ಇರಾನ್ ನಲ್ಲಿ ಸಿಲುಕಿರುವ ಐವರು ಭಾರತೀಯ ನಾವಿಕರು: ವರದಿ ಸಲ್ಲಿಸಲು ಕೇಂದ್ರಕ್ಕೆ ಅವಧಿ ವಿಸ್ತರಿಸಿದ ದಿಲ್ಲಿ ಹೈಕೋರ್ಟ್

Update: 2021-10-07 16:55 GMT

ಹೊಸದಿಲ್ಲಿ,ಅ.8: ಇರಾನ್ ನಲ್ಲಿ ಸಿಲುಕಿರುವ ಐದು ಮಂದಿ ನಾವಿಕರಿಗೆ ಆರ್ಥಿಕ ನೆರವು, ದೂತಾವಾಸ ಸೇವೆಯನ್ನು ಒದಗಿಸುವಂತೆ ಹಾಗೂ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅವರ ಕುಟುಂಬಿಕರು ಸಲ್ಲಿಸಿರುವ ಮನವಿಯ ಪರಿಶೀಲನೆಗೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಗುರುವಾರ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಿದೆ. 

ಕೇಂದ್ರ ವಿದೇಶಾಂಗ ಸಚಿವಾಲಯದ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ವೈದ್ಯನಾಥ್ ಅವರು, ಇರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅರ್ಜಿದಿದಾರರ ಜೊತೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುತ್ತದೆ. ರಾಯಭಾರಿ ಕಚೇರಿಯು ಐವರು ಭಾರತೀಯ ನಾವಿಕರಿಗೆ ಊಟ ಹಾಗೂ ವಸತಿಯ ಸೌಲಭ್ಯವನ್ನು ಒದಗಿಸಿದೆ ಹಾಗೂ ಸಾಪ್ತಾಹಿಕವಾಗಿ ದಿನಸಿಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿ ಗುರುಪಾಲ್ ಸಿಂಗ್ ಅವರು, ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡ ನಾವಿಕರಿಗೆ ರಾಯಭಾರಿ ಕಚೇರಿಯ ಸೇವೆಯನ್ನು ಇನ್ನೂ ಒದಗಿಸಿಲ್ಲವೆಂದು ದೂರಿದರು.
  
ಪ್ರಕರಣಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವಾಲಯವು ಕೈಗೊಂಡಿರುವ ಕ್ರಮಗಳ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸಲು ರೇಖಾ ಪಾಲಿ ನೇತೃತ್ವದ ನ್ಯಾಯಪೀಠವು ಗುರುವಾರ ವಿದೇಶಾಂಗ ಸಚಿವಾಲಯಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 21ಕ್ಕೆ ಮುಂದೂಡಿದೆ.
      
ಎಲ್ಲಾ ಅರ್ಜಿದಾರರು ಬಡಕುಟುಂಬಗಳಿಂದ ಬಂದವರಾಗಿದ್ದಾರೆಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತಮ್ಮ ನಾವಿಕ ಶಿಕ್ಷಣ ಕೋರ್ಸ್ ಪೂರ್ಣಗೊಂಡ ಬಳಿಕ ನಾವಿಕರಿಗೆ ಯುಎಇನಲ್ಲಿ ಉದ್ಯೋಗ ದೊರಕಿಸುವ ಭರವಸೆ ನೀಡಲಾಗಿತ್ತು. ಉದ್ಯೋಗಕ್ಕೆ ಸೇರ್ಪಡೆಗೊಳ್ಳಲೆಂದು ಅವರು ಯುಎಇಗೆ ಪ್ರತ್ಯೇಕವಾಗಿ ತೆರಳಿದ್ದರು. ಆದರೆ ಆಘಾತವೆಂಬಂತೆ, ನೇಮಕಾತಿ ಏಜೆಂಟ್ ಗಳು ಅವರನ್ನು ಇರಾನ್ಗೆ ಕೊಂಡೊಯ್ದಿದ್ದು. ಅಲ್ಲಿ ಅವರನ್ನು ಅಲ್ಲಿ ಎಂವಿ ಅರ್ಟಿನ್ 10 ಕಾರ್ಗೊ ಹಡಗಿನಲ್ಲಿ ಜೀತದ ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ಅರ್ಜಿಯಲ್ಲಿ ದೂರಲಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News