ಫೇಸ್ ಬುಕ್ ಪಕ್ಷಪಾತಿ, ಪ್ರಜಾಪ್ರಭುತ್ವಕ್ಕೆ ಮಾರಕ : ಶಾಂತಿ ನೊಬೆಲ್ ಪುರಸ್ಕೃತೆ ಮರಿಯಾ ರೇಸ

Update: 2021-10-09 16:27 GMT
photo: instagram 

ಮನಿಲಾ, ಅ.9: ತನಗೆ ದೊರಕಿದ ನೊಬೆಲ್ ಪ್ರಶಸ್ತಿ ಜಗತ್ತಿನ ಎಲ್ಲಾ ಪತ್ರಕರ್ತರಿಗೆ ಸಂದ ಪುರಸ್ಕಾರವಾಗಿದ್ದು ಪತ್ರಿಕಾ ಸ್ವಾತಂತ್ರಕ್ಕಾಗಿನ ತನ್ನ ಹೋರಾಟ ಮುಂದುವರಿಯಲಿದೆ ಎಂದು ಫಿಲಿಪ್ಪೀನ್ಸ್ ನ ಪತ್ರಕರ್ತೆ ಮರಿಯಾ ರೆಸ್ಸಾ ಶನಿವಾರ ಹೇಳಿದ್ದಾರೆ. ಜೊತೆಗೆ ಸಾಮಾಜಿಕ ತಾಣ ದೈತ್ಯ ಫೇಸ್‌ ಬುಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಫೇಸ್‌ ಬುಕ್‌ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ದ್ವೇಷ ಭಾಷಣಗಳನ್ನು ತಡೆಯಲು ಅದು ವಿಫಲವಾಗುತ್ತಿದೆ ಎಂದು ರಾಯ್ಟರ್ಸ್‌ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಫೇಸ್‌ ಬುಕ್‌‌ ನ ಅಂಕಿಅಂಶಗಳು ಸತ್ಯದ ಮೇಲೆ ದ್ವೇಷವನ್ನು ಪ್ರಸಾರ ಮಾಡಲು ಬಯಸುತ್ತದೆ. ಸೋಶಿಯಲ್‌ ಮೀಡಿಯಾಗಳನ್ನು ಬಳಸಿ ನಡೆಯುವ ಆನ್‌ ಲೈನ್‌ ದಾಳಿಗಳು ಒಂದು ಉದ್ದೇಶದಿಂದ ಕೂಡಿರುತ್ತದೆ. ಅವುಗಳನ್ನು ಆಯುಧಗಳಂತೆ ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರದ ರಕ್ಷಣೆಗೆ ನಡೆಸಿದ ಪ್ರಯತ್ನಗಳಿಗಾಗಿ ರೆಸ್ಸಾ ಹಾಗೂ ರಶ್ಯಾದ ಪತ್ರಕರ್ತ ಡಿಮಿಟ್ರಿ ಮುರಟೋವ್ಗೆ ಶುಕ್ರವಾರ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ. ಈ ಪ್ರಶಸ್ತಿ ಜಗತ್ತಿನೆಲ್ಲೆಡೆಯ ಪತ್ರಕರ್ತರಿಗೆ ಸಂದಿರುವ ಪುರಸ್ಕಾರವಾಗಿದೆ. ಇಂದಿನ ದಿನಗಳಲ್ಲಿ ಪತ್ರಕರ್ತನಾಗಿರುವುದು ತುಂಬಾ ಕಷ್ಟ ಮತ್ತು ಅಪಾಯಕಾರಿಯಾಗಿದೆ ಎಂದು ಎಎಫ್ಪಿ ಜತೆಗಿನ ಸಂದರ್ಶನದಲ್ಲಿ ರ‍್ಯಾಪ್ಲರ್ ಎಂಬ ಸುದ್ದಿ ವೆಬ್ ಸೈಟ್ ನ ಸಹಸಂಸ್ಥಾಪಕಿಯಾಗಿರುವ ರೆಸ್ಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಅಂತರ್ರಾಷ್ಟ್ರೀಯ ಪುರಸ್ಕಾರವು ತಾನು ಹಾಗೂ ಫಿಲಿಪ್ಪೀನ್ಸ್ ನ ಇತರ ಪತ್ರಕರ್ತರಿಗೆ ಎದುರಾಗುವ ದೈಹಿಕ ಹಲ್ಲೆ ಹಾಗೂ ಆನ್ ಲೈನ್ ದಾಳಿಯ ವಿರುದ್ಧ ರಕ್ಷಾಕವಚವಾಗಲಿದೆ. ‘ನಾವು ಅವರ ವಿರುದ್ಧ’ ಎಂಬ ಪರಿಕಲ್ಪನೆ ಪತ್ರಕರ್ತರ ಸೃಷ್ಟಿಯಲ್ಲ. ಇದು ಸಮಾಜವನ್ನು ವಿಭಜಿಸಲು ತಮ್ಮ ಅಧಿಕಾರ ಬಳಸಲು ಇಚ್ಛಿಸುವ ಅಧಿಕಾರರೂಢರು ಸೃಷ್ಟಿಸಿದ ಪದವಾಗಿದೆ. ಪತ್ರಕರ್ತರು ಯಾವುದೇ ಭೀತಿಯಿಲ್ಲದೆ ತಮ್ಮ ಕರ್ತವ್ಯ ಮುಂದುವರಿಸಲು ಈ ಪ್ರಶಸ್ತಿ ಅವಕಾಶ ನೀಡಲಿದೆ ಎಂಬ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.

