ಕಾಂಗೊ: ನೌಕೆ ಮುಳುಗಿ 100ಕ್ಕೂ ಅಧಿಕ ಮಂದಿ ಮೃತ್ಯು

Update: 2021-10-09 17:03 GMT

ಕಿನ್ಹಾಸ, ಅ.9: ಕಾಂಗೊ ನದಿಯಲ್ಲಿ ನೌಕೆಯೊಂದು ಮುಳುಗಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಕಾಂಗೊ ಗಣರಾಜ್ಯದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಪಿರೋಗಿಯೊ ಎಂದು ಕರೆಯಲಾಗುವ 9 ಸಣ್ಣ ಸಾಂಪ್ರದಾಯಿಕ ತೆಪ್ಪಗಳನ್ನು ಒಂದರ ಪಕ್ಕ ಒಂದರಂತೆ ಹಗ್ಗದಿಂದ ಕಟ್ಟಿ ತಾತ್ಕಾಲಿಕ ನೌಕೆಯನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಯಾಣಿಕರು ಪ್ರಯಾಣಿಸಿರುವುದು ದುರಂತಕ್ಕೆ ಕಾರಣವಾಗಿದೆ. ‌

ಸೋಮವಾರ ರಾತ್ರಿ ಕಳೆದ ಬಳಿಕ ಸಂಭವಿಸಿದ್ದ ಈ ದುರಂತದ ಬಗ್ಗೆ ಮಾಹಿತಿ ದೊರಕಿದ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು 51 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 39 ಮಂದಿಯನ್ನು ರಕ್ಷಿಸಲಾಗಿದ್ದು ಇನ್ನೂ 69 ಮಂದಿ ನಾಪತ್ತೆಯಾಗಿರುವ ಸಾಧ್ಯತೆಯಿದ್ದು ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೊಂಗಾಲಾ ಪ್ರಾಂತದ ಗವರ್ನರ್ ಅವರ ವಕ್ತಾರ ನೆಸ್ಟರ್ ಮಗಬದೊ ಹೇಳಿದ್ದಾರೆ. ನೌಕೆಯಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ತಾತ್ಕಾಲಿಕ ನೌಕೆಯ ಸಾಮರ್ಥ್ಯವನ್ನು ಪರಿಗಣಿಸಿ ಸಂತ್ರಸ್ತರ ಬಗ್ಗೆ ಅಂದಾಜು ಮಾಡಲಾಗಿದೆ. ರಾತ್ರಿ ವೇಳೆಯಲ್ಲಿನ ಹವಾಮಾನ ವೈಪರೀತ್ಯವೂ ದುರಂತಕ್ಕೆ ಕಾರಣವಾಗಿರಬಹುದು. ಶೋಧ ಮತ್ತು ರಕ್ಷಣಾ ತಂಡದ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News