ನನಗೆ ಗರಿಷ್ಠ ರೋಗನಿರೋಧಕ ಶಕ್ತಿಯಿದೆ, ಕೋವಿಡ್ ಲಸಿಕೆ ಪಡೆಯುವುದಿಲ್ಲ ಎಂದ ಬ್ರೆಝಿಲ್ ಅಧ್ಯಕ್ಷ

Update: 2021-10-14 10:36 GMT
ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ (File Photo: PTI)

ಬ್ರೆಸಿಲಿಯಾ: ಕೋವಿಡ್ ಲಸಿಕೆ ಪಡೆಯಲಿರುವ ಕೊನೆಯ ಬ್ರೆಝಿಲ್ ನಾಗರಿಕ ತಾವಾಗುವುದಾಗಿ ಈ ಹಿಂದೆ ಹೇಳಿಕೊಂಡಿದ್ದ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಅವರು ತಾವು ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಈಗ ದೃಢಪಡಿಸಿದ್ದಾರೆ.

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿಭಾಯಿಸಿದ ರೀತಿ ಹಾಗೂ ಸ್ವತಃ ತಾವೇ ಕೋವಿಡ್ ಸೋಂಕಿಗೆ ತುತ್ತಾಗಿದ್ದರೂ ಅದರ ಗಂಭೀರತೆಯನ್ನು ಗೌಣವಾಗಿಸಿದ್ದಕ್ಕೆ ಸಾಕಷ್ಟು ಟೀಕೆಗಳನ್ನು ಬೊಲ್ಸೊನಾರೋ ಎದುರಿಸಿದ್ದರು.

"ನಾನು ಲಸಿಕೆ ಪಡೆಯದೇ ಇರಲು ನಿರ್ಧರಿಸಿದ್ದೇನೆ. ನಾನು ಹೊಸ ಅಧ್ಯಯನಗಳನ್ನು ನೋಡುತ್ತಿದ್ದೇನೆ. ನನಗೆ ಗರಿಷ್ಠ ರೋಗನಿರೋಧಕ ಶಕ್ತಿಯಿದೆ, ಮತ್ತೆ ಕೋವಿಡ್ ಲಸಿಕೆ ಏಕೆ ಬೇಕು,'' ಎಂದು ಮಂಗಳವಾರ ರಾತ್ರಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ 66 ವರ್ಷದ ಬೊಲ್ಸೊನಾರೋ ಹೇಳಿದ್ದಾರೆ.

"ಅದು ಲಾಟರಿಯಲ್ಲಿ ಎರಡು ಗೆಲ್ಲಲು 10 ರಿಯಾಸ್ ಮೇಲೆ ಬೆಟ್ಟಿಂಗ್ ಮಾಡಿದ್ದಕ್ಕೆ ಸಮ,'' ಎಂದು ಹೇಳಿದರು.

ಫೈಝರ್ ಕಂಪೆನಿಯ ಕೋವಿಡ್ ಲಸಿಕೆ ತನ್ನ ಅಡ್ಡ ಪರಿಣಾಮಗಳಿಂದಾಗಿ ಜನರನ್ನು ಮೊಸಳೆಗಳನ್ನಾಗಿಸುತ್ತದೆ ಎಂದು ಈ ಹಿಂದೆ ಹೇಳಿ ಅವರು ವಿವಾದಕ್ಕೀಡಾಗಿದ್ದರು.

"ನನಗೆ ಎಲ್ಲಕ್ಕಿಂತಲೂ ಸ್ವಾತಂತ್ರ್ಯ ಮಿಗಿಲು, ಒಬ್ಬ ನಾಗರಿಕನಿಗೆ ಕೋವಿಡ್ ಲಸಿಕೆ ಬೇಡವೆಂದಿದ್ದರೆ ಅದು ಆತನ ಹಕ್ಕು, ಹಾಗೂ ಆ ವಿಷಯ ಅಲ್ಲಿಗೇ ಮುಗಿಯಿತು,'' ಎಂದು ಅವರು ಹೇಳಿದರು.

ಬ್ರೆಝಿಲ್ ದೇಶದ ಸುಮಾರು 213 ಮಿಲಿಯನ್ ಜನಸಂಖ್ಯೆಯ ಪೈಕಿ 100 ಮಿಲಿಯನ್ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದರೆ, 50 ಮಿಲಿಯನ್ ಜನರು ಒಂದು ಡೋಸ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News