ಕಾಶ್ಮೀರದ ಬಗ್ಗೆ ಪಾಕ್ ನಿಂದ ಸುಳ್ಳುಗಳ ಸರಮಾಲೆ: ವಿಶ್ವಸಂಸ್ಥೆಯಲ್ಲಿ ಭಾರತದ ಖಂಡನೆ

Update: 2021-10-07 17:28 GMT

ವಿಶ್ವಸಂಸ್ಥೆ, ಅ.7: ಕಾಶ್ಮೀರದಲ್ಲಿ ಭಾರತವು ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸುವ ಮೂಲಕ ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯಲ್ಲಿ ತನ್ನ ಸುಳ್ಳುಹೇಳಿಕೆಗಳ ಸರಣಿಯನ್ನು ಮುಂದುವರಿಸಿದೆ ಎಂದು ಭಾರತ ಬುಧವಾರ ಖಂಡಿಸಿದೆ.

ವಿಶ್ವಸಂಸ್ಥೆಯ 6ನೇ ಕಾನೂನು ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ನಿಯೋಗದ ಕಾನೂನು ಸಲಹೆಗಾರ ಡಾ. ಕಾಜಲ್ ಭಟ್, ಹೀಗೆ ಸುಳ್ಳುಹೇಳುವ ಬದಲು ಪಾಕಿಸ್ತಾನ ಮೊದಲು ತನ್ನ ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧರ ಸಹಿತ ಅಲ್ಪಸಂಖ್ಯಾತರ ‘ಶುದ್ಧೀಕರಣ ಕಾರ್ಯ’(ಒಕ್ಕಲೆಬ್ಬಿಸುವುದು)ಕ್ಕೆ ಅಂತ್ಯಹಾಡಲಿ ಎಂದರು. 

ಇದಕ್ಕೂ ಮುನ್ನ ಮಾತನಾಡಿದ್ದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್, 1991ರಿಂದ ಭಾರತ 96,000 ಕಾಶ್ಮೀರಿ ಪ್ರಜೆಗಳನ್ನು ಹತ್ಯೆ ಮಾಡಿದೆ. ಇಲ್ಲಿ ಅತ್ಯಾಚಾರವನ್ನು ಯುದ್ಧಾಸ್ತ್ರವಾಗಿ ಭಾರತ ಬಳಸಿದೆ. ಹಿಂದುತ್ವ ಸಿದ್ಧಾಂತವು ಇಸ್ಲಮೋಫೋಬಿಯಾ ಮತ್ತು ಮತಾಂಧತೆಯ ಕೆಟ್ಟ ಅಭಿವ್ಯಕ್ತಿಯಾಗಿದೆ. ಭಾರತವು ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಭಟ್, ಜಮ್ಮು-ಕಾಶ್ಮೀರ ಯಾವತ್ತೂ ಭಾರತದ ಭಾಗವಾಗಿಯೇ ಉಳಿಯಲಿದೆ. ಭಾರತದ ಹೆಸರನ್ನು ಉಲ್ಲೇಖಿಸುವಾಗಲೆಲ್ಲಾ ಪಾಕಿಸ್ತಾನ ಸುಳ್ಳಿನ ಮೂಲಕ ಪ್ರತಿಕ್ರಿಯಿಸುವುದನ್ನು ನಾವು ಖಂಡಿಸುತ್ತೇವೆ. ಸಂತ್ರಸ್ತರ ಮುಖವಾಡ ಧರಿಸಿ ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಆಶ್ರಯ ಮತ್ತು ಪ್ರೋತ್ಸಾಹ ನೀಡುವ ದೇಶವಾಗಿದೆ. ಎಲ್ಲಾ ವಿಧದ ಭಯೋತ್ಪಾದನೆಯನ್ನು ಭಾರತ ಖಂಡಿಸುತ್ತದೆ. ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದಿಲ್ಲ. ಭಯೋತ್ಪಾದಕರು ಯಾವುದೇ ಪ್ರದೇಶದಲ್ಲಿರಲಿ, ವಿಶ್ವಕ್ಕೇ ಬೆದರಿಕೆಯಾಗಿದ್ದಾರೆ. ಆದ್ದರಿಂದ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News