2022ರಲ್ಲಿ ಗೋವಾ,2024 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಪಿ. ಚಿದಂಬರಂ

Update: 2021-10-14 12:31 GMT

ಪಣಜಿ: ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹಾಗೂ  2024 ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಪಕ್ಷ ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಗೋವಾ ಚುನಾವಣಾ ಉಸ್ತುವಾರಿಯಾಗಿರುವ ಚಿದಂಬರಂ ಪಣಜಿಯಲ್ಲಿ ರಾಜ್ಯ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

"ಇತಿಹಾಸದಿಂದ ಒಂದು ವಿಷಯ ಹೇಳುತ್ತೇನೆ ... ಯಾರು ಗೋವಾವನ್ನು ಗೆಲ್ಲುತ್ತಾರೋ ಅವರು ದಿಲ್ಲಿಯನ್ನು ಗೆಲ್ಲುತ್ತಾರೆ. 2007 ರಲ್ಲಿ ನಾವು ಗೋವಾವನ್ನು ಗೆದ್ದೆವು ... 2009 ರಲ್ಲಿ ನಾವು ದಿಲ್ಲಿಯನ್ನು ಗೆದ್ದೆವು. 2012 ರಲ್ಲಿ ನಾವು ದುರದೃಷ್ಟವಶಾತ್ ಗೋವಾವನ್ನು ಕಳೆದುಕೊಂಡೆವು. 2014 ರಲ್ಲಿ ನಾವು ದಿಲ್ಲಿಯನ್ನು ಕಳೆದುಕೊಂಡಿದ್ದೇವೆ. 2017 ರಲ್ಲಿ ನೀವು ( ಪಕ್ಷದ ಕಾರ್ಯಕರ್ತರನ್ನು ಉಲ್ಲೇಖಿಸಿ) ಗೋವಾವನ್ನು ಗೆದ್ದುಕೊಟ್ಟಿದ್ದೀರಿ., ಆದರೆ ನಮ್ಮ ಶಾಸಕರು ಗೋವಾವನ್ನು ಕಳೆದುಕೊಂಡರು. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿತು"ಎಂದು ಅವರು ಹೇಳಿದರು,

"ಈ ಬಾರಿ ತಮ್ಮ ಪಕ್ಷವು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಹಾಗೂ 2022 ರಲ್ಲಿ ಗೋವಾ ಹಾಗೂ  2024 ರಲ್ಲಿ ದಿಲ್ಲಿಯನ್ನು ಗೆಲ್ಲುತ್ತದೆ" ಎಂದು ಚಿದಂಬರಂ ಹೇಳಿದರು.

2017ರಲ್ಲಿ ನಡೆದಿದ್ದ  ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸದಸ್ಯ ಬಲದ ಸದನದಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಆ ಸಮಯದಲ್ಲಿ ಬಿಜೆಪಿ ಕೆಲವು ಪ್ರಾದೇಶಿಕ ಸಂಘಟನೆಗಳು ಹಾಗೂ  ಸ್ವತಂತ್ರ ಶಾಸಕರೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News