ಮಧ್ಯಪ್ರದೇಶ: ಗ್ರಾಮವನ್ನು ತೊರೆಯದ್ದಕ್ಕೆ ಮುಸ್ಲಿಂ ಕುಟುಂಬದ ಮೇಲೆ ದಾಳಿ, ಸಂತ್ರಸ್ತರ ವಿರುದ್ಧವೇ ದೂರು ದಾಖಲು

Update: 2021-10-10 17:37 GMT
PHOTO:thewire.in

ಭೋಪಾಲ,ಅ.10: ಹಿಂದುಗಳೇ ಬಹುಸಂಖ್ಯಾತರಾಗಿರುವ ಇಂದೋರ ಜಿಲ್ಲೆಯ ಕಂಪೇಲ್ ಗ್ರಾಮವನ್ನು ತೊರೆಯಲು ನಿರಾಕರಿಸಿದ್ದಕ್ಕಾಗಿ ಎಂಟು ಸದಸ್ಯರ ಮುಸ್ಲಿಂ ಕುಟುಂಬವೊಂದರ ಮೇಲೆ ಶನಿವಾರ ರಾತ್ರಿ ಗುಂಪೊಂದು ದಾಳಿ ನಡೆಸಿದೆ. ಈ ಕುಟುಂಬ ಗ್ರಾಮದಲ್ಲಿ ವಾಸವಿರುವ ಏಕೈಕ ಮುಸ್ಲಿಂ ಕುಟುಂಬವಾಗಿದೆ. ಘಟನೆಯಲ್ಲಿ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಇಂದೋರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬಿಣದ ಸರಳುಗಳೊಂದಿಗೆ ಸಜ್ಜಿತರಾಗಿದ್ದ ಗುಂಪಿನಲ್ಲಿದ್ದವರು ದಾಳಿಯ ವೇಳೆ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ಸಂತ್ರಸ್ತರು ವೃತ್ತಿಯಿಂದ ಕಮ್ಮಾರರಾಗಿದ್ದು ಎರಡು ವರ್ಷಗಳ ಹಿಂದಷ್ಟೇ ಕಂಪೆಲ್ ಗ್ರಾಮಕ್ಕೆ ಬಂದು ನೆಲೆಸಿದ್ದರು ಮತ್ತು ಸಮೀಪದ ಖುದೆಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಯ್ದೆ ಗ್ರಾಮದ ಹೊರವಲಯದಲ್ಲಿ ಕೃಷಿ ಉಪಕರಣಗಳನ್ನು ದುರಸ್ತಿ ಮಾಡುವ ವರ್ಕ್ಶಾಪ್ ನಡೆಸುತ್ತಿದ್ದರು.
 
ಸಂತ್ರಸ್ತರ ಪೈಕಿ ಶಾರುಕ್ ಲೋಹಾರ್(25) ಸಲ್ಲಿಸಿರುವ ದೂರಿನ ಮೇರೆಗೆ ಪೊಲೀಸರು ಘಟನೆ ನಡೆದ ಸುಮಾರು ಎಂಟು ಗಂಟೆಗಳ ಬಳಿಕ ಹಿಂದು ಸಮುದಾಯಕ್ಕೆ ಸೇರಿದ ಒಂಭತ್ತು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ರವಿವಾರ ರಾತ್ರಿಯವರೆಗೂ ಯಾರನ್ನೂ ಬಂಧಿಸಿಲ್ಲ.

ಈ ಪ್ರಕರಣವನ್ನು ದಾಖಲಿಸಿಕೊಂಡ ಕೆಲವೇ ಗಂಟೆಗಳ ಬಳಿಕ ಕಂಪೇಲ್ನ ಅಂಗಡಿಯೊಂದರ ಮಾಲಿಕ ವಿಕಾಸ ಸಿಂಗ್ ನೀಡಿರುವ ಪ್ರತಿದೂರಿನ ಮೇರೆಗೆ ಪೊಲೀಸರು ಸಂತ್ರಸ್ತ ಮುಸ್ಲಿಂ ಕುಟುಂಬದ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದಾರೆ. ಟ್ರಾಕ್ಟರ್ ಟ್ರಾಲಿಯ ನಿರ್ಮಾಣಕ್ಕಾಗಿ ತಾನು ಮುಸ್ಲಿಂ ಕುಟುಂಬಕ್ಕೆ ಎರಡು ತಿಂಗಳುಗಳ ಹಿಂದೆ 75,000 ರೂ.ಗಳನ್ನು ನೀಡಿದ್ದು,ಈವರೆಗೆ ಟ್ರಾಲಿಯನ್ನು ನೀಡಿಲ್ಲ. ತಾನು ಆ ಬಗ್ಗೆ ಪ್ರಶ್ನಿಸಿದಾಗ ಹಣ ಅಥವಾ ಟ್ರಾಲಿಯನ್ನು ನೀಡದೇ ಅವರು ತನ್ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದರು . ಹಣದ ಕುರಿತು ವಿವಾದವು ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಸಿಂಗ್ ತನ್ನ ದೂರಿನಲ್ಲಿ ಆರೋಪಿಸಿದ್ದಾನೆ.
 
