​ಮಂಗಳ ಗ್ರಹದಲ್ಲಿತ್ತೇ ಜೀವಜಗತ್ತು ?

Update: 2021-10-08 05:25 GMT
 (Photo- NASA)

ವಾಷಿಂಗ್ಟನ್ : ಕೋಟ್ಯಂತರ ವರ್ಷಗಳ ಹಿಂದೆ ಮಂಗಳ ಗ್ರಹದ ಪರಿಸರವನ್ನು ರೂಪಿಸುವಲ್ಲಿ ನೀರು ಹೇಗೆ ನೆರವಾಗಿದೆ ಎಂಬುದಕ್ಕೆ ಸಾಕ್ಷಿಯಾದ ಚಿತ್ರಗಳನ್ನು ನಾಸಾದ ರೋವರ್ ಸೆರೆ ಹಿಡಿದಿದೆ. ಇದು ಈ ಕೆಂಪು ಗ್ರಹದಲ್ಲಿ ಪ್ರಾಚೀನ ಕಾಲದ ಜೀವಜಗತ್ತಿನ ಬಗ್ಗೆ ಪುರಾವೆ ಸಂಗ್ರಹಿಸಲು ಸುಳಿವುಗಳನ್ನು ನೀಡಲಿದೆ ಎಂದು ಅಧ್ಯಯನವೊಂದು ಸ್ಪಷ್ಟಪಡಿಸಿದೆ.

ಕಳೆದ ಫೆಬ್ರವರಿಯಲ್ಲಿ ನಾಸಾದ ಪರ್ಸರ್ವೆನ್ಸ್ ರೋವರ್ ಮಂಗಳನ ಜೆಝಿರೊ ಕ್ರಾಟರ್‌ನಲ್ಲಿ ಇಳಿದಿತ್ತು. ಇದು ಕಳುಹಿಸಿದ ಚಿತ್ರದಿಂದಾಗಿ ಒಂದು ಸುಧೀರ್ಘ ಉದ್ದದ ನದಿ, ಸರೋವರಕ್ಕೆ ನೀರುಣಿಸಿ, ಕೆಸರು ಮಣ್ಣು ನಿಕ್ಷೇಪ ರೂಪುಗೊಳ್ಳಲು ಕಾರಣವಾಗಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಬಾಹ್ಯಾಕಾಶದಿಂದ ಈ ಮುಖಜಭೂಮಿಯ ಚಿತ್ರ ಸೆರೆ ಹಿಡಿಯಲಾಗಿದೆ. ಈ ಹೈರೆಸಲ್ಯೂಶನ್ ಚಿತ್ರವನ್ನು ವಿಶ್ಲೇಷಿಸಿ ವೈಜ್ಞಾನಿಕ ಅಧ್ಯಯನ ಕೈಗೊಳ್ಳಲಾಗಿದ್ದು, ಕಡಿದಾದ ಬಂಡೆಯ ಪ್ರದೇಶ ಹಿಂದೆ ನದಿಮುಖಜಭೂಮಿಯ ದಂಡೆಯಾಗಿತ್ತು ಎಂದು ಅಂದಾಜಿಸಿದ್ದಾರೆ.

ಈ ಕಡಿದಾದ ಬಂಡೆಯ ಒಳಗೆ ಇರುವ ಪದರಗಳು, ಇದು ಹೇಗೆ ರೂಪುಗೊಂಡಿದೆ ಎನ್ನುವುದನ್ನು ಬಹಿರಂಗಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮಂಗಳ ಗ್ರಹದ ಈ ಬಂಡೆಯ ಚಿತ್ರ ಮತ್ತು ಭೂಮಿಯ ನದಿ ಮುಖಜಭೂಮಿಗಳ ನಡುವೆ ಸಾಮ್ಯತೆ ಇರುವುದನ್ನು ನಾಸಾದ ಬಾಹ್ಯಾಕಾಶ ಜೀವಶಾಸ್ತ್ರಜ್ಞೆ ಅಮಿ ವಿಲಿಯಮ್ಸ್ ಮತ್ತು ಆಕೆಯ ಫ್ಲೋರಿಡಾ ತಂಡ ದೃಢಪಡಿಸಿದೆ.

ಆರಂಭಿಕ ಹಂತದಲ್ಲಿ ನೀರು ನಿಧಾನವಾಗಿ ಹರಿಯುತ್ತಿತ್ತು ಎನ್ನುವುದು ತಳಮಟ್ಟದ ಮೂರು ಪದರಗಳ ಆಕೃತಿಯಿಂದ ತಿಳಿದು ಬರುತ್ತದೆ. ಇದು ಸುಮಾರು 3.7 ಶತಕೋಟಿ ವರ್ಷಗಳ ಹಿಂದೆ ಮಂಗಳಗ್ರಹ ಜಲ ಆವರ್ತವನ್ನು ಬೆಂಬಲಿಸಲು ಅಗತ್ಯವಾದ ಬೆಚ್ಚಗಿನ ಹಾಗೂ ತೇವಾಂಶದ ವಾತಾವರಣವನ್ನು ಹೊಂದಿತ್ತು ಎನ್ನುವುದಕ್ಕೆ ಪುರಾವೆಯಾಗಿದೆ ಎಂದು ಅಧ್ಯಯನ ವಿವರಿಸಿದೆ.

ಈ ಬಂಡೆಯ ಮೇಲ್ಪದರದಲ್ಲಿ ಸುಮಾರು ಒಂದು ಮೀಟರ್ ಗಾತ್ರದ ಕಲ್ಲುಗಳು ಚದುರಿದಂತೆ ಕಂಡುಬಂದಿದ್ದು, ಭೀಕರ ಪ್ರವಾಹದಿಂದ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News