ಬಿಜೆಪಿ ವಕ್ತಾರನನ್ನು ರೈತ ನಾಯಕನೆಂದು ಪರಿಚಯಿಸಿದ ಆಜ್ ತಕ್, ಝೀ ನ್ಯೂಸ್: ವರದಿ

Update: 2021-10-09 11:52 GMT
Photo: newslaundry

ಹೊಸದಿಲ್ಲಿ: ಉತ್ತರ ಪ್ರದೇಶದ ಲಖೀಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಜ್ ತಕ್ ಮತ್ತು ಝೀ ನ್ಯೂಸ್ ವಾಹಿನಿಗಳು ಕ್ರಮವಾಗಿ ಅಕ್ಟೋಬರ್ 5 ಹಾಗೂ 7ರಂದು ನಡೆಸಿದ ಚರ್ಚಾ ಕಾರ್ಯಕ್ರಮಗಳಲ್ಲಿ ಹಲವಾರು ರಾಜಕೀಯ ಪಕ್ಷಗಳ ವಕ್ತಾರರು ಭಾಗವಹಿಸಿದ್ದರು. ಹೀಗೆ ಭಾಗವಹಿಸಿದವರಲ್ಲೊಬ್ಬರು ಕುಲದೀಪ್ ಸಿಂಗ್ ಧಲಿವಾಲ್. ಆವರನ್ನು ರೈತ ನಾಯಕನೆಂದು ಪರಿಚಯಿಸಲಾಯಿತು. ಆದರೆ ಕುಲದೀಪ್ ಅವರ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಅವರು ತಮ್ಮನ್ನು ಬಿಜೆಪಿ ವಕ್ತಾರನೆಂದು ಪರಿಚಯಿಸಿಕೊಂಡಿದ್ದಾರೆ ಎಂದು newslaundry.com ವರದಿ ಮಾಡಿದೆ.

ತಮ್ಮ `ದಂಗಲ್' ಕಾರ್ಯಕ್ರಮದಲ್ಲಿ ಆಜ್ ತಕ್ ನ ನಿರೂಪಕಿ ಚಿತ್ರಾ ತ್ರಿಪಾಠಿ, ಅತಿಥಿಯನ್ನು ಪರಿಚಯಿಸುತ್ತಾ ಇಂದು ನಮ್ಮೊಂದಿಗೆ `ರೈತ ನಾಯಕ ಕುಲದೀಪ್ ಸಿಂಗ್ ಧಲಿವಾಲ್' ಇದ್ದಾರೆ ಎಂದಿದ್ದಾರೆ. ಆಗ ಟಿವಿ ಪರದೆಯಲ್ಲಿ ಕಾಣಿಸಿರುವ ಪಠ್ಯದಲ್ಲೂ ರೈತ ನಾಯಕನೆಂದೇ ಬರೆಯಲಾಗಿತ್ತು.

ಅಕ್ಟೋಬರ್ 7ರಂದು ಝೀ ನ್ಯೂಸ್‍ನ ತಾಲತ ಥೋಕ್ ಕೆ ಕಾರ್ಯಕ್ರಮದಲ್ಲೂ ಧಲಿವಾಲ್ ಭಾಗವಹಿಸಿದ್ದರು. ಆಗ ಕೂಡ ನಿರೂಪಕ ಸಚಿನ್ ಅರೋರ ಅವರನ್ನು ರೈತ ನಾಯಕನೆಂದು ಪರಿಚಯಿಸಿದ್ದರು. ಕಾರ್ಯಕ್ರಮದಲ್ಲಿ ಧಲಿವಾಲ್ ಬಿಜೆಪಿ ಹಾಗೂ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ್ ಅವರ ಪರ ಮಾತನಾಡಿದರು. ಧಲಿವಾಲ್ ಅವರು ಬಿಜೆಪಿ ವಕ್ತಾರನೆಂದು ಸಮಾಜವಾದಿ ಪಕ್ಷದ ಘನಶ್ಯಾಮ್ ತಿವಾರಿ ಹೇಳಿದ ಕೆಲವೇ ಕ್ಷಣದಲ್ಲಿ ವಾಹಿನಿಯು ಕಾಶ್ಮೀರದಲ್ಲಿ ಇಬ್ಬರು ನಾಗರಿಕರು ಮೃತಪಟ್ಟ ಘಟನೆಯ  ವರದಿ ಪ್ರಸಾರ ಮಾಡಿದೆ.

ಧಲಿವಾಲ್ ಅವರ ಟ್ವಿಟ್ಟರ್ ಪ್ರೊಫೈಲ್ ಪ್ರಕಾರ ಅವರು ಕಿಸಾನ್ ಕೊ-ಆಪರೇಟಿವ್ ಫಾರ್ಮಿಂಗ್ ಫೆಡರೇಷನ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ, ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News