ಆರೆಸ್ಸೆಸ್ ಜೊತೆ ಸಂಬಂಧ ಮತ್ತು ಬೆದರಿಕೆಗಳ ಮುಸ್ಲಿಂ ಕುಟುಂಬದ ಆರೋಪಗಳನ್ನು ಆತ ನಿರಾಕರಿಸಿದ್ದಾನೆ. ಐಪೀಸಿಯ ವಿವಿಧ ಕಲಮ್ಗಳಡಿ ಮುಸ್ಲಿಂ ಕುಟುಂಬದ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು,ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪ್ರಕರಣದ ತನಿಖಾಧಿಕಾರಿ ವಿಶ್ವಜಿತ ತೋಮರ್ ತಿಳಿಸಿದರು.

 ದಾಳಿಕೋರರು ಆರೆಸ್ಸೆಸ್ ಜೊತೆಗೆ ಗುರುತಿಸಿಕೊಂಡಿದ್ದು,ಹಲವಾರು ತಿಂಗಳುಗಳಿಂದ ತಮಗೆ ಬೆದರಿಕೆಯನ್ನು ಒಡ್ಡುತ್ತಿದ್ದರು ಎಂಬ ಮುಸ್ಲಿಂ ಕುಟುಂಬದ ಆರೋಪಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,ತನಗೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ ಎಂದು ತೋಮರ್ ಉತ್ತರಿಸಿದರು. ಸಿಂಗ್ ಆರೆಸ್ಸೆಸ್ ಕಾರ್ಯಕರ್ತನಾಗಿದ್ದಾನೆ ಎಂದು ಹೇಳಿದ ಗ್ರಾಮದ ಮಾಜಿ ಸರಪಂಚ ಸುಭಾಷ ಚೌಧರಿ,ತನ್ನ ಕಿರಿಯ ಸೋದರ ಮುಸ್ಲಿಂ ಕುಟುಂಬದೊಂದಿಗೆ ನಿಕಟ ಸ್ನೇಹವನ್ನು ಹೊಂದಿದ್ದು,ಎರಡು ವಾರಗಳ ಹಿಂದೆ ಅವರಿಗೆ ಬೆದರಿಕೆಗಳನ್ನೊಡ್ಡುತ್ತಿರುವ ಬಗ್ಗೆ ಆತ ಸಿಂಗ್ ಜೊತೆ ಜಗಳವಾಡಿದ್ದ. ಪೋಲಿಸರ ಹಸ್ತಕ್ಷೇಪದ ಬಳಿಕ ವಿವಾದ ಇತ್ಯರ್ಥಗೊಂಡಿತ್ತು ಎಂದು ತಿಳಿಸಿದರು.
 
ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹೊಡೆಯುತ್ತಿದ್ದಾರೆ ಎಂದು ಸಂತ್ರಸ್ತರು ತನಗೆ ದೂರವಾಣಿ ಮೂಲಕ ತಿಳಿಸಿದ್ದರು. ಇಬ್ಬರು ಕಾಂಗ್ರೆಸ್ ನಾಯಕರೊಂದಿಗೆ ತಾನು ಗ್ರಾಮಕ್ಕೆ ತೆರಳಿ ಒತ್ತಾಯಿಸಿದ ಬಳಿಕವಷ್ಟೇ ಪೊಲಿಸರು ದೂರನ್ನು ದಾಖಲಿಸಿಕೊಂಡಿದ್ದರು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿರುವ ಎಹ್ತೆಶಾಮ್ ಹಾಶ್ಮಿ ತಿಳಿಸಿದರು.
 
ಮುಸ್ಲಿಂ ಕುಟುಂಬದ ವಿರುದ್ಧ ಎಫ್ಐಆರ್ ಆಧಾರರಹಿತವಾಗಿದೆ. ಸಂತ್ರಸ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಮೂಲಕ ಆರೋಪಿಗಳನ್ನು ರಕ್ಷಿಸಲು ಇಂದೋರ ಪೊಲೀಸರು ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ ಎಂದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News