ಬಾಹ್ಯಾಕಾಶದ ಅಂತಾರಾಷ್ಟ್ರೀಯ ಸಹಕಾರಕ್ಕೆ ಬದ್ಧ: ಚೀನಾ ಪುನರುಚ್ಚಾರ

Update: 2021-10-15 17:06 GMT

ಬೀಜಿಂಗ್, ಅ.15: ಬಾಹ್ಯಾಕಾಶದ ಶಾಂತಿಯುತ ಬಳಕೆಯ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಹಕಾರಕ್ಕೆ ಬದ್ಧವಾಗಿರುವುದಾಗಿ ಚೀನಾ ಶುಕ್ರವಾರ ಪುನರುಚ್ಚರಿಸಿದೆ. ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವುದು ಮನುಕುಲದ ಸಮಾನ ಉದ್ದೇಶವಾಗಿದೆ ಮತ್ತು ಚೀನಾವು ಮಾನವಸಹಿತ ಬಾಹ್ಯಾಕಾಶ ಯಾತ್ರೆಯಲ್ಲಿ ಅಂತರಾಷ್ಟ್ರೀಯ ಸಹಕಾರ ಮತ್ತು ವಿನಿಮಯದ ಸಂಪೂರ್ಣ ಆಶಯಗಳಿಗೆ ಬದ್ಧವಾಗಿರುತ್ತದೆ ಮತ್ತು ಪ್ರಪಂಚದ ನಿಗೂಢತೆಗಳ ಅನ್ವೇಷಣೆಯಲ್ಲಿ ರಚನಾತ್ಮಕ ಕೊಡುಗೆ ನೀಡಲಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ. ಚೀನಾದ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯನ್ನೊಳಗೊಂಡ ತಂಡದ ಬಾಹ್ಯಾಕಾಶ ಯಾನಕ್ಕೆ ಶನಿವಾರ ಮಧ್ಯರಾತ್ರಿಯ ಬಳಿಕ ವಾಯವ್ಯ ಪ್ರಾಂತದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಚಾಲನೆ ದೊರಕಲಿದೆ. ಈ ತಂಡ ಚೀನಾ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ವಾಸ್ತವ್ಯ ಹೂಡಿ ಅಲ್ಲಿ ನಿರ್ಮಾಣ ಕಾರ್ಯವನ್ನು ಮುಂದುವರಿಸಲಿದ್ದಾರೆ. ಚೀನಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲೇ ಅತ್ಯಂತ ಸುದೀರ್ಘಾವಧಿಯ ಮಾನವಸಹಿತ ಅಂತರಿಕ್ಷ ಯಾತ್ರೆ ಇದಾಗಲಿದೆ.

ಇವರಲ್ಲಿ ಪೈಲಟ್ ಝಾಯಿ ಝಿಗಾಂಗ್ (55 ವರ್ಷ) ಮತ್ತು 41 ವರ್ಷದ ಮಹಿಳೆ ವ್ಯಾಂಗ್ ಯಾಪಿಂಗ್ ಈ ಹಿಂದೆಯೂ ಚೀನಾದ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡ ಅನುಭವಿಗಳು. ಯುರೋಪ್ನ ಬಾಹ್ಯಾಕಾಶ ಏಜೆನ್ಸಿಯಲ್ಲಿ ತರಬೇತಿ ಪಡೆದಿರುವ ಯಿ ಗ್ವಾಂಗ್ಫು ಇದೇ ಮೊದಲ ಬಾರಿ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾರ್ಯಕ್ರಮಕ್ಕೆ ಪೂರಕವಾಗಿ 3 ಬಾರಿ ಬಾಹ್ಯಾಕಾಶದಲ್ಲಿ ನಡೆದಾಡಿ ವಿವಿಧ ಸಂಶೋಧನೆ ನಡೆಸಲಿದ್ದಾರೆ. ಚೀನಾ ಸೇನೆಯ ನೇತೃತ್ವದಲ್ಲಿ ನಡೆಯುವ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಮುಂದಿನ 2 ವರ್ಷದಲ್ಲಿ ಹಲವು ಅಂತರಿಕ್ಷ ಯಾನ ನಡೆಯಲಿದೆ. ನಿರ್ಮಾಣ ಕಾರ್ಯ ಪೂರ್ಣಗೊಂಡು ಕಾರ್ಯಾಚರಣೆಗೆ ಸಿದ್ಧಗೊಂಡಾಗ ಅಂತರಿಕ್ಷ ನಿಲ್ದಾಣ ಸುಮಾರು 66 ಟನ್ ತೂಕವಿರಲಿದೆ. 2003ರಿಂದ ಚೀನಾವು 7 ಮಾನವಸಹಿತ ಅಂತರಿಕ್ಷ ಯಾನದಲ್ಲಿ 14 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು ಈ ಹಿಂದಿನ ಸೋವಿಯತ್ ಯೂನಿಯನ್ ಮತ್ತು ಅಮೆರಿಕದ ಬಳಿಕ, ತನ್ನದೇ ಬಾಹ್ಯಾಕಾಶ ಯಾತ್ರೆಯಲ್ಲಿ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಿದ 3ನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಚೀನಾಕ್ಕೆ ಜಾಗವಿಲ್ಲ !

ಅಮೆರಿಕ ನೇತೃತ್ವದಲ್ಲಿ ಬಾಹ್ಯಾಕಾಶದಲ್ಲಿ ನಿರ್ಮಿಸಲಾಗಿರುವ ಬಾಹ್ಯಾಕಾಶ ನಿಲ್ದಾಣದಿಂದ ಚೀನಾವನ್ನು ಹೊರಗಿಡಲಾಗಿದೆ. ಚೀನಾ ತನ್ನ ಬಾಹ್ಯಾಕಾಶ ಯೋಜನೆಯ ಬಗ್ಗೆ ರಹಸ್ಯ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಆಕ್ಷೇಪದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಮ ಕೈಗೊಂಡಿರುವ ಚೀನಾ, ತನ್ನದೇ ಆದ ನಿಲ್ದಾಣವನ್ನು ಬಾಹ್ಯಾಕಾಶದಲ್ಲಿ ನಿರ್ಮಿಸುತ್ತಿದೆ. ಅಮೆರಿಕ ಮತ್ತು ಚೀನಾದ ಮಧ್ಯೆ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಸಹಕಾರ ಏರ್ಪಡಬೇಕಾದರೆ ಅಮೆರಿಕದ ಸಂಸತ್ತಿನ ಅನುಮೋದನೆಯ ಅಗತ್ಯವಿದೆ. ಆದರೆ ಚೀನಾವು ಫ್ರಾನ್ಸ್, ಸ್ವೀಡನ್, ರಶ್ಯಾ ಮತ್ತು ಇಟಲಿಯ ಬಾಹ್ಯಾಕಾಶ ತಜ್ಞರ ಜತೆ ಸಹಕರಿಸುತ್ತಿದೆ. ತನ್ನ ಸ್ವಂತ ಬಾಹ್ಯಾಕಾಶ ನಿಲ್ದಾಣ ಪೂರ್ಣಗೊಂಡ ಬಳಿಕ ಇಲ್ಲಿ ಇತರ ದೇಶಗಳ ಅಂತರಿಕ್ಷ ಯಾನಿಗಳಿಗೆ ಅವಕಾಶ ನೀಡಲಾಗುವುದು ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News