ವ್ಯಕ್ತಿಯ ಸ್ವಾತಂತ್ರ್ಯ ಪವಿತ್ರ, ಜಾಮೀನು ಅರ್ಜಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು: ಸುಪ್ರೀಂ ಕೋರ್ಟ್

Update: 2021-10-12 10:26 GMT

ಹೊಸದಿಲ್ಲಿ,ಅ.12: ವ್ಯಕ್ತಿಯ ಸ್ವಾತಂತ್ರ್ಯವು ಪವಿತ್ರವಾಗಿದೆ ಮತ್ತು ಜಾಮೀನು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಸಾಧ್ಯವಾದಷ್ಟು ಶೀಘ್ರ ವಿಚಾರಣೆಗೆತ್ತಿಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಬಂಧನ ಪೂರ್ವ ಮತ್ತು ಬಂಧನ ನಂತರದ ಜಾಮೀನು ಅರ್ಜಿಗಳಿಗೆ ಕಾಲಮಿತಿಯನ್ನು ವಿಧಿಸುವಂತಿಲ್ಲ, ಅದರೆ ಇಂತಹ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎನ್ನುವುದು ಕನಿಷ್ಠ ನಿರೀಕ್ಷೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ ಮತ್ತು ಎ.ಎಸ್. ಓಕಾ ಅವರ ಪೀಠವು ತಿಳಿಸಿತು.

ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲಿ ಬಾಕಿಯಿರುವ ತನ್ನ ಜಾಮೀನು ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ನ್ಯಾಯಾಲಯವನ್ನು ಆಗ್ರಹಿಸಿ ಆರೋಪಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಪಂಜಾಬಿನ ಪಟಿಯಾಳಾ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸದ್ರಿ ವ್ಯಕ್ತಿಯನ್ನು ಈ ವರ್ಷದ ಮಾರ್ಚ್ ನಲ್ಲಿ ಬಂಧಿಸಲಾಗಿತ್ತು. ತನ್ನ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದ ಬಳಿಕ ಆತ ಜು.7ರಂದು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದ.

ವಿಷಯವನ್ನು ನ್ಯಾಯಾಲಯದ ಮುಂದೆ ಹಲವಾರು ಬಾರಿ ಪಟ್ಟಿ ಮಾಡಲಾಗಿತ್ತಾದರೂ ವಿಚಾರಣೆಯನ್ನು ನಡೆಸಲಾಗಿಲ್ಲ ಎಂದು ಅರ್ಜಿದಾರನ ಪರ ವಕೀಲರು ಪೀಠಕ್ಕೆ ತಿಳಿಸಿದರು.

‘ಈ ಬಗ್ಗೆ ನಾವು ಸದ್ಯಕ್ಕೆ ಪರಿಶೀಲಿಸುವುದಿಲ್ಲ, ಆದರೆ ವ್ಯಕ್ತಿಯ ಸ್ವಾತಂತ್ರ್ಯವು ಪವಿತ್ರವಾಗಿದೆ ಮತ್ತು ಬಂಧನದ ಮುನ್ನ ಅಥವಾ ಬಂಧನದ ನಂತರವಾಗಿರಲಿ, ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರೆ ಸಾಧ್ಯವಾದಷ್ಟು ಶೀಘ್ರ ಅದರ ವಿಚಾರಣೆ ನಡೆಯಬೇಕು ಎಂದು ನಾವು ನಿರೀಕ್ಷಿಸುತ್ತೇವೆ ’ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News