ಫಿಲಪ್ಪೀನ್ಸ್ ನ ಅಧ್ಯಕ್ಷ ರಾಡ್ರಿಗೊ ಡ್ಯುಟೆರ್ಟ್ ಅವರ ಸರಕಾರದ ಕಾರ್ಯನೀತಿಯ ಕಡು ಟೀಕಾಕಾರರಾಗಿರುವ ರೆಸ್ಸಾ, ತನ್ನ ವೆಬ್ ಸೈಟ್ ಮೂಲಕ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ, ಮಾದಕವಸ್ತು ವಿರೋಧಿ ಕಾರ್ಯಾಚರಣೆಯ ಹೆಸರಲ್ಲಿ ಹಲವು ಕಡುಬಡವರನ್ನು ಹತ್ಯೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿರುವ ಪ್ರಕರಣದ ಬಗ್ಗೆ ವರದಿ ಮಾಡಿ ಸರಕಾರದ ಕೆಂಗಣ್ಣಿಗೆ ಗುರಿಯಾದವರು. ಈ ಪ್ರಕರಣದ ವಿಚಾರಣೆಯ ನೆಪದಲ್ಲಿ ನಡೆದ ಹತ್ಯೆಗಳ ಕುರಿತ ಆಘಾತಕಾರಿ ಫೋಟೋಗಳನ್ನು ಪ್ರಕಟಿಸಿದ ದೇಶೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ರ್ಯಾಪ್ಲರ್ ವೆಬ್ ಸೈಟ್ ಪ್ರಮುಖವಾಗಿತ್ತು.

ಮಾದಕವಸ್ತು ವಿರೋಧಿ ಕಾರ್ಯಾಚರಣೆಯ ಸಂದರ್ಭ ನಡೆದಿರಬಹುದಾದ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಪೂರ್ಣಪ್ರಮಾಣದ ತನಿಖೆ ನಡೆಸಲು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಆದೇಶಿಸಿತ್ತು. ರೆಸ್ಸಾ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ತೆರಿಗೆ ವಂಚನೆಗೆ ಸಂಬಂಧಿಸಿದ 7 ಕಾನೂನು ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಇದರಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದವರು ಹೇಳಿದ್ದಾರೆ. ಕಳೆದ ವರ್ಷ ಸೈಬರ್ ನಿಂದನೆ ಪ್ರಕರಣದಲ್ಲಿ 6 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ರೆಸ್ಸಾ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಈ ವರ್ಷಾರಂಭ ಸೈಬರ್ ನಿಂದನೆಗೆ ಸಂಬಂಧಿಸಿದ ಇನ್ನೂ 2 ಪ್ರಕರಣಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು. ರೆಸ್ಸಾಗೆ ದೊರೆತ ಪುರಸ್ಕಾರವು ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು ಎನಿಸಿರುವ ಫಿಲಿಪ್ಪೀನ್ಸ್ನಲ್ಲಿ ದಕ್ಕಿರುವ ಮಹಾನ್ ಗೆಲುವಾಗಿದೆ ಎಂದು ಫಿಲಿಪ್ಪೀನ್ಸ್ನ ಪತ್ರಕರ್ತರ ಸಂಘಟನೆ ಹಾಗೂ ಮಾನವಹಕ್ಕು ಹೋರಾಟಗಾರರು ಶ್ಲಾಘಿಸಿದ್ದಾರೆ.

