ನನ್ನ ಪೋಷಕರು ಝೂ ನಲ್ಲಿರುವ ಪ್ರಾಣಿಗಳಲ್ಲ:ಫೋಟೋಗ್ರಾಫರ್ ಜೊತೆ ಹೋದ ಅರೋಗ್ಯ ಸಚಿವರ ವಿರುದ್ಧ ಮನಮೋಹನ್ ಪುತ್ರಿ ಅಸಮಾಧಾನ

Update: 2021-10-15 14:11 GMT
Photo: Twitter

ಹೊಸದಿಲ್ಲಿ: ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲೆಂದು ತೆರಳಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ತಮ್ಮೊಂದಿಗೆ ಛಾಯಾಗ್ರಾಹಕರೊಬ್ಬರನ್ನೂ ಕರೆದೊಯ್ದಿರುವುದು  ಬಹಳಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಕೊಠಡಿಯಲ್ಲಿ ಸಚಿವರು ಬಹಳಷ್ಟು ಕೃಶರಾಗಿರುವ ಮನಮೋಹನ್ ಸಿಂಗ್ ಅವರ ಜತೆಗೆ ಫೋಟೋ ಕೂಡ  ತೆಗೆಸಿಕೊಂಡಿರುವುದು ಟೀಕೆಗೆ ಒಳಗಾಗಿದೆ.

ರೋಗಿಯ ಕುಟುಂಬದ ಮಂದಿಯ ಅನುಮತಿಯಿಲ್ಲದೆ ಛಾಯಾಗ್ರಾಹಕರೊಬ್ಬರನ್ನು ಹೇಗೆ ಅನುಮತಿಸಲಾಗಿದೆ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಹಲವು ಕಾಂಗ್ರೆಸ್ ನಾಯಕರೂ ಇದನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಸಿಂಗ್ ಅವರು ಡೆಂಗ್ಯು ಜ್ವರದಿಂದ ಬಳಲುತ್ತಿದ್ದಾರೆನ್ನಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಆದರೆ ವಯಸ್ಸಿನ ಕಾರಣದಿಂದ ಅವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಅವರ ಪುತ್ರಿ ದಾಮನ್ ಸಿಂಗ್ ತಿಳಿಸಿದ್ದಾರೆ.

"ಆರೋಗ್ಯ ಸಚಿವರು ಆಸ್ಪತ್ರೆಗೆ ಬಂದು ತಂದೆಯ ಆರೋಗ್ಯ ವಿಚಾರಿಸಿದ್ದಾರೆ.  ಆದರೆ ಆ ಸಂದರ್ಭ ಛಾಯಾಚಿತ್ರ ತೆಗೆಸಿಕೊಳ್ಳಲು ಕುಟುಂಬದ ಯಾವುದೇ ಸದಸ್ಯರಿಗೆ ಇಷ್ಟವಿರಲಿಲ್ಲ. ಛಾಯಾಗ್ರಾಹಕರು ಕೊಠಡಿಯಿಂದ ತೆರಳಬೇಕೆಂದು  ಹಾಗೂ ಸೋಂಕಿನ ಅಪಾಯವಿದೆಯೆಂದು  ನನ್ನ ತಾಯಿ ಕೇಳಿಕೊಂಡರೂ ಅದನ್ನು ನಿರ್ಲಕ್ಷ್ಯಿಸಲಾಯಿತು," ಎಂದು ಅವರು ಹೇಳಿದ್ದಾರೆ.

"ಸಚಿವರ ಜೊತೆಗೆ ಫೋಟೊಗ್ರಾಫರ್‌ ತೆರಳಿದ್ದು ನನ್ನ ತಾಯಿಗೆ ತುಂಬಾ ಬೇಸರ ತಂದಿದೆ. ಅವರು ಫೋಟೊಗ್ರಾಫರ್‌ ನನ್ನು ಹೊರಗಡೆ ಕಳುಹಿಸಿ ಎಂದು ಹೇಳಿದರೂ ಅವರ ಮಾತಿಗೆ ಯಾರೂ ಕಿವಿಗೊಡಲಿಲ್ಲ. ಅವರಿಗೆ ತುಂಬಾ ದುಃಖವಾಗಿದೆ. ನನ್ನ ತಂದೆತಾಯಿ ಕಷ್ಟದ ಸನ್ನಿವೇಶ ಎದುರಿಸುತ್ತಿದ್ದಾರೆ. ಅವರು ಹಿರಿಯ ವ್ಯಕ್ತಿಗಳು, ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ" ಎಂದು theprint.in ಗೆ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News