಗಾರ್ತಿ ಮಿರ್ಥಾ ಪ್ರಮಾಣ ವಚನ
ಲಿಮಾ, ಅ.7: ತೀವ್ರ ರಾಜಕೀಯ ಗೊಂದಲದ ಗೂಡಾಗಿರುವ ಪೆರು ದೇಶದ ನೂತನ ಪ್ರಧಾನಿಯಾಗಿ ಪರಿಸರ ಹೋರಾಟಗಾರ್ತಿ ಮಿರ್ಥಾ ವಾಸ್ಕ್ವೆಝ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜುಲೈಯಲ್ಲಿ ಅಧಿಕಾರ ಸ್ವೀಕರಿಸಿದ್ದ ಹಾಲಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೋ ಸಂವಿಧಾನದ ಸುಧಾರಣೆ ಸಹಿತ ಹಲವು ಘೋಷಣೆ ಮಾಡಿದ್ದರು. ಆದರೆ ತಮ್ಮ ಸಚಿವ ಸಂಪುಟ ರಚಿಸಲೂ ಹೆಣಗಾಡುವಂತಾಗಿದೆ. ಹಾಲಿ ಪ್ರಧಾನಿಯಾಗಿದ್ದ ತೀವ್ರವಾದಿ ಎಡಪಂಥೀಯ ಮುಖಂಡ ಗ್ವಿಡೊ ಬೆಲಿಡೋ ಅಧಿಕಾರ ಸ್ವೀಕರಿಸಿದಂದಿನಿಂದ ಒಂದಿಲ್ಲೊಂದು ವಿವಾದಕ್ಕೆ ಕಾರಣರಾಗಿದ್ದರು. ಅವರ ಪದಚ್ಯುತಿಗೆ ತೀವ್ರ ಒತ್ತಡ , ಆಗ್ರಹ ವ್ಯಕ್ತವಾಗಿತ್ತು. ಇದೀಗ ಯಾವುದೇ ಕಾರಣ ನೀಡದೆ ಬೆಲಿಡೋರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ವಾಸ್ಕ್ವೆಝ್ರನ್ನು ನೇಮಿಸಿದ್ದಾರೆ.
ತನ್ನನ್ನು ಬೆಂಬಲಿಸುತ್ತಿರುವ ಸೌಮ್ಯವಾದಿಗಳ ಗುಂಪನ್ನು ಸಮಾಧಾನಗೊಳಿಸಲು ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 45 ವರ್ಷದ ಮಿರ್ಥಾ , ದೇಶದ ಜನತೆ ಗೌರವ ಮತ್ತು ಘನತೆಯ ಜೀವನ ಸಾಗಿಸುವುದನ್ನು ಖಾತರಿಪಡಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ. ಪೆರು ದೇಶದ ಕಾನೂನಿನ ಪ್ರಕಾರ, ಪ್ರಧಾನಿ ರಾಜೀನಾಮೆ ನೀಡಿದರೆ ಸಚಿವ ಸಂಪುಟ ತಂತಾನೇ ಬರ್ಖಾಸ್ತುಗೊಳ್ಳುತ್ತದೆ.