ರುಜಿರಾ ಬ್ಯಾನರ್ಜಿಗೆ ವಿಚಾರಣಾ ನ್ಯಾಯಾಲಯದಲ್ಲಿ ಹಾಜರಾತಿಯಿಂದ ವಿನಾಯಿತಿ ನೀಡಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ಅ.11: ಪಶ್ಚಿಮ ಬಂಗಾಳದಲ್ಲಿಯ ಕಲ್ಲಿದ್ದಲು ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ)ವು ದಾಖಲಿಸಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ ಬ್ಯಾನರ್ಜಿಯವರ ಪತ್ನಿ ರುಜಿರಾ ಬ್ಯಾನರ್ಜಿಗೆ ವಿಚಾರಣಾ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವುದರಿಂದ ಸದ್ಯಕ್ಕೆ ವಿನಾಯಿತಿಯನ್ನು ನೀಡಿದೆ.
ಅ.12ರಂದು ತನ್ನೆದುರು ಖುದ್ದಾಗಿ ಹಾಜರಾಗುವಂತೆ ದಿಲ್ಲಿಯ ವಿಚಾರಣಾ ನ್ಯಾಯಾಲಯವು ರುಜಿರಾ ಬ್ಯಾನರ್ಜಿಯವರಿಗೆ ನಿರ್ದೇಶ ನೀಡಿತ್ತು. ಪ್ರಕರಣದಲ್ಲಿ ಈ.ಡಿ.ಸಲ್ಲಿಸಿರುವ ದೂರನ್ನು ಮತ್ತು ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯವು ಖುದ್ದಾಗಿ ಹಾಜರಾಗುವಂತೆ ತನಗೆ ಆದೇಶಿಸಿರುವುದನ್ನು ಪ್ರಶ್ನಿಸಿರುವ ರುಜಿರಾರ ಅರ್ಜಿಯ ವಿಚಾರಣೆಯನ್ನು ತಾನು ಅ.29ರಂದು ನಡೆಸುವುದಾಗಿ ಉಚ್ಚ ನ್ಯಾಯಾಲಯವು ತಿಳಿಸಿತು.
ರುಜಿರಾರ ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆತ್ತಿಕೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಆಗ್ರಹಿಸಿದ ಬಳಿಕ ನ್ಯಾ.ಯೋಗೇಶ ಖನ್ನಾ ಅವರು ಅ.29ಕ್ಕೆ ವಿಚಾರಣೆಯನ್ನು ನಿಗದಿಪಡಿಸಿ,ರುಜಿರಾ ಬ್ಯಾನರ್ಜಿಯವರಿಗೆ ಅಲ್ಲಿಯವರೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದರು.
ರುಜಿರಾ ಬ್ಯಾನರ್ಜಿ ಸೆ.30ರಂದು ವರ್ಚುವಲ್ ಮೂಲಕ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅದೊಂದು ದಿನದ ಮಟ್ಟಿಗೆ ವಿನಾಯಿತಿ ನೀಡಿದ್ದ ನ್ಯಾಯಾಲಯವು ಅ.12ರಂದು ಖುದ್ದಾಗಿ ಹಾಜರಾಗುವಂತೆ ಆದೇಶಿಸಿತ್ತು.
ಪ.ಬಂಗಾಳದ ಕುನುಸ್ತೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿಯ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿ.ನ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ರೂ.ಗಳ ಕಲ್ಲಿದ್ದಲು ಕಳ್ಳತನ ಹಗರಣದಲ್ಲಿ ಸಿಬಿಐ 2020 ನವಂಬರ್ನಲ್ಲಿ ದಾಖಲಿಸಿದ್ದ ಎಫ್ಐಆರ್ನ ಆಧಾರದಲ್ಲಿ ಈ.ಡಿ.ಅಭಿಷೇಕ ಮುಖರ್ಜಿ ಮತ್ತು ರುಜಿರಾ ಬ್ಯಾನರ್ಜಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.