ನಿರ್ಭಯವಾಗಿರುವುದು ಎಂದರೆ ಹೆದರದೆ ಇರುವುದು ಎಂದಲ್ಲ. ನಿಮ್ಮ ಭಯವನ್ನು ಹೇಗೆ ನಿಭಾಯಿಸುವುದು ಎಂದರ್ಥ. ನನ್ನ ಭಾವನೆಗಳಲ್ಲಿ ಹೆದರಿಕೆಗೆ ಅವಕಾಶ ನೀಡಿದ್ದರೆ, ನನ್ನ ಮುಖದಲ್ಲಿನ ಪ್ರತಿಕ್ರಿಯೆಯಲ್ಲಿ ಹೆದರಿಕೆ ವ್ಯಕ್ತಪಡಿಸಿದ್ದರೆ ಅಧಿಕಾರದ ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು. ನಿಮ್ಮ ಭಯವನ್ನು ಗೆಲ್ಲುವುದು ಇಲ್ಲಿರುವ ಅತೀ ದೊಡ್ಡ ಸವಾಲಾಗಿದೆ.

ಸರಣಿ ಕ್ರಿಮಿನಲ್ ಪ್ರಕರಣ ದಾಖಲು

ಹೌ ಟು ಸ್ಟ್ಯಾಂಡ್ ಅಪ್ ಎ ಡಿಕ್ಟೇಟರ್(ಸರ್ವಾಧಿಕಾರಿಯನ್ನು ಎದುರಿಸಿ ನಿಲ್ಲುವ ಬಗೆ) ಎಂಬ ಪುಸ್ತಕ ಬರೆದಿರುವ ಮರಿಯಾ ರೆಸ್ಸಾರ ರ್ಯಾಪ್ಲರ್ ವೆಬ್ ಸೈಟ್ ಒಂದು ಸುಳ್ಳುಸುದ್ಧಿ ಪ್ರಸಾರ ಕೇಂದ್ರ ಎಂದು ಫಿಲಿಪ್ಪೀನ್ಸ್ ನ ಅಧ್ಯಕ್ಷ ರಾಡ್ರಿಗೊ ಡ್ಯುಟೆರ್ಟ್ ಟೀಕಿಸಿದ್ದರು. ರೆಸ್ಸಾ ವಿರುದ್ಧ ಆನ್ ಲೈನ್ ವೇದಿಕೆಯ ಮೂಲಕ ನಿಂದನೆ, ಅಪಹಾಸ್ಯ, ಟೀಕೆಗಳ ಸರಮಾಲೆಯೇ ಮುಂದುವರಿದಿದೆ. 2016ರಲ್ಲಿ ಡ್ಯುಟೆಟ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ರೆಸ್ಸಾ ಹಾಗೂ ಅವರ ವೆಬ್ ಸೈಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಮತ್ತು ನಿರಂತರ ವಿಚಾರಣೆ ಮುಂದುವರಿದಿದೆ. ಆದರೆ ತನ್ನ ವೆಬ್ ಸೈಟ್ ನ ಮೂಲಕ ರೆಸ್ಸಾ ಹೋರಾಟ ಮುಂದುವರಿಸುತ್ತಿದ್ದಾರೆ. ಈ ತಿಂಗಳು ದೇಶದಲ್ಲಿ ನಡೆಯುವ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ಅಸ್ತಿತ್ವವಾದಕ್ಕೆ ಸಂಬಂಧಿಸಿದ ಪ್ರಕ್ರಿಯೆಯಾಗಿದೆ ಎಂದು ರೆಸ್ಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News