"ಯಾವ ಆಧಾರದಲ್ಲಿ ನೀಟ್‌ ಪರೀಕ್ಷೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 8 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಿದ್ದೀರಿ?"

Update: 2021-10-08 09:42 GMT

ಹೊಸದಿಲ್ಲಿ: ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಪ್ರವೇಶದಲ್ಲಿ ಮೀಸಲಾತಿಗಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ವರ್ಗವನ್ನು ನಿರ್ಧರಿಸಲು ಎಂಟು ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಿತಿಯನ್ನು ನಿಗದಿಪಡಿಸುವ ನಿರ್ಧಾರದ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನೆಗಳನ್ನು ಕೇಳಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅನುಷ್ಠಾನಕ್ಕೆ ಅವಕಾಶ ನೀಡಿತು. ಆರ್ಥಿಕವಾಗಿ ಹಿಂದುಳಿದ ವರ್ಗವನ್ನು ನಿರ್ಧರಿಸಲು ಎಂಟು ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ನಿಗದಿಪಡಿಸಲು ಆಧಾರವೇನೆಂದು ಅಫಿಡವಿಟ್ ಸಲ್ಲಿಸುವಂತೆ ಕೇಳಿತು.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ವಾರ್ಷಿಕ ಎಂಟು ಲಕ್ಷದ ಮಿತಿಯನ್ನು ನಿಗದಿಪಡಿಸುವುದು ರಾಷ್ಟ್ರೀಯ ಜೀವನ ವೆಚ್ಚ ಸೂಚ್ಯಂಕದ ಆಧಾರದಿಂದ ಆಗಿದೆ ಎಂದು ಕೇಂದ್ರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿವಿ ನಾಗರತ್ನ ಅವರ ಪೀಠವು ಮಿತಿಯನ್ನು ನಿಗದಿಪಡಿಸಲು ಆಧಾರ ಮತ್ತು ನಿಯತಾಂಕಗಳು ಯಾವುವು ಮತ್ತು ಈ ವಿಚಾರದಲ್ಲಿ ಯಾವುದೇ ಚರ್ಚೆ ನಡೆದಿದೆಯೇ ಅಥವಾ ಸರಳವಾಗಿ ಎಂಟು ಲಕ್ಷ ಆದಾಯದ ಅಂಕಿಅಂಶವನ್ನು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವರ್ಗದಲ್ಲಿ ಕೆನೆ ಪದರವನ್ನು ನಿರ್ಧರಿಸುವ ಮಿತಿಯಿಂದ ತೆಗೆದುಕೊಳ್ಳಲಾಗಿದೆಯೇ? ಎಂದು ಕೇಂದ್ರವನ್ನು ಪ್ರಶ್ನಿಸಿತು.

ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಮತ್ತು ಆರ್ಥಿಕ ಹಿಂದುಳಿದ ವರ್ಗಕ್ಕೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಕೇಂದ್ರ ಮತ್ತು ವೈದ್ಯಕೀಯ ಸಮಾಲೋಚನಾ ಸಮಿತಿಯ (ಎಮ್‌ಸಿಸಿ) ಜುಲೈ 29 ರ ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

"ನಾವು ಎಂಟು ಲಕ್ಷ ವಾರ್ಷಿಕ ಆದಾಯದ ಆಧಾರವೇನೆಂದು ತಿಳಿಯಲು ಬಯಸುತ್ತೇವೆ. ಇದರ ಹಿಂದಿನ ಅಧ್ಯಯನವೇನು? ಯಾವುದೇ ಚರ್ಚೆ ಇದೆಯೇ? ಎಂಟು ಲಕ್ಷದ ಮಿತಿಯನ್ನು ದೇಶದಾದ್ಯಂತ ಎಂದು ಹೇಳಬಹುದೇ? ಪ್ರತಿ ರಾಜ್ಯ ಮತ್ತು ಪ್ರತಿ ರಾಜ್ಯವು ವಿಭಿನ್ನ ಜೀವನ ವೆಚ್ಚವನ್ನು ಹೊಂದಿದೆ. ಕಾಸ್ಮೋಪಾಲಿಟನ್ ನಗರಗಳಾದ ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳು ಉತ್ತರ ಪ್ರದೇಶದ ನಗರಗಳಿಗಿಂತ ಅಥವಾ ಬೇರೆ ಯಾವುದೇ ಸಣ್ಣ ನಗರಗಳಿಗಿಂತ ವಿಭಿನ್ನ ಜೀವನ ವೆಚ್ಚಗಳನ್ನು ಹೊಂದಿವೆ. ದೇಶದ ಪ್ರತಿ ಸ್ಥಳಕ್ಕೂ ಎಂಟು ಲಕ್ಷದ ಮಿತಿ ಒಂದೇ ಆಗಿರಲು ಹೇಗೆ ಸಾಧ್ಯ?" ಎಂದು ಪೀಠ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News