ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿ ಐಪಿಎಲ್ ಚಾಂಪಿಯನ್

Update: 2021-10-15 18:15 GMT
Photo: Indian Premier League 

ದುಬೈ, ಆ.15: ಆರಂಭಿಕ ಬ್ಯಾಟ್ಸ್ ಮನ್ ಎಫ್ ಡು ಪ್ಲೆಸಿಸ್ ಆಕರ್ಷಕ ಅರ್ಧಶತಕ ಹಾಗೂ ಶಾರ್ದೂಲ್ ಠಾಕೂರ್ ನೇತೃತ್ವದ ಬೌಲರ್ ಗಳ ಶಿಸ್ತುಬದ್ದ ಬೌಲಿಂಗ್  ಸಹಾಯದಿಂದ ಚೆನ್ನೈಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯವನ್ನು 27 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು ಈ ಹಿಂದೆ 2010,2011 ಹಾಗೂ 2018ರಲ್ಲಿ ಐಪಿಎಲ್ ಜಯಿಸಿತ್ತು. 2012ರಲ್ಲಿ ಚೆನ್ನೈಗೆ ಹ್ಯಾಟ್ರಿಕ್ ಪ್ರಶಸ್ತಿ ನಿರಾಕರಿಸಿದ್ದ ಕೆಕೆಆರ್ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿರುವುದನ್ನು ಬಿಟ್ಟರೆ ಉಳಿದೆಲ್ಲಾ ವಿಚಾರದಲ್ಲಿ ವಿಫಲವಾಯಿತು. ಮೂರನೇ ಬಾರಿ ಪ್ರಶಸ್ತಿ ಗೆಲ್ಲುವುದರಿಂದ ವಂಚಿತವಾಯಿತು.

ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿದ್ದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಕೆಕೆಆರ್ ತಂಡಕ್ಕೆ ಶುಭಮನ್ ಗಿಲ್(51) ಹಾಗೂ ವೆಂಕಟೇಶ್ ಅಯ್ಯರ್(50)ಮೊದಲ ವಿಕೆಟ್ ನಲ್ಲಿ 10.4 ಓವರ್ ಗಳಲ್ಲಿ 91 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಕೆಕೆಆರ್ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಗೆ ಪರೇಡ್ ನಡೆಸಿದರು.  ನಿತೀಶ್ ರಾಣಾ(0) ಹಾಗೂ ಶಾಕಿಬ್ ಅಲ್ ಹಸನ್(0) ಖಾತೆ ತೆರೆಯಲು ವಿಫಲರಾದರು. ಸುನೀಲ್ ನರೇನ್(2), ನಾಯಕ ಇಯಾನ್ ಮೋರ್ಗನ್(4), ರಾಹುಲ್ ತ್ರಿಪಾಠಿ(2) ಹಾಗೂ ದಿನೇಶ್ ಕಾರ್ತಿಕ್(9) ಬೇಗನೆ ವಿಕೆಟ್ ಕೈಚೆಲ್ಲಿದರು.

ಬಾಲಂಗೋಚಿಗಳಾದ ಫರ್ಗುಸನ್(18) ಹಾಗೂ ಶಿವಂಮಾವಿ 20 ರನ್ ಗಳಿಸಿದರು.

ಚೆನ್ನೈ ಪರವಾಗಿ ವೇಗದ ಬೌಲರ್ ಶಾರ್ದೂಲ್ ಠಾಕೂರ್(3-38) ಯಶಸ್ವಿ ಬೌಲರ್ ಎನಿಸಿಕೊಂಡರು. ಜೋಶ್ ಹೇಝಲ್ ವುಡ್ (2-29) ಹಾಗೂ ರವೀಂದ್ರ ಜಡೇಜ(2-37)ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News