ಪಿಸಿಸಿ ಮುಖ್ಯಸ್ಥರಾಗಿ ಮುಂದುವರಿಯಲಿರುವ ನವಜ್ಯೋತ್ ಸಿಂಗ್ ಸಿಧು

Update: 2021-10-15 03:42 GMT

ಚಂಡೀಗಢ: ಮತ್ತೊಂದು ಸುತ್ತಿನ ಮಾತುಕತೆ ಬಳಿಕ ನವಜ್ಯೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಪ್ರಕಟಿಸಿದ್ದಾರೆ.

ಹೊಸ ಸಿಎಂ ಚರಣ್‌ ಜೀತ್ ಸಿಂಗ್ ಚನ್ನಿ ರಾಜ್ಯ ಸಚಿವ ಸಂಪುಟ ರಚಿಸಿ, ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಸಿಧು ಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮುಂದುವರಿದಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಹರೀಶ್ ರಾವತ್ ಗುರುವಾರ ಸಿಧು ಜತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.

"ಕೇಂದ್ರ ನಾಯಕತ್ವದಿಂದ ಸೂಚನೆ ಸ್ಪಷ್ಟವಾಗಿದ್ದು, ಸಿಧು ಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಮತ್ತು ಸಂಘಟನಾತ್ಮಕ ಸಂರಚನೆ ವ್ಯವಸ್ಥೆ ಮಾಡುವರು. ಅಧಿಕೃತ ಘೋಷಣೆ ಶುಕ್ರವಾರ ನಡೆಯಲಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 28ರಂದು ಹುದ್ದೆ ತ್ಯಜಿಸಿದ್ದ ಸಿಧು, ಪಂಜಾಬ್ ಭವಿಷ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಸಂದೇಶವನ್ನು ಅಗ್ರ ನಾಯಕರಿಗೆ ರವಾನಿಸಿದ್ದರು. ಆದರೆ 'ಗಾಂಧಿ'ಗಳ ಪ್ರತಿಯೊಂದು ನಿರ್ಧಾರಕ್ಕೂ ತಲೆಬಾಗುವುದಾಗಿ ಹೇಳಿದ್ದರು.

"ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಮತ್ತು ರಾಹುಲ್ ಕಾಂಗ್ರೆಸ್ ಮತ್ತು ಪಂಜಾಬ್‌ನ ಹಿರತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಂಡರೂ ಆ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಆರಂಭದಿಂದಲೇ ಅವರನ್ನು ಸವೋಚ್ಛ ಎಂದು ನಾನು ಪರಿಗಣಿಸುತ್ತಾ ಬಂದಿದ್ದೇನೆ" ಎಂದು ವಿವರಿಸಿದರು.

ಸಿಧು ಅವರ ಅಧಿಕೃತ ರಾಜೀನಾಮೆಯ ಸ್ಥಿತಿಗತಿ ಬಗ್ಗೆ ಟ್ವೀಟ್ ಮಾಡಿರುವ ರಾವತ್, "ಪ್ರತಿ ವಿಷಯದ ಬಗ್ಗೆ ಕೂಡಾ ಕೆಲವೊಂದು ವಿಧಿವಿಧಾನ ಅನುಸರಿಸಬೇಕಾಗುತ್ತದೆ. ನಮಗೆ ನಮ್ಮದೇ ಆದ ವ್ಯವಸ್ಥೆ ಇದೆ. ನೀವು ನಾಳೆಯ ವರೆಗೆ ಕಾಯಬೇಕು" ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸಿಧು, ಸೋನಿಯಾಗಾಂಧಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News